ಮೈಸೂರು

ಕರ್ನಾಟಕಕ್ಕೆ ಸರ್.ಎಂ.ವಿ.ಕೊಡುಗೆ ಅಪಾರ: ಸರ್.ಎಂ.ವಿ ಯನ್ನು ಸ್ಮರಿಸಿದ ಡಿ.ಟಿ.ಪ್ರಕಾಶ್ :

ಮೈಸೂರು, ಸೆ.15:- ವಿಶ್ವಕಂಡ ಶ್ರೇಷ್ಠ ಇಂಜಿನಿಯರ್ ಗಳಲ್ಲಿ ಸರ್.ಎಂ. ವಿ ಯವರು ಒಬ್ಬರಾಗಿದ್ದರು ಎಂದು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಹೇಳಿದರು.

ಅವರು ಶುಕ್ರವಾರ ಬೆಳಿಗ್ಗೆ ಜೆ.ಎಲ್.ಬಿ ರಸ್ತೆಯಲ್ಲಿರುವ ಇಂಜಿನಿಯರ್ ಸಂಸ್ಥೆ ಆವರಣದಲ್ಲಿ ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಆಯೋಜಿಸಿದ್ದ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯನವರ 156ನೇ ದಿನಾಚರಣೆ ಅಂಗವಾಗಿ ಸರ್.ಎಂ.ವಿ. ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಸರ್.ಎಂ.ವಿ ಯವರು ಶಿಕ್ಷಣ ಉದ್ಯಮ ಹಾಗೂ ಕೈಗಾರಿಕಾ ರಂಗಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರಾಗಿದ್ದರು. ಅವರ ಈ ಸೇವಾ ಮನೋಭಾವವನ್ನು ಕಣ್ಣಾರೆ ಕಂಡ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಮೈಸೂರು ಸಂಸ್ಥಾನದ ದಿವಾನರನ್ನಾಗಿ ನೇಮಿಸಿದ್ದನ್ನು ನೆನಪಿಸಿಕೊಂಡರು. ನಗರದಲ್ಲಿ ಇಂತಹ ಮಹನೀಯರ ಪುತ್ಥಳಿಯನ್ನು ಸ್ಥಾಪಿಸುವಂತೆ ಒತ್ತಾಯಿಸಿ ಪ್ರತಿಭಟನೆಯನ್ನು ನಡೆಸಲಾಗಿದ್ದರೂ ಯಾವುದೇ ಪ್ರಯೋಜನ ಕಂಡು ಬಾರದ ಕಾರಣ ಇತ್ತೀಚಿಗೆ ಇದರ ಬಗ್ಗೆ ಅಂಚೆ ಪತ್ರ ಚಳುವಳಿಯನ್ನು ಸಹಾ ನಡೆಸಲಾಗಿದೆ. ನಗರ ಪಾಲಿಕೆಯ ಮಹಾ ಪೌರರಾದ ರವಿಕುಮಾರ್ ಸರ್.ಎಂ.ವಿ ಯವರ ಪ್ರತಿಮೆಯನ್ನು ನೀವು ತಂದು ಕೊಟಲ್ಲಿ ಅದನ್ನು ಸ್ಥಾಪಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಸವಾಲು ಹಾಕಿರುವ ಹಿನ್ನೆಲೆಯಲ್ಲಿ ಸರ್.ಎಂ.ವಿ ಯವರ ಪ್ರತಿಮೆಯನ್ನು ನಿರ್ಮಿಸಲು ಕೆಲವು ಗಣ್ಯರ ಸಹಕಾರ ಕೋರಲಾಗಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಆದಷ್ಟು ಬೇಗನೆ ನಗರದಲ್ಲಿ ಸರ್,ಎಂ,ವಿ ಯವರ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಮೂಡಾ ಮಾಜಿ ಅಧ್ಯಕ್ಷ ಕೆ.ಆರ್. ಮೋಹನ್ ಕುಮಾರ್ ಗೌಡ ಮಾತನಾಡಿ ಸರ್,ಎಂ,ವಿ ಯವರು ಭಾರತದ ಹೆಮ್ಮೆಯ ಪುತ್ರರೆಂದೇ ಖ್ಯಾತಿ ಪಡೆದಿದ್ದರು. ಅವರು ನಿರ್ಮಿಸಿದ ಕೃಷ್ಣರಾಜ ಸಾಗರ ಜಲಾಶಯದಿಂದಾಗಿ ರಾಜ್ಯದ ಪ್ರಮುಖ ನಗರಗಳಾದ ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ಇನ್ನಿತರ ನಗರಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಆಗಿದೆಯಲ್ಲದೆ ಮಂಡ್ಯ ಜಿಲ್ಲೆಯು ಕೃಷಿಯಲ್ಲಿ ಮುಂಚೂಣಿಯಲ್ಲಿರುವುದು ಇದಕ್ಕೆ ಉತ್ತಮ ನಿದರ್ಶನ ಎಂದು ಹೇಳಿದ ಅವರು ಸರ್.ಎಂ.ವಿ ಪ್ರತಿಮೆಯನ್ನು ಮುಂದಿನ ದಿನಗಳಲ್ಲಿ ಸ್ಥಾಪನೆಗೆ ಸರ್ಕಾರ ಮುಂದಾಗದಿದ್ದಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿದರು.

ಈ ಸಂದರ್ಭದಲ್ಲಿ ನಗರ ಪಾಲಿಕೆ ಸದಸ್ಯ ಮಾ.ವಿ.ರಾಮ್ ಪ್ರಸಾದ್, ಶ್ರೀವತ್ಸ, ಫಣೀಶ್ ಸೇರಿದಂತೆ ಹಲವಾರು ಇಂಜಿನಿಯರುಗಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: