ಕರ್ನಾಟಕ

ಸದಾ ಕ್ರಿಯಾಶೀಲರಾಗಿರಲು ಕ್ರೀಡೆ ಸಹಕಾರಿ : ಲತಾ ರವಿಕುಮಾರ್

ರಾಜ್ಯ(ತುಮಕೂರು), ಸೆ. 14:- ನಾವು ಸದಾ ಕ್ರಿಯಾಶೀಲರಾಗಿರಲು ಕ್ರೀಡೆ ಸಹಕಾರಿ ಎಂದು ಜಿ.ಪಂ. ಅಧ್ಯಕ್ಷೆ ಲತಾ ರವಿಕುಮಾರ್ ಅಭಿಪ್ರಾಯಪಟ್ಟರು.

ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಿವಿಧ ಕ್ರೀಡಾ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ 2017-18ನೇ ಸಾಲಿನ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ,  ಭಾಗವಹಿಸುವಿಕೆ ಮುಖ್ಯ.  ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ದೇಹಕ್ಕೆ ಉತ್ತಮ ಆರೋಗ್ಯ, ಮನಸ್ಸಿಗೆ ಉಲ್ಲಾಸ ದೊರೆಯುತ್ತದೆ. ಕ್ರೀಡಾಳುಗಳು ಆಟೋಟಗಳಲ್ಲಿ ಭಾಗವಹಿಸುವುದಲ್ಲದೆ,  ಪೌಷ್ಠಿಕ ಆಹಾರ, ಹೆಚ್ಚಾಗಿ ನೀರಿನ ಸೇವನೆ ಮಾಡಬೇಕು. ಇದರಿಂದ ಯಾವ ರೋಗವೂ ಬರುವುದಿಲ್ಲ ಎಂದು ಸಲಹೆ ನೀಡಿದ ಅವರು, ಕ್ರೀಡಾಪಟುಗಳು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಕ್ರೀಡಾ ಪ್ರತಿಭೆ ತೋರಬೇಕು ಎಂದರು. ಹಿರಿಯ ಕ್ರೀಡಾಪಟು ಇಸ್ಮಾಯಿಲ್ ಮಾತನಾಡಿ, 2 ದಿನಗಳ ಕಾಲ ನಡೆಯುವ ಈ ಕ್ರೀಡಾಕೂಟದಲ್ಲಿ ಪುರುಷರು ಹಾಗೂ  ಮಹಿಳೆಯರ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ. ಜಿಲ್ಲೆಯ ಎಲ್ಲಾ ತಾಲ್ಲೂಕಿನ ಕ್ರೀಡಾಳುಗಳು ಪಾಲ್ಗೊಂಡಿದ್ದಾರೆ. ರಾಜ್ಯಾದ್ಯಂತ ದಸರಾ ಕ್ರೀಡಾಕೂಟ ಜರುಗುತ್ತಿದ್ದು, ಜಿಲ್ಲಾ ಮಟ್ಟದ ಈ ಕ್ರೀಡೆಯಲ್ಲಿ ವಿಜೇತರಾದವರನ್ನು ವಿಭಾಗ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು ಎಂದು ಹೇಳಿದರು. ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್, (ಉದ್ದಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ತ್ರಿವಿಧ ಜಿಗಿತ, ಭರ್ಜಿ ಎಸೆತ, ಗುಂಡು ಎಸೆತ, ರಿಲೆ) ಕಬಡ್ಡಿ, ಖೋಖೋ, ವಾಲಿಬಾಲ್, ಫುಟ್‍ಬಾಲ್ ಹಾಗೂ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಗಳು ನಡೆಯಲಿವೆ.  ಎಲ್ಲಾ ವಯೋಮಿತಿಯ ಸ್ಪರ್ಧಿಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಹಿರಿಯ ಕ್ರೀಡಾಪಟು ಆನಂದ್, ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್‍ನ ಪ್ರಭಾಕರ್, ರೋಟರಿ ಸಂಸ್ಥೆಯ ಲಕ್ಷ್ಮಣ್ ಮತ್ತಿತರರು ಉಪಸ್ಥಿತರಿದ್ದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: