ಪ್ರಮುಖ ಸುದ್ದಿಮೈಸೂರು

ಸ್ತ್ರೀವಾದಿಗಳು ದಲಿತ ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡಿಲ್ಲ : ಡಾ.ಧರಣಿದೇವಿ ಮಾಲಗತ್ತಿ

ಮುಖ್ಯವಾಹಿನಿಯಲ್ಲಿರುವ ಸ್ತ್ರೀವಾದಿಗಳು ದಲಿತ ಮಹಿಳೆಯರಿಗೆ ಸಮಾಜದಲ್ಲಿ ಸಮಾನ ಸ್ಥಾನಮಾನ ನೀಡದಿರುವುದು ದುಃಖಕರ ಸಂಗತಿ ಎಂದು ಮೈಸೂರು ಡಿವೈಎಸ್ಪಿ ಡಾ.ಧರಣಿದೇವಿ ಮಾಲಗತ್ತಿ ವಿಷಾದ ವ್ಯಕ್ತಪಡಿಸಿದರು.

ಅವರು, ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಂಡ್ಯದ ಬೆಳಕು ಸಮಾಜದ ಸಂಯುಕ್ತಾಶ್ರಯದಲ್ಲಿ ಜರುಗುತ್ತಿರುವ ‘ದಲಿತ ಮಹಿಳಾ ಸಾಹಿತ್ಯ ಸಮ್ಮೇಳನ’ದ ವಿಚಾರಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಎಲ್ಲಾ ಜಾತಿಯ ಮಹಿಳೆಯರೂ ದಲಿತರೇ, ಕೆಲವರು ಜೈವಿಕ ಅಸ್ಪೃಶ್ಯರಾದರೆ ಕೆಲವರು ಸಾಮಾಜಿಕ ಅಸ್ಪೃಶ್ಯತೆಯನ್ನು ಅನುಭವಿಸುತ್ತಿದ್ದಾರೆ. ಮೇಲ್ವರ್ಗದ ಹಾಗೂ, ದಲಿತ ಸಾಹಿತ್ಯ ಈಗಾಗಲೇ ಪ್ರಚಲಿತದಲ್ಲಿದ್ದು ಅದರಲ್ಲಿ ದಲಿತ ಮಹಿಳಾ ಸಾಹಿತ್ಯ ಎಷ್ಟಿದೆ ಎಂದು ಪರಾಮರ್ಶಿಸಬೇಕು. ದೌರ್ಜನ್ಯಕ್ಕೊಳಗಾದವರ ಬಾಯಿಯಲ್ಲಿ ಬರುವ ಅಶ್ಲೀಲ ಪದಗಳಿಗೆ ಕಾದಂಬರಿಯೊಂದನ್ನು ಉದಾಹರಿಸಿ ಸ್ವಯಂ ಆಗಿ ಶೋಷಣೆಗೊಳಗಾಗಿಲ್ಲ. ಇತರರ ಅನುಭವದ ಮೇಲೆ ಶೋಷಣೆ ಬಗ್ಗೆ ಮಾತನಾಡುವುದು ಕಷ್ಟಸಾಧ್ಯವೆಂದರು.

ಮಾರುಕಟ್ಟೆಯಿಲ್ಲ : ದಲಿತ ಮಹಿಳಾ ಸಾಹಿತಿಗಳು ಮೂವತ್ತರಿಂದ ನಲವತ್ತು ಪುಸಕ್ತಗಳನ್ನು ಹೊರತಂದಿದ್ದು, ಅದಕ್ಕೆ ಸೂಕ್ತ ಮಾರುಕಟ್ಟೆಯಿಲ್ಲದೆ ಸೊರಗುತ್ತಿವೆ ಎಂದ ಹಿರಿಯ ಪತ್ರಕರ್ತೆ ಸಾಮಾಜಿಕ ಹೋರಾಟಗಾರ್ತಿ ಕೆ.ಶಾಂತಕುಮಾರಿ ಕಳವಳ ವ್ಯಕ್ತಪಡಿಸಿದರು.

ಸಮಸ್ಯೆ-ಸವಾಲು-ಪರಿಹಾರ ಸಾಧ್ಯತೆಗಳ ಶೋಧ ವಿಷಯವಾಗಿ ಮಾತನಾಡಿ, ದಲಿತ ಮಹಿಳೆಯರು ಸಾಹಿತ್ಯ ಓದಿ ಬರೆಯುವುದರೊಂದಿಗೆ ಸಾಮಾಜಿಕ ಹೋರಾಟಗಳಲ್ಲಿಯೂ ತೊಡಗಿಕೊಳ್ಳಬೇಕು. ದಲಿತರೆಂದರೇ ಉದ್ಯೋಗಕ್ಕೂ ನೇಮಿಸಿಕೊಳ್ಳದ ಕಾಲವಿತ್ತು. ಸಂವಿಧಾನ ರಚನೆಯಾಗಿ 70 ದಶಕಗಳು ಸಂದರೂ ಇಂದಿಗೂ ವೇದಿಕೆಗಳಲ್ಲಿ ಪುರುಷರೇ ರಾರಾಜಿಸುತ್ತಿದ್ದು ಮಹಿಳೆಯರು ಮುಖ್ಯವಾಹಿನಿಗೆ ಬರಲು ಇನ್ನೂ ಎಷ್ಟು ವರ್ಷಗಳು ಬೇಕು ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು. ದೇವದಾಸಿ ಪದ್ಧತಿಯೂ ಸಮಾಜದಿಂದ ನಿರ್ಮೂಲನೆಯಾಗಬೇಕು. ಅವರ ಮಕ್ಕಳಿಗೆ ವಸತಿ ಶಾಲೆಗಳಲ್ಲಿ ಅವಕಾಶ ಕಲ್ಪಿಸಿ ಸಮಾಜವನ್ನು ಪರಿವರ್ತಿಸಬೇಕು. ಪದವಿ ಪಡೆದ ದಲಿತರೆ ವಿರಳ ಅಂದರೆ, ಮಹಿಳೆಯರ ಸಂಖ್ಯೆಯೂ ಇನ್ನೂ ಬೆರಳೆಣಿಕೆಯಷ್ಟಿದೆ. ಸಂಘಟನೆಯು ಬಲಗೊಂಡು ಸಾಮಾಜಿಕ ನೆಲೆಯಲ್ಲಿ ಮಾನವ ಹಕ್ಕುಗಳಿಗೆ ಹೋರಾಡಿ ಸ್ಥಾನಮಾನ ದೊರಕಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ವಿಭಿನ್ನ ಹೋರಾಟ: ಡಾ.ವಿಜಯಲಕ್ಷ್ಮಿ ಮಾನಪುರ ಮಾತನಾಡಿ, ದಲಿತ ಮಹಿಳೆಯೂ ಹೊರ ಜಗತ್ತು ಹಾಗೂ ಸಮಾಜದ ಪುರುಷನೊಂದಿಗೆ ಸೆಣಸಾಡಬೇಕು. ಇಬ್ಬರ ಹೋರಾಟದ ಮಜಲುಗಳು ವಿಭಿನ್ನ. ಅಂತಿಮವಾಗಿ ಪುರುಷ ಪ್ರಧಾನ ಸಮಾಜವನ್ನು ಒಪ್ಪಿಕೊಂಡು ಬದುಕುವ ಅನಿರ್ವಾಯವಿದೆ. ಪ್ರಸ್ತುತ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ದಲಿತ ಮಹಿಳೆಯರಿದ್ದು, ಅನಕ್ಷರಸ್ಥ ಗ್ರಾಮೀಣ ಮಹಿಳೆಗೂ ಅಕ್ಷರಸ್ಥ ಮಹಿಳೆಯರ ಸಮಸ್ಯೆಗಳು ತೀರ ಭಿನ್ನ. ಮಾತಿನ ಪರಂಪರೆಯಲ್ಲಿ ಜಾನಪದ ಸಾಹಿತ್ಯವನ್ನು ಕಟ್ಟಿದ್ದು ದಲಿತ ಸಾಹಿತ್ಯ, ಮಹಿಳೆಯು ಶೂದ್ರಾತಿ ಶೂದ್ರರಿಗಿಂತಲೂ ಸಾಮಾಜಿಕವಾಗಿ ಆರ್ಥಿಕವಾಗಿ ಶೋಷಣೆಗೊಳಪಟ್ಟಿದ್ದು, ಶೋಷಿತ ಜಗತ್ತಿನಿಂದ ಹೊರಬಂದು ಸ್ವಯಂ ಅಸ್ತಿತ್ವವನ್ನು ಸ್ಥಾಪಿಸಬೇಕಾಗಿದೆ ಎಂದು ತಿಳಿಸಿದರು.

ಮಹಿಳಾ ಆಯೋಜಗದ ಮಾಜಿ ಅಧ್ಯಕ್ಷೆ, ನ್ಯಾಯವಾದಿ ಮಂಜುಳಾ ಮಾನಸ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಪ್ರೀತಿ ಶ್ರೀಮಂಧರ್ ಕುಮಾರ್ ಉಪಸ್ಥಿತರಿದ್ದರು.

ಮಹಾರಾಜ ಕಾಲೇಜಿನ ಪ್ರಾಧ‍್ಯಾಪಕಿ ಡಾ.ಕೆ.ಸೌಭಾಗ್ಯವತಿ ಪ್ರಾಸ್ತಾವಿಕವಾಗಿ ನುಡಿದರು. ಚಾಮರಾಜನಗರದ ರಾಮಸಮುದ್ರದ ಮಹೇಶ್ ಮತ್ತು ತಂಡದವರು ಕ್ರಾಂತಿಗೀತೆಗಳನ್ನು ಹಾಡಿದರು. ಮಂಡ್ಯದ ಆಶಾರಾಣಿ ನಿರೂಪಿಸಿದರು.

Leave a Reply

comments

Related Articles

error: