ಮೈಸೂರು

ಸಂಸ್ಕೃತಿಯೊಳಗೆ ಏಕತೆಯನ್ನು ತರುವ ಸಾಮರ್ಥ್ಯ ಹಿಂದಿ ಭಾಷೆಗಿದೆ : ಡಾ. ಎಚ್.ಎಂ. ಕುಮಾರಸ್ವಾಮಿ

ಮೈಸೂರು,ಸೆ.15:- ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹಿಂದಿ ಬಳಕೆಯಲ್ಲಿದೆ. ಅಂತೆಯೇ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ನಾನಾ ಸಂಸ್ಕೃತಿಗಳು ನೆಲೆಸಿವೆ. ಅವುಗಳೊಳಗೆ ಏಕತೆಯೊಂದನ್ನು ತರುವ ಸಾಮರ್ಥ್ಯ ಹಿಂದಿ ಭಾಷೆಗಿದೆ” ಎಂದು ನಿವೃತ್ತ ಪ್ರಾಂಶುಪಾಲ ಡಾ. ಎಚ್.ಎಂ. ಕುಮಾರಸ್ವಾಮಿ ತಿಳಿಸಿದರು.

ಮೈಸೂರು ನಗರದ ಬಿ ಎನ್ ರಸ್ತೆಯಲ್ಲಿರುವ ಜೆಎಸ್‍ಎಸ್ ಪದವಿ ಕಾಲೇಜಿನಲ್ಲಿ ಹಿಂದಿ ವಿಭಾಗದ ವತಿಯಿಂದ ಹಿಂದಿ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ  ಡಾ. ಎಚ್.ಎಂ. ಕುಮಾರಸ್ವಾಮಿಯವರು “ಯಾವುದೇ ಭಾಷೆಯ ಸತ್ವ ಇರುವುದು ಅದರ ಕೊಡುಗೆಯಲ್ಲಿ. ಹಿಂದಿ ಭಾಷೆಯು ಜಗತ್ತಿನ ನಾನಾ ಭಾಷೆಗಳಿಂದ ಸ್ವೀಕಾರವನ್ನು ಪಡೆದಿದೆ. ಅಂತೆಯೇ ಅನೇಕ  ಭಾಷೆಗಳ ಮೇಲೆ ತನ್ನ ಪ್ರಭಾವವನ್ನು ಬೀರಿದೆ. ರಾಷ್ಟ್ರೀಯ ಭಾವೈಕ್ಯತೆಯನ್ನು ಬೆಸೆಯುವಲ್ಲಿ ಹಿಂದಿಯ ಪಾತ್ರ ಬಹಳ ಪ್ರಮುಖವಾದುದು. ಅಂತಹ ಸಾಮರ್ಥ್ಯ ಹಿಂದಿ ಭಾಷೆಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಸಮುಚ್ಚಯದ ಮುಖ್ಯ ಕಾರ್ಯನಿರ್ವಾಹಕ  ಪ್ರೊ. ಬಿ.ವಿ. ಸಾಂಬಶಿವಯ್ಯ ಮಾತನಾಡಿ “ಪ್ರಪಂಚದ 7000 ಭಾಷೆಗಳಲ್ಲಿ ಹಿಂದಿಯು ಪ್ರಮುಖ ಭಾಷೆಗಳಲ್ಲಿ ಒಂದಾಗಿದೆ. ನಮ್ಮ ದೇಶದ 6 ರಾಜ್ಯಗಳಲ್ಲಿ ಹಿಂದಿ ಭಾಷೆ ಹೆಚ್ಚು ಬಳಕೆಯಲ್ಲಿದೆ. ಭಾಷೆ ಸಂವಹನ ಮತ್ತು ವಿಚಾರ ವಿನಿಮಯಕ್ಕೆ ಮುಖ್ಯವಾದುದು. ಭಾಷೆಗಳನ್ನು ಹೆಚ್ಚೆಚ್ಚು ಕಲಿತಷ್ಟು ಜ್ಞಾನ ವೃದ್ಧಿಯಾಗುತ್ತದೆ. ಆದ್ದರಿಂದ ಮಾತೃಭಾಷೆಯ ಜೊತೆ ಹಿಂದಿಯನ್ನು ಕಲಿಯಿರಿ. ಭಾಷೆಗಳ ಅಧ್ಯಯನ ಮಾಡುವುದಕ್ಕೆ ಕೇಂದ್ರ ಸರ್ಕಾರದಿಂದ ಉತ್ತಮವಾದ ಪ್ರೋತ್ಸಾಹ ದೊರೆಯುತ್ತಿದೆ” ಎಂದು ಹೇಳಿದರು.

ಪ್ರಾಂಶುಪಾಲ  ಪ್ರೊ. ಎಂ. ಮಹದೇವಪ್ಪ, ಹಿಂದಿ ವಿಭಾಗದ ಮುಖ್ಯಸ್ಥೆ. ಸಿದ್ದಗಂಗಮ್ಮ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: