ಪ್ರಮುಖ ಸುದ್ದಿ

ಅನರ್ಹ ಭೀತಿಯಲ್ಲಿದ್ದ ಪರಿಷತ್ ಸದಸ್ಯರಿಗೆ ಸದ್ಯಕ್ಕೆ ರಿಲೀಫ್

ಪ್ರಮುಖ ಸುದ್ದಿ, ಬೆಂಗಳೂರು, ಸೆ.೧೬: ನಕಲಿ ವಿಳಾಸ ನೀಡಿ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸಿ ಅನರ್ಹತೆ ಭೀತಿಯಲ್ಲಿದ್ದ ೮ ವಿಧಾನ ಪರಿಷತ್ ಸದಸ್ಯರಿಗೆ ಚುನಾವಣಾ ಆಯೋಗ ಸದ್ಯಕ್ಕೆ ರಿಲೀಫ್ ನೀಡಿದೆ.
ಪ್ರಕರಣ ಸಂಬಂಧ ತನಿಖೆ ನಡೆದ ರೀತಿ ಸಮಾಧಾನ ತಂದಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿ ನವದೆಹಲಿಯಲ್ಲಿರುವ ಪ್ರಧಾನ ಚುನಾವಣಾ ಆಯೋಗದ ಪ್ರಧಾನ ಕಚೇರಿಗೆ ತನಿಖಾ ವರದಿಯನ್ನು ರವಾನಿಸಿದ್ದು ಕ್ರಮ ಕೈಗೊಳ್ಳುವಂತೆ ತಿಳಿಸಿದೆ.
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಜಿಲ್ಲಾ ಚುನಾವಣಾಧಿಕಾರಿ ತನಿಖಾ ವರದಿಯನ್ನು ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರಿಗೆ ಸಲ್ಲಿಸಿದ್ದರು. ಈ ಸಂಬಂಧ ಶಂಕರಮೂರ್ತಿ ಚುನಾವಣಾ ಆಯೋಗದ ವರದಿ ಕೇಳಿದ್ದರು.
ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ರಘು ಆಚಾರ್, ಅಲ್ಲಂ ವೀರಭದ್ರಪ್ಪ, ಎನ್ ಎಸ್ ಬೋಸರಾಜು, ಎಸ್ ರವಿ, ಎಂ.ಡಿ.ಲಕ್ಷ್ಮಿ ನಾರಾಯಣ, ಹಾಗೂ ಜೆಡಿಎಸ್‌ನ ಸಿ.ಆರ್.ಮನೋಹರ್ ಮತ್ತು ಅಪ್ಪಾಜಿ ಗೌಡ ಅವರುಗಳು ಸುಳ್ಳು ವಿಳಾಸ ನೀಡಿ ಭತ್ಯೆ ಮತ್ತು ಸೌಲಭ್ಯ ಪಡೆದು ಅನರ್ಹತೆ ಗೊಳ್ಳುವ ಆತಂಕದಲ್ಲಿರುವ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.
ಪರಿಷತ್ ಸದಸ್ಯರು, ಬೆಂಗಳೂರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆಗೊಳಿಸಿರುವುದಕ್ಕೆ ಹಾಗೂ ತನಿಖೆ ನಡೆದ ರೀತಿ ಸಂಬಂಧ ಚುನಾವಣಾ ಆಯೋಗ ಅಸಮಾಧಾನ ವ್ಯಕ್ತ ಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ತನಿಖೆಯಲ್ಲಿ ಆಗಿರುವ ದೋಷಗಳನ್ನು ಸರಿ ಪಡಿಸುವಂತೆ, ಜಿಲ್ಲಾ ಚುನಾವಣಾಧಿಕಾರಿಗೆ ಚುನಾವಣಾ ಆಯೋಗ ಸೂಚಿಸಿದೆ. ಇದೇ ವೇಳೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಅವರೊಂದಿಗೆ ಸಭಾಪತಿ ಶಂಕರಮೂರ್ತಿ ಇಂದು ಚರ್ಚೆ ನಡೆಸಲಿದ್ದಾರೆ. ನಂತರ ಈ ಸಂಬಂಧ ಕ್ರಮ ಕೈಗೊಳ್ಳುವುದಾಗಿ ಶಂಕರಮೂರ್ತಿ ಹೇಳಿದ್ದಾರೆ. (ವರದಿ ಬಿ.ಎಂ)

Leave a Reply

comments

Related Articles

error: