ಕರ್ನಾಟಕ

ಕರಿಮೆಣಸು ಕಳವು ಪ್ರಕರಣ : ಕಾವೇರಿಸೇನೆ ವಿರುದ್ಧ ಅಸಮಾಧಾನ

ಮಡಿಕೇರಿ ಸೆ.14 : ಮಾಲ್ದಾರೆ ಬಾಡಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿರುವ ಕರಿಮೆಣಸು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೆ ಆರೋಪಿಯನ್ನು ಬಂಧಿಸಿ, 104 ಚೀಲ ಕರಿಮೆಣಸನ್ನು ವಶಪಡಿಸಿಕೊಳ್ಳಲಾಗಿದೆ. ಆದರು, ಪ್ರಕರಣದ ನೆಪವೊಡ್ಡಿ ಕಾವೇರಿಸೇನೆ ಸಂಘಟನೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿರುವುದು ಖಂಡನೀಯವೆಂದು ಸಹಕಾರ ಸಂಘದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸದಸ್ಯರಾದ ವಿಷ್ಣುಬೆಳ್ಯಪ್ಪ, ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ 7345 ಕೆ.ಜಿ. ಕರಿಮೆಣಸನ್ನು ಅಪರಾಧ ಪತ್ತೆದಳ ಈಗಾಗಲೆ ವಶಪಡಿಸಿಕೊಂಡಿದೆ. ಗೊಬ್ಬರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಪ್ರಗತಿಯಲ್ಲಿದ್ದು, ಸಧ್ಯದಲ್ಲೆ ವರದಿ ಬರಲಿದೆ. ಅವ್ಯವಹಾರದ ವಿರುದ್ಧ ಇಷ್ಟೆಲ್ಲ ಕ್ರಮಗಳನ್ನು ಕೈಗೊಂಡಿದ್ದರು ಸೆ.20 ರಂದು ಪ್ರತಿಭಟನೆ ನಡೆಸುವುದಾಗಿ ಕಾವೇರಿಸೇನೆ ಹೇಳಿಕೆ  ನೀಡಿರುವುದು ದುರುದ್ದೇಶಪೂರಿತವೆಂದು ಟೀಕಿಸಿದರು. ಸಹಕಾರ ಸಂಘದ ಹೆಸರಿಗೆ ಕಳಂಕ ತರುವ ಪ್ರಯತ್ನವನ್ನು ಕಾವೇರಿಸೇನೆ ಮಾಡುತ್ತಿದ್ದು, ಇಂತಹ ಪ್ರಯತ್ನದಿಂದ ಸಂಘಟನೆ ಹಿಂದೆ ಸರಿಯದಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ವಿಷ್ಣು ಬೆಳ್ಯಪ್ಪ ಎಚ್ಚರಿಕೆ ನೀಡಿದರು.

ಮತ್ತೊಬ್ಬ ಸದಸ್ಯ ಸಜಿ ಥೋಮಸ್ ಮಾತನಾಡಿ, ಕಾವೇರಿಸೇನೆಯ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಅಧ್ಯಕ್ಷರ ಮೇಲಿನ ವೈಯಕ್ತಿಕ ದ್ವೇಷದಿಂದ ದುರುದ್ದೇಶಪೂರಿತ ಹೇಳಿಕೆಗಳನ್ನು ನೀಡುತ್ತಿದೆ ಎಂದು ಆರೋಪಿಸಿದರು. ಜಿಲ್ಲೆಯ ಇತರ ಕೆಲವು ಸಹಕಾರ ಸಂಘಗಳಲ್ಲಿಯೂ ಅವ್ಯವಹಾರ ನಡೆದಿದೆ. ಇತ್ತೀಚೆಗೆ ವಿಯೆಟ್ನಾಂನಿಂದ ಆಮದಾಗಿರುವ ಕರಿಮೆಣಸು ವ್ಯವಹಾರ ಬೆಳಕಿಗೆ ಬಂದಿದೆ. ಆದರೆ, ಈ ಪ್ರಕರಣಗಳ ಬಗ್ಗೆ ಹೋರಾಟ ನಡೆಸದ ಕಾವೇರಿಸೇನೆ ಕೇವಲ ಮಾಲ್ದಾರೆ ಸಹಕಾರ ಸಂಘದ ವಿರುದ್ಧ ಮಾತ್ರ ನಿರಂತರವಾಗಿ ಯಾಕೆ ಪ್ರತಿಭಟನೆಯ ಎಚ್ಚರಿಕೆ ನೀಡುತ್ತಿದೆ ಎಂದು ಪ್ರಶ್ನಿಸಿದರು. ಸಂಘದ ಅಧ್ಯಕ್ಷರ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದ್ದು, ಅವರ ಆಡಳಿತ ವೈಖರಿ ಪಾರದರ್ಶಕವಾಗಿದೆ ಎಂದು ಸಜಿ ಥೋಮಸ್ ಸ್ಪಷ್ಟಪಡಿಸಿದರು. ಈ ಹಿಂದೆ ಹೈಟೆನ್ಶನ್ ವಿದ್ಯುತ್ ಮಾರ್ಗದ ವಿರುದ್ಧ ಮತ್ತು ಗಾಳಿಬೀಡಿನ ಅಕೇಶಿಯಾ ಮರಗಳ ಸಾಗಾಟದ ವಿರುದ್ಧ ಪ್ರತಿಭಟನೆ ನಡೆಸಿದ್ದ ಕಾವೇರಿಸೇನೆ ಸಂಘಟನೆ ನಂತರದ ದಿನಗಳಲ್ಲಿ ಮೌನ ವಹಿಸಿದ್ದನ್ನು ಗಮನಿಸಿದರೆ ಸಂಶಯಗಳು ಮೂಡುತ್ತದೆ ಎಂದು ಅವರು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ನಿಸಾರ್ ಅಹಮ್ಮದ್, ರಾಧಾಕೃಷ್ಣ, ಬಿ.ಎಸ್. ದೇವಯ್ಯ ಹಾಗೂ ರವಿ ಕುಶಾಲಪ್ಪ ಉಪಸ್ಥಿತರಿದ್ದರು. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: