ಪ್ರಮುಖ ಸುದ್ದಿಮೈಸೂರು

ಮಕ್ಕಳ ಬಿಸಿಯೂಟ ಕಸಿದಿರುವುದು ಅಕ್ಷಮ್ಯ ಅಪರಾಧ : ಡಾ.ಕಲ್ಲಡ್ಕ ಪ್ರಭಾಕರ್ ಭಟ್

ಮೈಸೂರು,ಸೆ.13:- ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ಮಕ್ಕಳ ವಿಚಾರದಲ್ಲಿ ಆಟವಾಡಬಾರದು. ಸರ್ಕಾರ ಮೂಕಾಂಬಿಕಾ ದೇವಸ್ಥಾನದ ನಿಧಿಯಿಂದ ಮಕ್ಕಳ ಬಿಸಿಯೂಟಕ್ಕೆ ಬರುತ್ತಿದ್ದ ಅಕ್ಕಿಯನ್ನು ನಿಲ್ಲಿಸಿರುವುದು ಅಕ್ಷಮ್ಯ ಅಪರಾಧ ಎಂದು ಆರ್ ಎಸ್ ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ತಿಳಿಸಿದರು.

ಭಿಕ್ಷಾಂದೇಹಿ ಎಂಬ ಸಾಮಾಜಿಕ ಅಭಿಯಾನದ ಮೂಲಕ ಹಲವಾರು ನಾಗರಿಕರಿಂದ 555ಕ್ಕೂ ಅಧಿಕ ಅಕ್ಕಿ ಚೀಲಗಳನ್ನು ಸಂಗ್ರಹಿಸಲಾಗಿದ್ದು,ಮೈಸೂರಿನ ಕೋಟೆ ಆಂಜನೇಯ ದೇವಸ್ಥಾನದ ಬಳಿ ಶಾಲಾ ಆಡಳಿತಕ್ಕೆಹಸ್ತಾಂತರಿಸುವ ಸಂದರ್ಭ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿದರು. ಎಲ್ಲರಿಗೂ ಭಾಗ್ಯ ಕೊಡಬೇಕಾಗಿರುವುದು ಸರ್ಕಾರದ ಕರ್ತವ್ಯ. ಆದರೆ ಸರ್ಕಾರ ಚಿಕ್ಕ ಮಕ್ಕಳಿಗೆ ಅನ್ನ ನೀಡುವುದನ್ನೇ ನಿಲ್ಲಿಸಿದೆ. ಇದು ಅಕ್ಷಮ್ಯ ಅಪರಾಧ. ದೇವಸ್ಥಾನದಲ್ಲಿ ಭಕ್ತರು ನೀಡಿದ್ದ ಒಂದು ನಿಧಿಯಲ್ಲಿ ಬೇರೆಯವರಿಗೆ ನೀಡುವ ಕುರಿತೂ ಅನುಮತಿಯಿದ್ದು, ಶಾಲೆಗೆ ಬಿಸಿಯೂಟಕ್ಕೆ ಅಕ್ಕಿ ನೀಡುತ್ತಿತ್ತು. ಅದರಲ್ಲೂ ಶಿಕ್ಷಣದ ಪಾತ್ರ ಸಮಾಜದಲ್ಲಿ ದೊಡ್ಡದು. ಶಿಕ್ಷಣಕ್ಕಾಗಿ ಬರುವ ಮಕ್ಕಳ ಹೊಟ್ಟೆಯ ಮೇಲೆ ಹೊಡೆಯುವ ಮೂಲಕ ತಪ್ಪಿನ ಹೆಜ್ಜೆಯನ್ನಿರಿಸಿದೆ ಇದನ್ನು ಯಾರೂ ಒಪ್ಪಲ್ಲ ಎಂದರು. ಇದೇ ವೇಳೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ನನಗೆ ಗೌರಿಯಾಗಲಿ ಅವರ ತಂದೆಯಾಗಲಿ ಯಾರು ಎಂದು ತಿಳಿದಿಲ್ಲ. ಗೌರಿ ಒಂದು ವಿಚಾರಗಳನ್ನು ಇಟ್ಟುಕೊಂಡು ಬರೆಯುತ್ತಿದ್ದು, ಅದಕ್ಕೂ ನನಗೂ ಸಂಬಂಧ ಇಲ್ಲ. ಗೌರಿ ನನ್ನ ಬಗ್ಗೆ ಬರೆದ ವಿಚಾರಕ್ಕೂ ನನಗೂ ಸಂಬಂಧವಿಲ್ಲ. ಯಾರೇ ಆಗಲಿ ಹಿಂಸೆಯನ್ನು ಸಹಿಸಲ್ಲ. ಅದರಲ್ಲೂ  ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಿಂಸೆಯನ್ನು ಸಹಿಸಲ್ಲ. ಎಲ್ಲರಿಗೂ ಬರೆಯುವ ಸ್ವಾತಂತ್ರ್ಯವಿದೆ. ಆದರೆ ಚಾರಿತ್ರ್ಯ ಹನನವಾಗುವ ರೀತಿಯಲ್ಲಿ ಯಾರೂ ಬರೆಯಬಾರದು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ವೈಚಾರಿಕ ಹೋರಾಟವನ್ನು ನಡೆಸುತ್ತದೆಯೇ ಹೊರತು ದೈಹಿಕ ಹೋರಾಟವನ್ನು ಒಪ್ಪುವುದಿಲ್ಲ. ನಮ್ಮದು ಎಡವೂ ಅಲ್ಲ ಬಲವೂ ಅಲ್ಲ, ಕೇವಲ ರಾಷ್ಟ್ರೀಯ ವಾದವೊಂದೇ.ದೇಶದ ,ಜನರ ಹಿತಕ್ಕಾಗಿ ನಾವು ಏನು ಬೇಕಿದ್ದರೂ ಮಾಡುತ್ತೇವೆ. ಬುದ್ಧಿ ಜೀವಿಗಳು ದೇಶದ ಹಿತ ಮರೆತು ವಿದೇಶ ಸಂಸ್ಕೃತಿ ಬೆಳೆಸಲು ಹೋಗುತ್ತಾರೆ ಎಂದರು.

ಈ ಸಂದರ್ಭ ಮಾಜಿ ಸಚಿವ ಸ್.ಎ.ರಾಮದಾಸ್, ಸೇಫ್ ವ್ಹೀಲ್ ಅಧ್ಯಕ್ಷ ಪ್ರಶಾಂತ್ ಸೇರಿದಂತೆ ಬಿಜೆಪಿಯ ಪ್ರಮುಖರು, ನಾಗರಿಕರು  ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: