ಮೈಸೂರು

ಹಿಂಗಾರು ಮಳೆ ಕೈಹಿಡಿದಿರುವ ಹಿನ್ನೆಲೆ : ಮೈದುಂಬಿಕೊಳ್ಳುತ್ತಿವೆ ಜಲಾಶಯಗಳು

ಮೈಸೂರು, ಸೆ. 12:- ಕಾವೇರಿ ಜಲಾನಯನ ಪ್ರದೇಶದಲ್ಲಿ ಹಿಂಗಾರು ಮಳೆ ಕೈಹಿಡಿದಿರುವ ಹಿನ್ನೆಲೆಯಲ್ಲಿ ಕೃಷ್ಣರಾಜ ಸಾಗರ ಸೇರಿದಂತೆ ಕಬಿನಿ, ಹಾರಂಗಿ ಜಲಾಶಯಗಳು ಮೈದುಂಬಿಕೊಳ್ಳುತ್ತಿವೆ.

ಕಳೆದ 15 ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಈ ಭಾಗದ ಜಲಾಶಯಗಳ ನೀರಿನ ಮಟ್ಟ ಹೆಚ್ಚಳಗೊಂಡಿದೆ. ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ. ಸತತ 3 ವರ್ಷಗಳಿಂದ ಬರ ಪರಿಸ್ಥಿತಿ ಎದುರಿಸಿದ ಈ ಭಾಗದ ರೈತರು ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಜೀವನದಿ ಕಾವೇರಿ ತುಂಬಿಹರಿಯುತ್ತಿದ್ದು, ಪ್ರಮುಖ ಜಲಾಶಯವಾದ ಕೃಷ್ಣರಾಜಸಾಗರ ಅಣೆಕಟ್ಟು 104 ಅಡಿಗೂ ಅಧಿಕ ಮಟ್ಟ ತಲುಪಿದೆ. ಜಲಾಶಯಕ್ಕೆ 10,025 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ 5,892 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಕೆರೆಕಟ್ಟೆಗಳಿಗೂ ನೀರು ತುಂಬುತ್ತಿದ್ದು, ಜೀವಕಳೆ ಬಂದಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ ಕೆಆರ್‍ಎಸ್‍ನಲ್ಲಿ 89.80 ಅಡಿಗಳಷ್ಟೇ ನೀರಿತ್ತು. ಪ್ರಸ್ತುತ 21.84ಟಿಎಂಸಿ ಅಡಿಗಳ ನೀರಿನ ಸಂಗ್ರವಿದೆ. ಕಳೆದ ವರ್ಷ ಇದೇ ದಿನ 11.42 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು.

ಹಾರಂಗಿ ಜಲಾಶಯ ಭರ್ತಿಯಾಗಲು ಕೇವಲ 2 ಅಡಿ ಮಾತ್ರ ಬಾಕಿ ಇದೆ. ಗರಿಷ್ಠ ಮಟ್ಟ 2,859 ಅಡಿಗಳಿದ್ದು, ಪ್ರಸ್ತುತ 2,857.27 ಅಡಿ ನೀರು ಸಂಗ್ರಹವಾಗಿದೆ. ಒಳಹರಿವಿನ ಪ್ರಮಾಣ 1430 ಕ್ಯೂಸೆಕ್ ಇದ್ದು, 1500 ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ. ಕಬಿನಿ ಜಲಾಶಯದ ಗರಿಷ್ಠ ಮಟ್ಟ 2284 ಅಡಿಗಳಿದ್ದು, ಇಂದಿನ ಮಟ್ಟ 2,278.94 ಅಡಿಗಳಷ್ಟಿದೆ. ಜಲಾಶಯ ಭರ್ತಿಗೆ ಇನ್ನು 5 ಅಡಿಗಳಷ್ಟೆ ಬಾಕಿ ಇದೆ. ಜಲಾನಯನ ಪ್ರದೇಶವಾದ ವೈನಾಡಿನಲ್ಲಿ ಸತತವಾಗಿ ಮಳೆಯಾಗುತ್ತಿದ್ದರಿಂದ ಒಳಹರಿವಿನ ಪ್ರಮಾಣ ಹೆಚ್ಚಾಗಿತ್ತು. ಆದರೆ ಕಳೆದ 2 ದಿನಗಳಿಂದ ಮಳೆ ಕಡಿಮೆಯಾಗಿದ್ದು, ಈಗ ಕೇವಲ 2684 ಕ್ಯೂಸೆಕ್ ಒಳಹರಿವು ಇದೆ. 2000 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಹಾಸನ ಜಿಲ್ಲೆ ಗೊರೂರಿನ ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ 2922 ಅಡಿಯಾಗಿದ್ದು, ಸದ್ಯ 2890 ಅಡಿ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ 2886 ಅಡಿಗಳಷ್ಟೇ ನೀರು ಇತ್ತು. ಜಲಾಶಯಕ್ಕೆ 2301 ಕ್ಯೂಸೆಕ್ ನೀರು ಬರುತ್ತಿದ್ದು, 3880 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: