ಪ್ರಮುಖ ಸುದ್ದಿ

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಉದ್ಘಾಟನೆಯಾದರೂ ನೀಗಿಲ್ಲ ನೀರಿನ ಸಮಸ್ಯೆ

ಪ್ರಮುಖ ಸುದ್ದಿ, ಗುಂಡ್ಲುಪೇಟೆ, ಸೆ.೧೩: ತಾಲೂಕಿನ ಎಲ್ಲಾ ೧೩೪ ಗ್ರಾಮಗಳಿಗೂ ನದಿಮೂಲದಿಂದ ಕುಡಿಯುವ ನೀರು ಸರಬರಾಜು ಮಾಡುವ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಉದ್ಘಾಟಿಸಿ ೧೫ ದಿನಗಳು ಕಳೆದರೂ ಅಪೂರ್ಣ ಕಾಮಗಾರಿಯಿಂದ ಇನ್ನೂ ಉzಶಿತ ಗುರಿಮುಟ್ಟಿಲ್ಲದ ಪರಿಣಾಮವಾಗಿ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ.
ಇತ್ತೀಚೆಗೆ ಮಳೆ ಬೀಳುತ್ತಿದ್ದರೂ ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಿಲ್ಲ. ತಾಲೂಕಿನ ಎಲ್ಲಾ ಗ್ರಾಮಗಳಿಗೂ ನದಿ ಮೂಲದಿಂದ ನೀರು ಸರಬರಾಜು ಮಾಡುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಆ.೩೦ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಉದ್ಘಾಟಿಸಿದ್ದರು. ಆದರೂ ಇನ್ನೂ ತಾಲೂಕಿನ ಎಲ್ಲಾ ಗ್ರಾಮಗಳಿಗೂ ಸರಬರಾಜು ಮಾಡಲಾಗುತ್ತಿಲ್ಲ. ತಾಲೂಕಿನ ಕಗ್ಗಳ, ಶಿಂಡನಪುರ, ಕೊಡಸೋಗೆ, ಬೊಮ್ಮಲಾಪುರ, ಚಿಕ್ಕತುಪ್ಪೂರು, ಬನ್ನೀತಾಳಪುರ, ಇಂಗಲವಾಡಿ ಸೇರಿದಂತೆ ಹಿಂದಿನಿಂದಲೂ ಕುಡಿಯುವ ನೀರಿನ ಸಮಸ್ಯೆಗಳನ್ನು ಎದುರಿಸುತ್ತಿರುವ ಬಹುತೇಕ ಗ್ರಾಮಗಳಲ್ಲಿ ಸಮಸ್ಯೆ ತೀವ್ರವಾಗಿದೆ.
ಗ್ರಾಮೀಣ ಪ್ರದೇಶದ ಜನರು ತಮ್ಮ ಗೃಹಬಳಕೆಯ ಹಾಗೂ ಜಾನುವಾರುಗಳಿಗೆ ಅಗತ್ಯವಾದ ನೀರು ಸಂಗ್ರಹಿಸಲು ಹಗಲಿರುಳು ಶ್ರಮಿಸಬೇಕಾಗಿದೆ. ಮಹಿಳೆಯರು ತಲೆಯ ಮೇಲೆ ಬಿಂದಿಗೆಗಳನ್ನು ಹೊತ್ತು ಸುಮಾರು ೨ ಕಿಲೋಮೀಟರ್ ಅಂತರದಿಂದ ನೀರು ತರಬೇಕಾಗಿದೆ. ಮಕ್ಕಳು ಬೈಸಿಕಲ್ ಮೇಲೆ ಹಾಗೂ ಯುವಕರು ಬೈಕುಗಳ ಮೇಲೆ ಬಿಂದಿಗೆಗಳನ್ನು ಹೇರಿಕೊಂಡು ಸಾಗಾಣೆ ಮಾಡಬೇಕಾಗಿದೆ.
ಕಳೆದ ಮೂರು ವರ್ಷಗಳ ಹಿಂದೆ ಪ್ರಾರಂಭಿಸಲಾದ ತಾಲೂಕಿನ ಜನತೆಯ ಬಹು ನಿರೀಕ್ಷೆಯ ಯೋಜನೆಯ ಜಾರಿಯಲ್ಲಿ ಉಂಟಾಗಿರುವ ಅಡೆತಡೆಗಳನ್ನು ನಿವಾರಿಸಿ ಎಲ್ಲಾ ಗ್ರಾಮಗಳಿಗೂ ಸಮರ್ಪಕ ನೀರು ಪೂರೈಸುವಂತಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ. (ವರದಿ ಬಿ.ಎಂ)

Leave a Reply

comments

Related Articles

error: