ದೇಶಪ್ರಮುಖ ಸುದ್ದಿವಿದೇಶ

ಮಾನವ ಕುಲದ ಉಳಿವಿಗಾಗಿ ಸಂಪೂರ್ಣ ಅಣ್ವಸ್ತ್ರ ನಾಶ: ವಿಶ್ವಸಂಸ್ಥೆ ಸಮಿತಿಯಿಂದ ಗೊತ್ತುವಳಿ ಅಂಗೀಕಾರ

ನ್ಯೂಯಾರ್ಕ್: ಅಣ್ವಸ್ತ್ರ ರಾಷ್ಟ್ರಗಳ ತೀವ್ರ ವಿರೋಧವಿದ್ದರೂ ಮಾನವ ಕುಲಕ್ಕೇ ವಿನಾಶಕಾರಿಯಾಗಿರುವ ಅಣ್ವಸ್ತ್ರಗಳ ಸಂಪೂರ್ಣ ನಾಶಕ್ಕಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಸಮಿತಿಯು ಗೊತ್ತುವಳಿ ಅಂಗೀಕರಿಸಿದೆ.

ಆಸ್ಟ್ರಿಯ, ಐರ್ಲೆಂಡ್, ಮೆಕ್ಸಿಕೊ, ನೈಜೀರಿಯ, ದಕ್ಷಿಣ ಅಫ್ರಿಕ, ಬ್ರೆಜಿಲ್ ದೇಶಗಳು ಮಂಡಿಸಿದ ಈ ಗೊತ್ತುವಳಿಯ ಪರವಾಗಿ 123 ಮತಗಳು ಲಭಿಸಿದ್ದರೆ, ಗೊತ್ತುವಳಿ ವಿರೋಧಿಸಿ 38 ಮತಗಳು ಬಂದಿವೆ. 16 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಹಾಜರಿರಲಿಲ್ಲ. ಈ ಗೊತ್ತುವಳಿ ಮಂಡನೆಯಾಗದಂತೆ ತಡೆಯಲು ಕಳೆದ ಕೆಲವು ವಾರಗಳಿಂದ ಅಣ್ವಸ್ತ್ರ ರಾಷ್ಟ್ರಗಳು ಪ್ರಯತ್ನಿಸುತ್ತಿದ್ದವು.

ಮಾನವ ಕುಲದ ಅಳಿವು ಉಳಿವಿನ ಪ್ರಶ್ನೆಯಾಗಿರುವ ಅಣ್ವಸ್ತ್ರಗಳನ್ನು ಸಂಪೂರ್ಣ ನಾಶಪಡಿಸಬೇಕು. ಆಗ ಮಾತ್ರ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ. ಇದು ಸಾಧ್ಯವಾಗದಿದ್ದರೆ ವಿನಾಶ ನಿ‍ಶ್ಚಿತ ಎಂದು ಈ ರಾಷ್ಟ್ರಗಳು ಅಭಿಪ್ರಾಯಪಟ್ಟಿವೆ.

ಗೊತ್ತುವಳಿ ವಿರುದ್ಧ ಜಪಾನ್ ಮತ !

ಆಶ್ಚರ್ಯವೆಂದರೆ ಆಧುನಿಕ ಜಗತ್ತಿನ ಮೊದಲ ಅಣ್ವಸ್ತ್ರ ದಾಳಿಗೆ ಈಡಾದ ಜಪಾನ್ ದೇಶವು ಈ ಗೊತ್ತುವಳಿಯ ವಿರುದ್ಧ ಮತ ಚಲಾಯಿಸಿದೆ. ಅಮೆರಿಕದ ಮಿತ್ರರಾಷ್ಟ್ರಗಳಾದ ದಕ್ಷಿಣ ಕೊರಿಯಾ ಮತ್ತು ಜಪಾನ್‍ಗೆ ಉತ್ತರ ಕೊರಿಯಾದಿಂದ ಅಣ್ವಸ್ತ್ರ ಬೆದರಿಕೆ ಇರುವುದೇ ಜಪಾನ್‍ನ ಈ ನಡೆಗೆ ಕಾರಣ ಎಂದು ವಿಶ್ಲೇಶಿಸಲಾಗಿದೆ.

ಅಣ್ವಸ್ತ್ರಗಳ ಸಂಬಂಧಿತ ಯಾವುದೇ ವಿಶ್ವಮಟ್ಟದ ಮಾತುಕತೆ, ಒಪ್ಪಂದ ಅಥವಾ ಗೊತ್ತುವಳಿಗೆಳು ಈಗಾಗಲೇ ಜಾರಿಯಲ್ಲಿರುವ “ಸಮಗ್ರ ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದ” (ಎನ್‍ಪಿಟಿ) ವ್ಯಾಪ್ತಿಯಲ್ಲೇ ನಡೆಯಬೇಕು ಎಂದು ಪ್ರಸ್ತುತ ಗೊತ್ತುವಳಿಯನ್ನು ವಿರೋಧಿಸುತ್ತಿರುವ ರಾಷ್ಟ್ರಗಳು ವಾದಿಸುತ್ತಿವೆ.

“ಗೊತ್ತುವಳಿ ಅಂಗೀಕಾರ ಮಾಡಿರುವುದು ಒಂದು ಐತಿಹಾಸಿಕ ಹೆಜ್ಜೆ” ಎಂದು ದಶಕಗಳಿಂದ ಅಣ್ವಸ್ತ್ರಮುಕ್ತ ರಾಷ್ಟ್ರದ ಕನಸು ಕಂಡು ಅದರ ಜಾರಿಗಾಗಿ ಶ್ರಮಿಸುತ್ತಿರುವ ಬೀಟ್ರೀಸ್ ಫಿಹ್ನ್ ಹೇಳಿದ್ದಾರೆ. ಅವರ ಪ್ರಕಾರ, “ಈ ಗೊತ್ತುವಳಿ ಅಥವಾ ಒಪ್ಪಂದದಿಂದ ಎಲ್ಲ ಅಣ್ವಸ್ತ್ರಗಳನ್ನು ನಾಶಪಡಿಸಲು ಸಾಧ್ಯವಾಗದೇ ಇರಬಹುದು. ಆದರೆ, ಇದರಿಂದ ಪ್ರಬಲ ಅಂತಾರಾಷ್ಟ್ರೀಯ ಕಾನೂನು ಜಾರಿಗೆ ಬಂದು ಅಣ್ವಸ್ತ್ರ ತಯಾರಿಸಿರುವ ಮತ್ತು ತಯಾರಿಯಲ್ಲಿರುವ ರಾಷ್ಟ್ರಗಳ ಆಟಾಟೋಪಕ್ಕೆ ನಿಯಂತ್ರಣ ಸಾಧ್ಯವಾಗಲಿದೆ. ಇದಲ್ಲದೆ ಅಣ್ವಸ್ತ್ರ ರಾಷ್ಟ್ರಗಳನ್ನು ದೂಷಣೆ ಮಾಡುತ್ತಾ ಕೂರುವ ಬದಲು ಅಣ್ವಸ್ತ್ರ ವಿರೋಧಿಸುವ ರಾಷ್ಟ್ರಗಳು ಮುಂದಿನ ಕಾರ್ಯತಂತ್ರ ರೂಪಿಸಲು ಒಂದು ಅಧಿಕೃತ ವೇದಿಕೆ ದೊರೆತಂತಾಗಲಿದೆ.”

Leave a Reply

comments

Related Articles

error: