ಮೈಸೂರು

ಯುವಜನತೆಯಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದೆ : ರಂದೀಪ್ ಬೇಸರ

ಪ್ರಸ್ತುತ ದಿನಗಳಲ್ಲಿ ಆಧುನಿಕ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಯುವ ಜನತೆ ಪುಸ್ತಕಗಳನ್ನು ಓದುವ ಮತ್ತು ನಾಟಕಗಳನ್ನು ನೋಡುವ ಹವ್ಯಾಸ ಕಡಿಮೆಯಾಗುತ್ತಿದೆ” ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ಬೇಸರ ವ್ಯಕ್ತಪಡಿಸಿದರು.

ರಂಗವಾಹಿನಿ ಚಾಮರಾಜನಗರ ಮತ್ತು ಅಂತರಸಂತೆ ಪ್ರಕಾಶನ ಮೈಸೂರು ವತಿಯಿಂದ ಕಲಾಮಂದಿರದಲ್ಲಿ ಏರ್ಪಡಿಸಿದ್ದ ಮೈಸೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹನೂರು ಚನ್ನಪ್ಪ ಅವರ ‘ಬೆಲ್ಲದ ದೋಣಿ’ ನಾಟಕ ಪ್ರದರ್ಶನ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ಹಿಂದೆ ತಂತ್ರಜ್ಞಾನ ಅಷ್ಟಾಗಿ ಮುಂದುವರೆದಿರಲಿಲ್ಲ. ಹಾಗಾಗಿ ಪುಸ್ತಕ  ಓದುವ ಮತ್ತು ನಾಟಕ ನೋಡುವ ಹವ್ಯಾಸಗಳನ್ನು ರೂಢಿಸಿಕೊಂಡಿದ್ದೆವು. ಆದರೆ ಇಂದು ತಂತ್ರಜ್ಞಾನ ಬೆಳೆದಂತೆ ಯುವಸಮೂಹ ಸಿನಿಮಾ, ಸಾಮಾಜಿಕ ತಾಣಗಳಂತಹ ಬಲೆಯಲ್ಲಿ ಸಿಲುಕಿದ್ದಾರೆ” ಎಂದು ಹೇಳಿದರು.

ಹಿರಿಯ ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಅವರು ಕೃತಿ ಲೋಕಾರ್ಪಣೆಗೊಳಿಸಿ  ಮಾತನಾಡಿ, “ಸಮಾಜದಲ್ಲಿ ಅನ್ಯಾಯ, ಅಸಮಾನತೆ ಇಂದಿಗೂ ನಡೆಯುತ್ತಿದ್ದು ಅಸಹ್ಯ ಹುಟ್ಟಿಸುತ್ತದೆ. ಮಂಟೇಸ್ವಾಮಿ ಹಾಗೂ ಮಹದೇಶ್ವರರು ಚಾರಿತ್ರಿಕ ಕ್ರಾಂತಿಕಾರಿಗಳಷ್ಟೇ ಅಲ್ಲದೇ, ಮನುಕುಲದ ಪ್ರಾಮಾಣಿಕ ವ್ಯಕ್ತಿಗಳಾಗಿದ್ದಾರೆ. ಒಡಲಾಳ, ಚೋಮನ ದುಡಿ ಕೃತಿಗಳಂತೆ ದಲಿತರ ನೋವು, ಅಸಹನೆಯನ್ನು ಬೆಲ್ಲದ ದೋಣಿ ಕೃತಿಯು ತಿಳಿಸುತ್ತದೆ” ಎಂದರು.

ಕಾರ್ಯಕ್ರಮದಲ್ಲಿ ರಂಗನಿರ್ದೇಶಕ ಎನ್.ಶಿವಲಿಂಗಯ್ಯ, ರಂಗಭೂಮಿ ಕಲಾವಿದ ಪುಟ್ಟಣ್ಣ ಅವರನ್ನು ಸನ್ಮಾನಿಸಲಾಯಿತು. ರಂಗಾಯಣ ಮಾಜಿ ನಿರ್ದೇಶಕ ಎಚ್. ಜನಾರ್ದನ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಿರಿಯ ಉಪನಿರ್ದೇಶಕ ಡಾ.ಕಾ.ರಾಮೇಶ್ವರಪ್ಪ, ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ನಿರ್ಮಲ ಮಠಪತಿ, ಚಾಮರಾಜನಗರ ರಂಗವಾಹಿನಿ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ, ಅಂತರಸಂತೆ ಪ್ರಕಾಶನದ ಡಿ. ಈರಶ್ ನಗರ್ಲೆ, ವಕೀಲ ಟಿ.ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: