
ಪ್ರಮುಖ ಸುದ್ದಿ
ಪೊಲೀಸರಿಗೆ ಬಿಸಿಮುಟ್ಟಿಸಲು ಕಾಯಂ ಅಮಾನತಿಗೆ ಚಿಂತನೆ
ಪ್ರಮುಖ ಸುದ್ದಿ, ಬೆಂಗಳೂರು, ಸೆ.೧೬: ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಿಂದಲೂ ಒಂದಲ್ಲಾ ಒಂದು ಮಹತ್ವದ ನಿರ್ಧಾರ ಕೈಗೊಳ್ಳುತ್ತಿರುವ ಗೃಹ ಸಚಿವ ರಾಮಲಿಂಗಾರೆಡ್ಡಿ ಇದೀಗ ಪೊಲೀಸರಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.
ಪೊಲೀಸರ ಕಾರ್ಯಕ್ಷಮತೆ ವೃದ್ಧಿಸಲು ಮುಂದಾಗಿರುವ ರಾಮಲಿಂಗಾರೆಡ್ಡಿ, ಈ ನಿಟ್ಟಿನಲ್ಲಿ ಸಹಕರಿಸದ ಅಧಿಕಾರಿಗಳನ್ನು ಸಸ್ಪೆಂಡ್ ಮಾಡುವ ಮೂಲಕ ಶಿಕ್ಷಿಸಲು ಮುಂದಾಗಿದ್ದಾರೆ. ಪೊಲೀಸ್ ಅಧಿಕಾರಿಗಳಿಗೆ ಅಮಾನತು ಭೀತಿ ಹುಟ್ಟಿಸುವ ಮೂಲಕ ಕೆಲಸ ತೆಗೆಸಿಕೊಳ್ಳಲು ರಾಮಲಿಂಗಾರೆಡ್ಡಿ ಮುಂದಾಗಿದ್ದಾರೆ. ಇದಕ್ಕೆ ಬಗ್ಗದವರಿಗೆ ಅಮಾನತು ಕಾಯಂ ಎನ್ನಲಾಗಿದೆ.
ಪೊಲೀಸರ ಕಾರ್ಯಕ್ಷಮತೆ ಪರೀಕ್ಷಿಸಲು ಪುನರ್ ಪರಿಶೀಲನಾ ಸಭೆ ನಡೆಸಲು ಸಚಿವರು ನಿರ್ಧರಿಸಿದ್ದಾರೆ. ಅಸಮರ್ಥರನ್ನು ಸಭೆಯಲ್ಲೇ ಅಮಾನತುಗೊಳಿಸಲು ನಿರ್ಧರಿಸಿದ್ದಾರೆ. ಸೆಪ್ಟೆಂಬರ್ ಕೊನೆಯ ವಾರದಲ್ಲಿ ವಲಯವಾರು ಪುನರ್ ಪರಿಶೀಲನಾ ಸಭೆ ನಡೆಸಲಿದ್ದಾರೆ. ನೀಡಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡದಿದ್ದವರನ್ನು ಸಭೆಯಲ್ಲೇ ಸಸ್ಪೆಂಡ್ ಮಾಡಲು ಅವರು ನಿರ್ಧರಿಸಿದ್ದಾರೆ.
ಇತ್ತೀಚೆಗೆ ವಿಕಾಸಸೌಧದಲ್ಲಿ ಸಭೆ ನಡೆಸಿದ್ದ ಗೃಹ ಸಚಿವರು ಎಲ್ಲಾ ಅಧಿಕಾರಿಗಳಿಗೆ ಅಸೈನ್ಮೆಂಟ್ ನೀಡಿದ್ದಾರೆ. ಅದರ ಕಾರ್ಯನಿರ್ವಹಣೆಯನ್ನು ಈ ಮಾಸಾಂತ್ಯದಲ್ಲಿ ಸಭೆ ನಡೆಸಿ ಗಮನಿಸಲಿದ್ದಾರೆ. ಅಂದು ಪೊಲೀಸರಿಗೆ ನೀತಿ ಪಾಠ ಮಾಡಿ ಅಸೈನ್ಮೆಂಟ್ ನೀಡಿದ್ದರು.
ಪರಿಶೀಲನಾ ಸಭೆಯಲ್ಲಿ ಪ್ರತಿ ಠಾಣಾಧಿಕಾರಿಯ ಕಾರ್ಯನಿರ್ವಹಣೆಯನ್ನು ಪ್ರತ್ಯೇಕವಾಗಿ ಪರಿಶೀಲಿಸಲಿದ್ದಾರೆ. ಅಂದು ಸಭೆಯಲ್ಲಿ ೨೦ ಅಂಶಗಳ ಅಸೈನ್ಮೆಂಟ್ ನೀಡಿದ್ದ ಸಚಿವರು, ಎಡಿಜಿಪಿಗಳಿಗೆ ಇದನ್ನು ಫ್ಯಾಕ್ಸ್ ಮೂಲಕ ರವಾನೆ ಮಾಡಿದ್ದರು. (ವರದಿ ಬಿ.ಎಂ)