ಲೈಫ್ & ಸ್ಟೈಲ್

ಮಧುಮೇಹಕ್ಕೆ ಸಹಜ ಆಹಾರವೇ ಔಷಧಿ

gouva-webಸಕ್ಕರೆ ಕಾಯಿಲೆ ಅಥವಾ ಮಧುಮೇಹ (ಡಯಾಬಿಟೀಸ್) ಬಂದಿದೆ ಎಂದಾಕ್ಷಣ ಬೆಚ್ಚಿ ಬೀಳುವವರೇ ಹೆಚ್ಚು. ವಾಸಿಯಾಗದ ಯಾವುದೋ ಕಾಯಿಲೆ ತಮಗಂಟಿದಂತೆ ಭಯದಿಂದ ನಲುಗಿ ಬಿಡುತ್ತಾರೆ. ಈ ಆತಂಕ, ಭಯ ಅನಗತ್ಯ ಎಂಬುದು ವೈದ್ಯಲೋಕದ ಅಭಿಮತ. ನಿಯಂತ್ರಣದಲ್ಲಿ ಇಟ್ಟುಕೊಂಡರೆ, ಮಧುಮೇಹ ಯಾವ ಹಾನಿಯನ್ನೂ ಮಾಡದು ಎಂಬ ಆತ್ಮವಿಶ್ವಾಸದ ನುಡಿ ವೈದ್ಯರದು.

ಏನಿದು ಸಕ್ಕರೆ ಕಾಯಿಲೆ?

ಮನುಷ್ಯನ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿರುವುದನ್ನು ಸಕ್ಕರೆ ಕಾಯಿಲೆ ಅಥವಾ ಮಧುಮೇಹ ಎಂದು ಕರೆಯುತ್ತಾರೆ. ಇನ್ನೂ ಸ್ಪಷ್ಟವಾಗಿ ಹೇಳಬಹುದಾದರೆ, ದೇಹದಲ್ಲಿರುವ ಗ್ಲುಕೋಸ್ ಪ್ರಮಾಣವನ್ನು ಸರಿಯಾಗಿ ಬಳಸಿಕೊಳ್ಳದೇ ರಕ್ತದಲ್ಲಿ ಮತ್ತು ಮೂತ್ರದಲ್ಲಿ ಹೆಚ್ಚು ಸಕ್ಕರೆ ಅಂಶಕ್ಕೆ ಕಾರಣವಾಗುವ ದೇಹಸ್ಥಿತಿಯೇ ಮಧುಮೇಹ. ರಕ್ತದಲ್ಲಿರುವ ಸಕ್ಕರೆ ಅಂಶವು ಜೀವಕೋಶಗಳಿಗೆ ಶಕ್ತಿ ಕೊಡುತ್ತದೆ. ಆದರೆ ಈ ಕಾಯಿಲೆಯು ಜೀವಕೋಶಗಳಿಗೆ ಸಕ್ಕರೆ ಅಂಶ ಸೇರದಂತೆ ಮಾಡುತ್ತದೆ. ಇದರಿಂದಾಗಿ ಸರಾಗವಾಗಿ ರಕ್ತ ಮುಂದೆ ಸಾಗಲು ಸಾಧ್ಯವಾಗದೇ ಹೋಗಬಹುದು. ಇದರ ಪರಿಣಾಮವಾಗಿ ಅಂಧತ್ವ ಬರಬಹುದು, ಕಿಡ್ನಿಯಂಥ ಕೆಲವು ಮಹತ್ವದ ಅಂಗಗಳು ಕೆಲಸ ಮಾಡದಿರಬಹುದು. ದೀರ್ಘಾವಧಿಯಲ್ಲಿ ಹೃದ್ರೋಗ, ಪಾರ್ಶ್ವವಾಯು, ದೃಷ್ಟಿಮಾಂದ್ಯತೆ, ನರದೌರ್ಬಲ್ಯ, ನಪುಂಸಕತೆ ಇತ್ಯಾದಿ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು.

ದೇಹದಲ್ಲಿ ಅತಿರೇಕದ ಕೊಬ್ಬು ಕೂಡ ಈ ರೋಗಕ್ಕೆ ಕಾರಣವಾಗುತ್ತದೆ. ಹೊಟ್ಟೆ ಹಾಗೂ ಸೊಂಟದ ಭಾಗದಲ್ಲಿ ಹೆಚ್ಚು ಕೊಬ್ಬು ಶೇಖರಣೆಯಾದರೆ ಈ ಕಾಯಿಲೆಯ ಸಂಭವ ಅಧಿಕ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಪಿತ್ತಜನಕಾಂಗ (ಲಿವರ್) ಮತ್ತು ಮೇದೋಜೀರಕಾಂಗದಲ್ಲಿರುವ (ಪ್ಯಾನ್‍ಕ್ರಿಯಾಸ್) ಕೊಬ್ಬು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಹೆಚ್ಚುಕಡಿಮೆ ಮಾಡುತ್ತದೆ.

ತಡೆಯಲು ಸಾಧ್ಯವೇ?

ಆಹಾರ ಪಥ್ಯವನ್ನು ಅನುಸರಿಸುವುದರಿಂದ ಡಯಾಬಿಟೀಸ್ ತಡೆಯಬಹುದು.  ಸಾಮಾನ್ಯವಾಗಿ ನಿತ್ಯ ಸೇವನೆ ಮಾಡುವ ಆಹಾರದ ಪ್ರಮಾಣವನ್ನು ಕಡಿಮೆ ಮಾಡಿ. ಹೆಚ್ಚು ಸಿಹಿಯಾದ ಮತ್ತು ತಂಪು ಪಾನೀಯಗಳನ್ನು ವರ್ಜಿಸಿ. ಅಕ್ಕಿ ಮತ್ತು ಧಾನ್ಯಗಳಿಂದ ಮಾಡಿದ ರೊಟ್ಟಿಯನ್ನು ಮಿತವಾಗಿ ಸೇವಿಸಿ. ಸಂಸ್ಕರಿಸಲಾದ ಆಹಾರ ಪದಾರ್ಥ ದೂರವಿಡಿ.

ದೈಹಿಕ ಚಟುವಟಿಕೆಗಳಿಗೆ ಹೆಚ್ಚು ಗಮನ ಕೊಡಿ. ಆರೋಗ್ಯಕ್ಕೆ ಪೂರಕವಾದ ತೂಕ ಪಡೆಯಲು ಮತ್ತು ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆ ಮಾಡಲು ವ್ಯಾಯಾಮ ಸಹಕಾರಿ.

ಆಯುರ್ವೇದದ ಅನುಸಾರ ಮಧುಮೇಹ

ಮಧುಮೇಹ ಇತ್ತೀಚೆಗೆ ಶುರುವಾದ ಕಾಯಿಲೆಯೇನಲ್ಲ. ಪ್ರಾಚೀನ ಕಾಲದಿಂದಲೂ ಇದು ಜನರನ್ನು ಕಾಡುತ್ತಲೇ ಬಂದಿದೆ. ಅದಕ್ಕೆ ಸಾಕಷ್ಟು ಉಲ್ಲೇಖಗಳೂ ಕಾಣಸಿಗುತ್ತವೆ.

ಆಯುರ್ವೇದದಲ್ಲಿ ಅಷ್ಟಮಹಾಗದಾಸ ಎಂಬ ಪದವೊಂದಿದೆ. ಅಂದರೆ ಎಂಟು ಕಾಯಿಲೆಗಳ ಸಮೂಹವೊಂದನ್ನು ಪ್ರಸ್ತಾಪಿಸಲಾಗಿದೆ. ಅದರಲ್ಲಿ ಕ್ಷಯ ಹಾಗೂ ಮಧುಮೇಹ ಕೂಡ ಸೇರಿವೆ. ಯಾವ ಯಾವ ಔಷಧಿಗಳೊಂದಿಗೆ ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎಂಬುದನ್ನು ವಿವರಿಸಲಾಗಿದೆ.

ಸಕ್ಕರೆ ಕಾಯಿಲೆ ಇರುವವನಿಗೆ ಓಡಾಡುತ್ತಿದ್ದರೆ ಕುಳಿತುಕೊಳ್ಳಬೇಕು ಅನಿಸುತ್ತದೆ. ಕುಳಿತುಕೊಂಡಿದ್ದರೆ ಮಲಗಬೇಕು ಅನಿಸುತ್ತದೆ. ಅಂದರೆ ಆಲಸ್ಯತನ. ಈ ಮಧುಮೇಹಕ್ಕೆ ಸುಶ್ರುತ ಚಿಕಿತ್ಸಾ ವಿಧಾನವನ್ನು ವಿವರಿಸಿದ್ದಾನೆ. `ಕಾಡಿನಲ್ಲಿ ಓಡಾಡಬೇಕು. ದನಗಳನ್ನು, ಕುರಿಗಳನ್ನು ಮೇಯಿಸಿಕೊಳ್ಳಬೇಕು. ಊಟ ಭಿಕ್ಷುಕನ ಥರ ಇರಬೇಕು’.

ಹೀಗೆ ಹೇಳಿರುವುದರ ಉದ್ದೇಶವಿಷ್ಟೇ. ಸಕ್ಕರೆ ಕಾಯಿಲೆಯವರು ಚಟುವಟಿಕೆಯಿಂದ ಜೀವನ ನಡೆಸಬೇಕು. ಹೆಚ್ಚೆಚ್ಚು ನಡೆದಾಡಬೇಕು. ಅದರೊಂದಿಗೆ ಕಡಿಮೆ ಊಟ ಮಾಡುವುದನ್ನು ಮರೆಯಬಾರದು.

ಅರಸ ಚಂದ್ರಗುಪ್ತನಿಗೆ ಆತನ ಜೀವಿತದ ಕೊನೆಯ ಕಾಲದಲ್ಲಿ ಸಕ್ಕರೆ ಕಾಯಿಲೆ ಬಂದಿತ್ತು. ಅದನ್ನು ಗಮನಿಸಿದ ಚಾಣಕ್ಯ, ಚಿಕಿತ್ಸೆ ಹೇಳುತ್ತಾನೆ. ಅದರಲ್ಲಿ ಶಿಲಾಜಿತು, ಅಶ್ವಗಂಧ, ಶತಾವರಿ, ಆಸನ, ಬಿಲ್ವ, ಚಂದ್ರಪ್ರಭಾವಟಿ, ಶಿವಗುಟಿಕಾ, ಅಸನಾದಿಕಷಾಯ ಇತ್ಯಾದಿಗಳನ್ನು ಉಲ್ಲೇಖಿಸಲಾಗಿದೆ ಎಂದು ಆಯುರ್ವೇದ ತಜ್ಞ ಶಿವಪ್ರಸಾದ್ ಹುಡೇದ್ ಹೇಳುತ್ತಾರೆ.

ಮಧುಮೇಹಿಗಳು ಯೋಗ ಮಾಡುವುದು ಹೆಚ್ಚು ಒಳ್ಳೆಯದು. ಅದರಲ್ಲೂ ಪಶ್ಚಿಮೋತ್ತಮಾಸನ, ಪವನಮುಕ್ತಾಸನ, ಶಶಾಂಕಾಸನ, ಪ್ರಾಣಾಯಾಮ ಮತ್ತು ಧ್ಯಾನ ಅತ್ಯುತ್ತಮ.

ಹೊಟ್ಟೆ ಬಿರಿಯುವಂತೆ ಆಹಾರ ತಿನ್ನುವ ಬದಲಿಗೆ ಆಗಾಗ್ಗೆ ಅಲ್ಪಸ್ವಲ್ಪ ಪ್ರಮಾಣದಲ್ಲಿ ಸೇವಿಸುವುದನ್ನು ರೂಢಿ ಮಾಡಿಕೊಳ್ಳಬೇಕು. ಕಡಿಮೆ ಕೊಬ್ಬು, ಉಪ್ಪು ಇರುವ ಆಹಾರಕ್ಕೆ ಆದ್ಯತೆ ನೀಡಬೇಕು ಎಂದು ಆಯುರ್ವೇದ ಸಲಹೆ ಮಾಡುತ್ತದೆ.

ಪರಿಪೂರ್ಣ ಆರೋಗ್ಯ ಹೊಂದಲು ಆಹಾರ ಸೇವನೆಯತ್ತ ಗಮನ ಹರಿಸಬೇಕು. ಆಯುರ್ವೇದದಲ್ಲಿ ಸೂಚಿಸಲಾದ ಸಮತೋಲನದ ಆಹಾರದಲ್ಲಿ ಸಿಹಿ, ಕಹಿ, ಒಗರು, ಉಪ್ಪು, ಕಾರ ಹಾಗೂ ಹುಳಿ- ಈ ಆರು ಬಗೆಯ ರುಚಿಗಳನ್ನು ಹೆಸರಿಸಲಾಗಿದೆ. ಸಮರ್ಪಕವಾದ ಆಹಾರ ಪದ್ಧತಿಯನ್ನು ಅನುಸರಿಸಿದರೆ ಯಾವುದೇ ಕಾಯಿಲೆ ಬರುವುದಿಲ್ಲ. ಹಾಗಾಗಿಯೇ ಆಹಾರವನ್ನೇ ವೈದ್ಯರು `ಅತಿದೊಡ್ಡ ಔಷಧ’ ಎನ್ನುತ್ತಾರೆ.

ಜೀರ್ಣ ಶಕ್ತಿ:

ತನಗಿರುವ ಜೀರ್ಣಶಕ್ತಿ ಎಷ್ಟೆಂಬುದನ್ನು ಪ್ರತಿ ವ್ಯಕ್ತಿಯೂ ಅರಿತುಕೊಂಡಿರಬೇಕು. ಜೀರ್ಣಶಕ್ತಿ ಕುಂಠಿತವಾಗಿದ್ದರೆ ಕಾಳುಮೆಣಸು ಮತ್ತು ಶುಂಠಿ ಸೇವಿಸಬಹುದು.

ಚಟುವಟಿಕೆ ಸ್ವರೂಪ

ಸೇವಿಸಬೇಕಾದ ನಿಗದಿತ ಪ್ರಮಾಣದ ಕ್ಯಾಲೊರಿ ಹಾಗೂ ಆತನಿಗೆ ಅಗತ್ಯವಾದ ಶಕ್ತಿ- ಈ ಎರಡರ ಮಧ್ಯೆ ನೇರ ಸಂಬಂಧವಿದೆ ಮಧುಮೇಹಿಗಳು ಆಹಾರದ ಬಗ್ಗೆ ಹೆಚ್ಚು ಗಮನ ಹರಿಸಬೇಕು.

wheat-and-corn ಶರೀರಕ್ಕೆ ತಕ್ಕಂತೆ ಆಹಾರ

ದಪ್ಪನೆಯ ಅಥವಾ ಹೆಚ್ಚು ಬೊಜ್ಜಿನಿಂದ ಬಳಲುವ ಮಧುಮೇಹಿಗಳು ಕೊಬ್ಬನ್ನು ಅಥವಾ ಖಾದ್ಯ ತೈಲವನ್ನು ನೇರವಾಗಿ ಸೇವಿಸುವುದು ಸರಿಯಲ್ಲ. ತೆಳ್ಳಗಿರುವ ಮಧುಮೇಹಿಗಳು ಸುಲಭವಾಗಿ ಜೀರ್ಣವಾಗುವ ಧಾನ್ಯಗಳನ್ನು ಆಹಾರದಲ್ಲಿ ಸೇವಿಸಬೇಕು. ಉದಾಹರಣೆಗೆ, ಹೆಸರು ಕಾಳು ಮತ್ತು ಹುರಳಿಕಾಳು ಒಳ್ಳೆಯದು. ತೊಗರಿ ಬೇಳೆ ಆದಷ್ಟು ಕಡಿಮೆ ಮಾಡಿದರೆ ಒಳ್ಳೆಯದು. ವ್ಯಕ್ತಿ ಸೇವಿಸುವ ಆಹಾರ ಆತನ ದೈನಂದಿನ ಚಟುವಟಿಕೆಗೆ ವ್ಯಯವಾಗಬೇಕೇ ಹೊರತು ಅಧಿಕವಾಗಿ ಕಾರ್ಬೋಹೈಡ್ರೇಟ್ ಅಥವಾ ಕೊಬ್ಬಿನಲ್ಲಿ ಅದು ಪರಿವರ್ತನೆಗೊಳ್ಳಬಾರದು.

ಏನು ಸೇವಿಸಬೇಕು? ಯಾವುದು ನಿಷೇಧ?

ನಾವು ಸೇವಿಸುವ ಪ್ರತಿಯೊಂದು ಆಹಾರದಲ್ಲೂ ಸಕ್ಕರೆ ಅಂಶವಿರುತ್ತದೆ. ಅದಕ್ಕೆ ಗ್ಲೈಸಿಮಿಕ್ ಇಂಡಕ್ಸ್ ಎನ್ನಲಾಗುತ್ತದೆ. ಮಧುಮೇಹ ನಿಯಂತ್ರಣದಲ್ಲಿ ಗ್ಲೈಸಿಮಿಕ್ ಸೂಚ್ಯಂಕ (ರಕ್ತಕ್ಕೆ ತಕ್ಷಣವೇ ಸಕ್ಕರೆ ಒದಗಿಸುವುದು) ಮತ್ತು ಗ್ಲೈಸಿಮಿಕ್ ಪ್ರಮಾಣ (ದೀರ್ಘಾವಧಿಯಲ್ಲಿ ರಕ್ತದಲ್ಲಿ ಸಕ್ಕರೆ ನಿಯಂತ್ರಿಸುವ ಸಾಮರ್ಥ್ಯ) ಪ್ರಮುಖ ಪಾತ್ರ ವಹಿಸುತ್ತದೆ. ಉದಾಹರಣೆಗೆ, 100 ಗ್ರಾಂ ಆಹಾರವೊಂದನ್ನು ಸೇವಿಸಿದಾಗ ಅದು ಶೇಕಡ 50ರಷ್ಟು ಸಕ್ಕರೆಯಾಗಿ ಮಾರ್ಪಟಾಗುತ್ತದೆ. ಇದೇ ರೀತಿ ಕೆಲವು ಆಹಾರಗಳು ಶೇಕಡ 70, 30 ಅಥವಾ 20ರಷ್ಟು ಇರುತ್ತವೆ. ಯಾವುದರ ಗ್ಲೈಸಿಮಿಕ್ ಇಂಡೆಕ್ಸ್ ಹೆಚ್ಚು ಇರುತ್ತದೋ ಅದನ್ನು ಮಧುಮೇಹಿಗಳು ಕಡಿಮೆ ಸೇವಿಸಬೇಕು, ಅಷ್ಟೇ.

ಆಹಾರದ ಆಯ್ಕೆಯಲ್ಲಿ ಒಂದಷ್ಟು ಎಚ್ಚರಿಕೆ ವಹಿಸುವುದು ಅಗತ್ಯ. ರಾಗಿಯಲ್ಲಿ ಗ್ಲೈಸಿಮಿಕ್ ಇಂಡೆಕ್ಸ್ ಕಡಿಮೆ ಇದೆ. ಬಿಳಿ ಅಕ್ಕಿಯಲ್ಲಿ ಇಂಡೆಕ್ಸ್ ಹೆಚ್ಚು ಇದೆ. ಆದರೆ ಕೆಂಪಕ್ಕಿಯಲ್ಲಿ ಕಡಿಮೆ ಇದೆ. ಅದರಲ್ಲೂ ರಾಜಮುಡಿ ಅಕ್ಕಿಯಲ್ಲಿ ಕಡಿಮೆ ಇದೆ. ಸಿರಿಧಾನ್ಯಗಳನ್ನು ಯಥೇಚ್ಛವಾಗಿ ಬಳಸಿದರೆ ಒಳ್ಳೆಯದು. ಆ ಸಾಲಿನಲ್ಲಿ ಸಾಮೆ, ಸಜ್ಜೆ, ನವಣೆ ಸೇರುತ್ತವೆ.

 

 

ದಿನನಿತ್ಯದ ಆಹಾರ ಹೇಗಿದ್ದರೆ ಒಳ್ಳೆಯದು ಎಂಬುದಕ್ಕೆ ತಜ್ಞರು ನೀಡಿರುವ ಸಲಹೆಗಳು ಇಲ್ಲಿವೆ:

ಉಪಾಹಾರ:

ಅಕ್ಕಿ ದೋಸೆಗಿಂತ ಜೋಳ, ರಾಗಿ ಅಥವಾ ಸಿರಿಧಾನ್ಯಗಳ ಮಿಶ್ರಣದ ದೋಸೆ ಒಳ್ಳೆಯದು. ಗೋಧಿ ಅಥವಾ ಜೋಳದ ರವೆಯಿಂದ ಮಾಡುವ ಉಪ್ಪಿಟ್ಟು ಸೂಕ್ತ.

ಹೆಚ್ಚು ಅಥವಾ ಅತ್ಯಲ್ಪ ಎಂಬಷ್ಟು ಉಪಾಹಾರ ಬೇಡ. ಬೆಳಿಗ್ಗೆ ಸೇವಿಸುವ ಉಪಾಹಾರ ಗರಿಷ್ಠ ಮೂರು ಗಂಟೆಗಳಲ್ಲಿ ಜೀರ್ಣವಾಗುವ ಹಾಗಿರಬೇಕು.

ತೀರಾ ಕಡಿಮೆ ಮಸಾಲೆ ಬೆರೆಸಿದ ಬೇಯಿಸಿದ ಕಾಳುಗಳೊಂದಿಗೆ ನಿಂಬೆರಸ ಬೆರೆಸಿ ಸೇವಿಸಿ.ಇದು ಶರೀರಕ್ಕೆ ಅವಶ್ಯವಾದ ಪ್ರೊಟೀನ್ ಒದಗಿಸುತ್ತದೆ.

ಮಧ್ಯಾಹ್ನದ ಭೋಜನ:

ಜೋಳ, ಗೋಧಿ, ರಾಗಿ, ನುಚ್ಚಿನ ಆಹಾರ ಇರಲಿ. ರಸಂ ಅಥವಾ ಮಜ್ಜಿಗೆಯಂಥ ದ್ರವಾಹಾರ ಊಟದಲ್ಲಿರಲಿ. ದೇಹಕ್ಕೆ ಬೇಕಾಗುವ ಪ್ರೋಟೀನ್ ಒದಗಿಸುವುದರ ಜತೆಗೆ ಜೀರ್ಣಕ್ರಿಯೆಗೂ ನೆರವಾಗುತ್ತದೆ.

ಸಂಜೆ ತಿನಿಸು:

ಬಿಸಿ ಮತ್ತು ಮಸಾಲಾ ಚಹ ಸೇವಿಸಿ. ಸಂಜೆ ಸಮಯದಲ್ಲಿ ಹಸಿವಾಗುತ್ತಿದ್ದರೆ ರಾಗಿ ಫ್ಲೇಕ್ ಮತ್ತು ಜೋಳದ ತಿನಿಸು ಅಲ್ಪ ಪ್ರಮಾಣದಲ್ಲಿ ತಿನ್ನಬಹುದು. ಹಣ್ಣುಗಳ ಪೈಕಿ ದ್ರಾಕ್ಷಿ, ಪಪ್ಪಾಯ, ಪೇರಲ, ಕಲ್ಲಂಗಡಿ ಬಳಸಿ.

ರಾತ್ರಿ ಊಟ:

ಇದು ಮಧ್ಯಾಹ್ನದ ಊಟದ ರೀತಿಯಲ್ಲೇ ಇರಬೇಕು; ಆದರೆ ಪ್ರಮಾಣ ಮಾತ್ರ ಕಡಿಮೆ ಇದ್ದರೆ ಒಳ್ಳೆಯದು. ಗೋಧಿ ಅಥವಾ ಓಟ್ಸ್ ಮಿಶ್ರಣ ಬಳಸಿ. ಆಗಷ್ಟೇ ತಯಾರಿಸಿದ ಮಜ್ಜಿಗೆಗೆ ಒಂದು ಚಿಟಿಕೆ ಅರಿಶಿಣಪುಡಿ ಬೆರೆಸಿ ಮಲಗುವ ಮುನ್ನ ಸೇವಿಸಿ. ಇದು ಬೊಜ್ಜನ್ನು ಕಡಿಮೆ ಮಾಡುತ್ತದೆ.

ಸಕ್ಕರೆ ಕಾಯಿಲೆ ಬಂದರೆ ಗಾಬರಿಯಾಗಬೇಕಿಲ್ಲ. `ನಿಮ್ಮ ಜೀವನ ಶೈಲಿ ಬದಲಾಯಿಸಿಕೊಳ್ಳಿ’ ಎಂಬ ಸೂಚನೆ ಅದು. ಆಹಾರದ ಬಗ್ಗೆ ಗಮನ ಕೊಡಿ. ಒಂದಷ್ಟು ವ್ಯಾಯಾಮ ಮಾಡಿ. ಹಾಗೆಂದು ಜಿಮ್‍ಗೆ ಹೋಗಬೇಕೆಂದೇನೂ ಇಲ್ಲ. ಈಜು, ಜಾಗಿಂಗ್ ಅಥವಾ ವಾಕಿಂಗ್ ಮಾಡಿ. ಹಣೆ ಹಾಗೂ ಕಂಕುಳಲ್ಲಿ ಬೆವರು ಬರುವಷ್ಟು ವ್ಯಾಯಾಮ ಮಾಡಿದರೆ ಸಾಕು. ಇನ್ಸುಲಿನ್ ಬೇಕೇ ಬೇಕು ಅಂದಾಗ ಮಾತ್ರ ವೈದ್ಯರನ್ನು ಭೇಟಿ ಮಾಡಿ, ಸಲಹೆ ಪಡದು ಔಷಧಿಗೆ ಮೊರೆ ಹೋಗಿ.

ನೆನಪಿಡಿ: ಮಧುಮೇಹ ನಿಯಂತ್ರಣಕ್ಕೆ ಆಹಾರ, ವ್ಯಾಯಾಮದ ಬಳಿಕವೇ ಔಷಧಿ ಅವಲಂಬಿಸಬೇಕು. ಈ ಕಾಯಿಲೆ ಹತೋಟಿ ಮಾಡುವುದರಲ್ಲಿ  ಔಷಧಿ ಪಾತ್ರ ಶೇಕಡ 20ರಷ್ಟೇ ಇರುತ್ತದೆ. ಉಳಿದಿದ್ದು ನಿಮ್ಮ ಕೈಯಲ್ಲಿದೆ!

Leave a Reply

comments

Related Articles

error: