ಮೈಸೂರು

ಗೌರಿ ಲಂಕೇಶ್ ವ್ಯಕ್ತಿಯಾಗಿರದೆ, ಬಹುಸಂಸ್ಕೃತಿಯ ಪ್ರತೀಕವಾಗಿದ್ದರು: ಸರ್ವಮಂಗಳಾ ಬಾಯಿ

ಮೈಸೂರು, ಸೆ.೧೬: ಮೈಸೂರು ವಿವಿ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ, ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಯುವ ಪ್ರಗತಿಪರ ಸಂಘಗಳ ವತಿಯಿಂದ ಮಾನಸ ಗಂಗೋತ್ರಿಯ ರಾಣಿ ಬಹದ್ಧೂರ್ ಸಭಾಂಗಣದಲ್ಲಿ ಬಹುಸಂಸ್ಕೃತಿ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಮೂಲಭೂತವಾದದ ಕ್ರೌರ್ಯ: ನಮ್ಮ ಮುಂದಿನ ಸವಾಲು ಮತ್ತು ಸಾಧ್ಯತೆಗಳು ಕುರಿತ ವಿಚಾರ ಸಂಕಿರಣವನ್ನು ಶನಿವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕವಯತ್ರಿ ಪ್ರೊ.ಚ.ಸರ್ವಮಂಗಳಾ ಬಾಯಿ, ಗೌರಿ ಲಂಕೇಶ್ ಅವರು ಹುಟ್ಟು ಹೋರಾಟಗಾರ್ತಿ. ಚಳವಳಿ ಮಾಡುತ್ತಲೇ ದಾರಿತಪ್ಪಿದ ನಕ್ಸಲರನ್ನು ಸರಿದಾರಿಗೆ ತರಲು ಶ್ರಮಿಸಿದವರು. ಕ್ರೌರ್ಯದ ವಿರುದ್ಧ ಹೋರಾಡುತ್ತಿದ್ದವರು. ಗೌರಿ ಲಂಕೇಶ್ ಕೇವಲ ಒಬ್ಬ ವ್ಯಕ್ತಿಯಾಗಿರಲಿಲ್ಲ. ನಮ್ಮ ನಡುವೆಯೇ ಇದ್ದ ಬಹುಸಂಸ್ಕೃತಿಯ ಪ್ರತೀಕ. ರೈತ ಚಳವಳಿ, ವಿದ್ಯಾರ್ಥಿ ಚಳವಳಿ, ಮಹಿಳಾ ಚಳವಳಿಯಲ್ಲಿ ಗುರುತಿಸಿಕೊಂಡಿದ್ದ ಕ್ರಿಯಾಶೀಲ ವ್ಯಕ್ತಿತ್ವ ಉಳ್ಳವರು. ಅಂತಹವರ ಹತ್ಯೆ ನಮಗೆಲ್ಲಾ ಆಘಾತವನ್ನುಂಟು ಮಾಡಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರೆಗೋಡು, ನಿವೃತ್ತ ಪ್ರಾಂಶುಪಾಲ ಪ್ರೊ. ಹಲ್ಕೆರೆ ಮಹಾದೇವ್, ರೈತ ಸಂಘದ ಮುಖಂಡರಾದ ಬಡಗಲಪುರ ನಾಗೇಂದ್ರ, ಹೊಸಕೋಟೆ ಬಸವರಾಜು, ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: