ಪ್ರಮುಖ ಸುದ್ದಿಮೈಸೂರು

ಸಿರಿಧಾನ್ಯಗಳನ್ನು ಆಹಾರದಲ್ಲಿ ಅಳವಡಿಸಿಕೊಂಡು ಮಧುಮೇಹ ನಿಯಂತ್ರಿಸಿ: ಪುಷ್ಪಾ ಅಮರನಾಥ

puspa-web-2ಸಿರಿಧಾನ್ಯಗಳು ಮನುಷ್ಯನ ಉತ್ತಮ ಆಹಾರವಾಗಿದ್ದು, ಆಯುರ್ವೇದ ಜೀವನ ಪದ್ಧತಿ ಮತ್ತು ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಮಧುಮೇಹವನ್ನು ನಿಯಂತ್ರಿಸಬಹುದು ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಪುಷ್ಪಾ ಅಮರನಾಥ್ ಹೇಳಿದರು.

ಜೆ.ಎಸ್.ಎಸ್. ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಆಯುರ್ವೇದ ದೇವತೆ ಧನ್ವಂತರಿ ಜಯಂತಿಯ ಪ್ರಯುಕ್ತ ನಡೆದ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಅಂಗವಾಗಿ ಆಯೋಜಿಸಲಾದ ಆರೋಗ್ಯಕ್ಕಾಗಿ ಆಹಾರ-ಸಕ್ಕರೆ ಕಾಯಿಲೆಯ ಅರಿವು ಮತ್ತು ಚಿಕಿತ್ಸೆ ಕಾರ್ಯಕ್ರಮವನ್ನು ಉದ್ಘಾಟಿಸಿ ಪುಷ್ಪಾ ಅಮರನಾಥ್ ಅವರು ಮಾತನಾಡಿದರು. ಮನುಷ್ಯನ ಹಲವು ರೋಗಗಳಿಗೆ ಆಹಾರ ರೂಪದಲ್ಲಿ ದೇಸಿ ಭತ್ತ ಹಾಗೂ ಸಿರಿಧಾನ್ಯಗಳು ಔಷಧವಾಗುತ್ತದೆ. ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸಿರಿಧಾನ್ಯ ಉತ್ತಮ ಆಹಾರ ಎಂದರು. ಇತ್ತೀಚಿನ ದಿನಗಳಲ್ಲಿ ಮನುಷ್ಯನನ್ನು ಹಲವು ರೋಗಗಳು ಕಾಡುತ್ತಿವೆ. ಮಧುಮೇಹ ಜನರನ್ನು ಆತಂಕಕ್ಕೆ ದೂಡಿದೆ. ಆಧುನಿಕ ರೋಗವೆಂದೇ ಇದನ್ನು ಹೇಳಿದರೂ ವೇದದ ಕಾಲದಲ್ಲಿ ಕೂಡ ಇದರ ಪ್ರಸ್ತಾಪವಿದೆ. ಆಯುರ್ವೇದದ ಧನ್ವಂತರಿಯು ಈ ರೋಗದ ಲಕ್ಷಣವನ್ನು ವಿವರಿಸಿ, ಇದಕ್ಕೆ ಜೀವನಶೈಲಿ ಮತ್ತು ಆಹಾರವೇ ಔಷಧಿ ಎಂದು ಹೇಳಿದ್ದಾರೆ. ಅದರಿಂದ ಮಧುಮೇಹ ತಡೆಯಲು ಜೀವನಶೈಲಿಯನ್ನು ಸರಿಯಾಗಿ ಅನುಸರಿಸಬೇಕಿದೆ ಎಂದರು.

ಜೆ.ಎಸ್.ಎಸ್ ಮಹಾವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಮಹೇಶ್ ಮಾತನಾಡಿ ಸಕ್ಕರೆ ಕಾಯಿಲೆ ಎಂದಾಕ್ಷಣ ಹೆದರುವ ಅವಶ್ಯಕತೆ ಇಲ್ಲ. ಭಯ, ಆತಂಕ ಅನಗತ್ಯ. ಇದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಆಯುರ್ವೇದದಲ್ಲಿ ಹಲವು ಮಾರ್ಗಗಳಿವೆ ಎಂದರು.

ವೈದ್ಯಕೀಯ ಅಧೀಕ್ಷಕ ಡಾ.ಶಿವಪ್ರಸಾದ್ ಹುಡೇದ ಮಾತನಾಡಿ ಸಿರಿಧಾನ್ಯದ ಒಡಲಲ್ಲಿ ಹತ್ತಾರು ಪೋಷಕಾಂಶಗಳಿವೆ. ಸಿರಿಧಾನ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್, ವಿಟಮಿನ್ ಹಾಗೂ ಖನಿಜಗಳನ್ನು ಹೊಂದಿವೆ. ಜನರು ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಂಪಕ್ಕಿ ಹಾಗೂ ಸಿರಿಧಾನ್ಯಗಳನ್ನು ಬಳಸಬೇಕು ಎಂದು ಸಲಹೆ ಮಾಡಿದರು.

ಬಳಿಕ ನಡೆದ ಆಹಾರ ಸ್ಪರ್ಧೆಯಲ್ಲಿ ಮಧುಮೇಹ ಮತ್ತು ಆಯುರ್ವೇದದ ಕುರಿತು ಅರಿವು ಮೂಡಿಸುವ ದೇಸಿ ಅಕ್ಕಿ, ಸಿರಿಧಾನ್ಯ ಬಳಸಿದ ತಿನಿಸುಗಳನ್ನು ಪ್ರದರ್ಶಿಸಲಾಯಿತು.

ಪ್ರಾಂಶುಪಾಲ ಡಾ.ಲಕ್ಷ್ಮೀಶ ಉಪಾಧ್ಯ, ಭತ್ತ ಉಳಿಸಿ ಆಂದೋಲನ ಸಂಯೋಜಕಿ ಸೀಮಾ.ಜಿ.ಪ್ರಸಾದ್, ಡಾ.ಕೃಷ್ಣಪ್ರಸಾದ್ ಉಪಸ್ಥಿತರಿದ್ದರು.

Leave a Reply

comments

Related Articles

error: