ಮೈಸೂರು

ದಸರಾ ಕರಕುಶಲ ಕಲಾಕೃತಿಗಳ ಸ್ಪರ್ಧೆ : ಕಲಾವಿದರು ಅರ್ಜಿ ಸಲ್ಲಿಸಲು ಇಂದು ಕಡೆ ದಿನ

ಮೈಸೂರು, ಸೆ.15 : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ದಸರಾ ಲಲಿತಕಲೆ ಮತ್ತು ಕರಕುಶಲ ಉಪಸಮಿತಿಯಿಂದ ಸೆ.21 ರಿಂದ 30 ರವರೆಗೆ ಕಲಾಕೃತಿಗಳ ಸ್ಪರ್ಧೆ ಹಾಗೂ ಪ್ರದರ್ಶನವನ್ನು ಆಯೋಜಿಸಲಾಗಿದೆ.

ಕರ್ನಾಟಕ ರಾಜ್ಯದ ಕಲಾಕೃತಿಗಳ ಸ್ಪರ್ಧೆ ಹಾಗೂ ಪ್ರದರ್ಶನಕ್ಕಾಗಿ ವೃತ್ತಿಪರ ಹಾಗೂ ಹವ್ಯಾಸಿ ಕಲಾವಿದರಿಂದ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್, ಅನ್ವಯಕಲೆ, ಛಾಯಾಚಿತ್ರ ಕಲೆ, ಸಾಂಪ್ರದಾಯಕ ಚಿತ್ರ ಕಲೆ, ಸಾಂಪ್ರದಾಯಕ ಶಿಲ್ಪಕಲೆ, ಕರಕುಶಲ ಕಲೆ ಹಾಗೂ ಇನ್ಲೇ ವಿಭಾಗಗಳಲ್ಲಿ ಕಲಾಕೃತಿಗಳನ್ನು ಆಹ್ವಾನಿಸಿದೆ.

ಸಾಂಪ್ರದಾಯಿಕ ಚಿತ್ರಕಲೆ, ಶಿಲ್ಪಕಲೆ, ಕರಕುಶಲ ಕಲೆ ಹಾಗೂ ಇನ್ಲೇ ಈ ವಿಭಾಗಗಳಲ್ಲಿ ಹವ್ಯಾಸಿ ಕಲಾವಿದರ ವಿಭಾಗವಿರುವುದಿಲ್ಲ. ಕಲಾಕೃತಿಗಳನ್ನು ಕಾರ್ಯದರ್ಶಿಗಳು, ಲಲಿತಕಲೆ ಮತ್ತು ಕರಕುಶಲ ಉಪಸಮಿತಿ ಹಾಗೂ ಆಡಳಿತಾಧಿಕಾರಿಗಳು, ಲಲಿತಕಲೆ ಮತ್ತು ಕರಕುಶಲ ಉಪಸಮಿತಿ, ಕಲಾಮಂದಿರದ ಮನೆಯಂಗಳ, ಮೈಸೂರು-570005 ಇಲ್ಲಿಗೆ ಸೆಪ್ಟೆಂಬರ್ 15 ರೊಳಗೆ ಸಲ್ಲಿಸಬೇಕು.

ಸೆಪ್ಟೆಂಬರ್ 16 ರಿಂದ 26 ರವರೆಗೆ ಕರ್ನಾಟಕದ ಆಹ್ವಾನಿತ 10 ಜನ ಮರದ ಶಿಲ್ಪ ಕಲಾವಿದರುಗಳಿಂದ ಕಲಾಮಂದಿರದ ಆವರಣದಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸಹಯೋಗದಲ್ಲಿ ಕಾಷ್ಠಕಲೆ ಶಿಬಿರವನ್ನು ಏರ್ಪಡಿಸಲಾಗಿದೆ.

ಸೆಪ್ಟೆಂಬರ್ 22 ರಿಂದ 26 ರವರೆಗೆ ಕರ್ನಾಟಕದ ಆಹ್ವಾನಿತ 10 ಜನ ಕಲಾವಿದರುಗಳಿಂದ ಕಲಾಮಂದಿರದ ಆವರಣದಲ್ಲಿ ಚಿತ್ರಕಲಾ ಶಿಬಿರವನ್ನು ಏರ್ಪಡಿಸಲಾಗಿದೆ.

ಸೆಪ್ಟೆಂಬರ್ 22 ರಿಂದ 26 ರವರೆಗೆ ಆಯ್ಕೆಯಾದ ಮೈಸೂರಿನ 5 ತಂಡಗಳಿಗೆ ಕರ್ನಾಟಕದ ಆಹ್ವಾನಿತ 10 ಜನ ಕಲಾವಿದರುಗಳಿಂದ ಕಲಾಮಂದಿರದ ಆವರಣದಲ್ಲಿ ಸೃಜನಾತ್ಮಕ ಕಲಾ ಶಿಬಿರವನ್ನು ಏರ್ಪಡಿಸಲಾಗಿದೆ.

ಈ ಶಿಬಿರದಲ್ಲಿ ಭಾಗವಹಿಸಲು ಆಸಕ್ತ ತಂಡಗಳಿಂದ, ತಾವು ತಯಾರಿಸುವ ಕೃತಿಯ ರೇಖಾಚಿತ್ರಗಳನ್ನು ಹಾಗೂ ಉಪಯೋಗಿಸುವ ಸಾಮಗ್ರಿಗಳ ವಿವರಗಳೊಂದಿಗೆ ಪ್ಲಾಸ್ಟಿಕ್ ಹೊರತುಪಡಿಸಿ ಬಿದಿರು, ಕಾಗದ, ನೈಸರ್ಗಿಕ ಸಾಮಾಗ್ರಿಗಳನ್ನು ಉಪಯೋಗಿಸಿಕೊಂಡು ಕಲ್ಪನೆಗೆ ತಕ್ಕಂತೆ ಕಲಾಕೃತಿ ರಚಿಸಲು ಅವಕಾಶ ಕಲ್ಪಿಸಲಾಗಿದೆ. ಸೆಪ್ಟೆಂಬರ್ 18 ರೊಳಗೆ ಲಲಿತಕಲೆ ಮತ್ತು ಕರಕುಶಲ ಉಪಸಮಿತಿ, ಕಲಾಮಂದಿರದ ಮನೆಯಂಗಳ, ಮೈಸೂರು-570005 ಇಲ್ಲಿಗೆ ಸಲ್ಲಿಸಬೇಕು.

ಸೆಪ್ಟೆಂಬರ್ 17 ರಂದು  ಜೆ.ಎಸ್.ಎಸ್. ಮಹಿಳಾ ವಸತಿ ನಿಲಯಗಳ ಸಮುಚ್ಫಯ ಸರಸ್ವತಿಪುರಂ ಇಲ್ಲಿ ಬೆಳಿಗ್ಗೆ 10 ರಿಂದ 12-30 ಗಂಟೆಯವರೆಗೆ ಮೂರು ವಿಭಾಗಗಳಲ್ಲಿ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಆಯೋಜಿಸಿದೆ. ಚಿತ್ರರಚನೆಗೆ ಬೇಕಾಗುವ ಬಣ್ಣ ಇತ್ಯಾದಿಗಳನ್ನು ಸ್ಪರ್ಧಿಗಳೇ ತರುವುದು ಡ್ರಾಯಿಂಗ್ ಶೀಟ್‍ಗಳನ್ನು ಮಾತ್ರ ಸಮಿತಿಯಿಂದ ಒದಗಿಸಲಾಗುವುದು. 1ನೇ ತರಗತಿಯಿಂದ 4ನೇ ತರಗತಿಯವರೆಗೆ, 5 ರಿಂದ 8ನೇ ತರಗತಿ ಮಕ್ಕಳಿಗೆ ಹಾಗೂ 9 ರಿಂದ 12ನೇ ತರಗತಿಯವರೆಗೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಸೆಪ್ಟೆಂಬರ್ 24 ರಂದು ಬೆಳಿಗ್ಗೆ 10 ರಿಂದ 12-30 ಗಂಟೆಯವರೆಗೆ ಸರಸ್ವತಿಪುರಂ ಜೆ.ಎಸ್.ಎಸ್. ಮಹಿಳಾ ವಸತಿ ನಿಲಯಗಳ ಸಮುಚ್ಫಯ ಕಾಲೇಜಿನಲ್ಲಿ ಮಹಿಳೆಯರಿಗೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳಿಗೆ ಎರಡು ವಿಭಾಗಗಳಲ್ಲಿ ರಂಗೋಲೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಇದಕ್ಕೆ ಬೇಕಾಗುವ ಸಾಮಗ್ರಿಗಳ ಕನಿಷ್ಠ ವೆಚ್ಚವನ್ನು ಭರಿಸಲಾಗುವುದು.

ಸೆಪ್ಟೆಂಬರ್ 27 ರಂದು ಕರ್ನಾಟಕ ಕಲಾ ಕ್ಷೇತ್ರದ ವಿವಿಧ ಮಾಧ್ಯಮಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 5 ಜನ ಕಲಾವಿದರಿಗೆ ಮೈಸೂರು ದಸರಾ ಕಲಾಗೌರವ, ಕಲಾಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.

ಆಸಕ್ತ ಕಲಾವಿದರು ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸುವವರು ಕಾರ್ಯದರ್ಶಿಗಳು, ಲಲಿತ ಕಲೆ ಮತ್ತು ಕರಕುಶಲ ಉಪ ಸಮಿತಿ ಮೈಸೂರು ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2438931 ನ್ನು ಸಂಪರ್ಕಿಸಬಹುದು.

(ಎನ್.ಬಿ)

Leave a Reply

comments

Related Articles

error: