ಮೈಸೂರು

ಸರಕು ಸಾಗಾಣಿಕೆ ತೆರಿಗೆಯು ಜನಸ್ನೇಹಿಯಾಗಿರಲಿದೆ : ಎಸ್.ರಾಜಕುಮಾರ್

ಸರಕು ಮತ್ತು ಸಾಗಾಣಿಕೆ ತೆರಿಗೆಯು ಸುಲಭ ಮತ್ತು ಜನಸ್ನೇಹಿಯಾಗಿದ್ದು ಲಾಭದಾಯಕವಾಗಿರಲಿದೆ ಎಂದು ಕೇಂದ್ರೀಯ ಅಬಕಾರಿ ಸೀಮಾ ಸುಂಕ ಮತ್ತು ಸೇವಾ ತೆರಿಗೆಯ ಮುಖ್ಯ ಆಯುಕ್ತ ಎಸ್.ರಾಜಕುಮಾರ್ ಹೇಳಿದರು.

ಮೈಸೂರಿನಲ್ಲಿ ಶುಕ್ರವಾರ  ಎಂ.ಎಸ್.ಎಂ.ಇ ಮಂತ್ರಾಲಯ, ಭಾರತ ಸರ್ಕಾರದ ರಾಷ್ಟ್ರೀಯ ಸಣ್ಣಕೈಗಾರಿಕೆಗಳ ನಿಗಮ ಕೇಂದ್ರೀಯ ಅಬಕಾರಿ, ಸೀಮಾ ಸುಂಕ ಮತ್ತು ಸೇವಾ ತೆರಿಗೆ, ವಿತ್ತ ಮಂತ್ರಾಲಯ, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಮೈಸೂರು ಕೈಗಾರಿಕೆಗಳ ಸಂಘದ ವತಿಯಿಂದ ನಡೆದ ಸರಕು ಸೇವಾ ತೆರಿಗೆ ಹಾಗೂ ಎನ್.ಎಸ್.ಐ.ಸಿ ಹಣಕಾಸು ಸೌಲಭ್ಯ ಕೇಂದ್ರದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಸರಕು-ಸಾಗಣೆ ತೆರಿಗೆಯು ಏಪ್ರೀಲ್ ನಿಂದ ಜಾರಿಗೆ ಬರಲಿದೆ. ಇದರಿಂದ ಉದ್ಯಮಿಗಳಿಗೆ ಲಾಭವಾಗಲಿದ್ದು, ಮಧ್ಯವರ್ತಿಗಳಿಗೆ, ತೆರಿಗೆ ವಂಚಕರಿಗೆ ತೊಡಕುಂಟಾಗಲಿದೆ ಎಂದರು. ಈಗಾಗಲೇ ಹಲವಾರು ದೇಶಗಳು ಸರಕು ಮತ್ತು ಸಾಗಣೆ ತೆರಿಗೆಯನ್ನು ಅಳವಡಿಸಿಕೊಂಡಿದ್ದು ಲಾಭದಾಯಕ  ಅಭಿವೃದ್ಧಿಯನ್ನು ಸಾಧಿಸುತ್ತಿವೆ. ಉತ್ಪಾದನೆಗಳನ್ನು ಬೇಗನೆ ಸಾಗಿಸಲು ಸಹಾಯಕವಾಗಲಿದ್ದು, ಭಾರತವು ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಮಾರುಕಟ್ಟೆಯನ್ನು ನಿರ್ಮಿಸಿಕೊಳ್ಳಲು ಸಹಾಯಕವಾಗಲಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಎ.ಪದ್ಮನಾಭ ಮಾತನಾಡಿ ಸ್ವಾತಂತ್ರ್ಯಾನಂತರ ತೆರಿಗೆ ಕ್ಷೇತ್ರದಲ್ಲಿ ಕೈಗೊಂಡ ಮಹತ್ವದ ನಿರ್ಧಾರ ಇದಾಗಿದ್ದು, ಉದ್ಯಮಶೀಲತೆಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಕುರಿತು ಜನರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದ್ದು, ಇಂತಹ ಕಾರ್ಯಕ್ರಮಗಳು ನಡೆಯಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ವಾಸು, ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಬಿ.ಎನ್.ಗಿರಿಯಣ್ಣವರ್, ಮೈಸೂರು ಕೈಗಾರಿಕೆಗಳ ಸಂಘದ ಮಾಜಿ ಅಧ್ಯಕ್ಷ ವಿಶ್ವನಾಥ, ಉಪಾಧ್ಯಕ್ಷ ಉಮೇಶ್ ಶೆಣೈ, ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: