ಪ್ರಮುಖ ಸುದ್ದಿಮೈಸೂರು

ಮೈಸೂರಿಗರಿಗೆ ದೀಪಾವಳಿ ಕೊಡುಗೆ ನೀರಿನ ಶುಲ್ಕ ಬಡ್ಡಿ ಮನ್ನಾ

ಮೈಸೂರು ಮಹಾನಗರ ಪಾಲಿಕೆಯಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೈಲಾಸಪುರಂ, ಕರಕುಶಲನಗರ, ರೇಣುಕಾದೇವಿ ನಗರದಲ್ಲಿ ಪ್ರಾರಂಭಿಸಲು ಹಾಗೂ ನೀರಿನ ಶುಲ್ಕ ಉಳಿಸಿಕೊಂಡಿರುವ ಗ್ರಾಹಕರ ಬಡ್ಡಿ ಮನ್ನಾ ಮಾಡುವ ತೀರ್ಮಾನವನ್ನು ನಗರಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಕೈಗೊಳ್ಳಲಾಯಿತು.

ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಶುಕ್ರವಾರ ಮಹಾಪೌರ ಬಿ.ಎಲ್. ಭೈರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲಿ ನೀರಿನ ಕಂದಾಯ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ಬಡ್ಡಿ ಮನ್ನಾಗೆ ಚಿಂತನೆ ನಡೆಸಿದ್ದು ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಣಯಿಸಲಾಯಿತು.ವಿದ್ಯಾ ಸಂಸ್ಥೆಗಳಿಗೆ ಪರವಾನಿಗೆ ನೀಡುವಾಗ ಸಾಧಕ-ಬಾಧಕಗಳನ್ನು ನಿರ್ಣಯಿಸಿ ಮಹಾಪೌರರು ಅಂತಿಮ ನಿರ್ಧಾರ ಕೈಗೊಳ್ಳಬಹುದು. 11 ಮತ್ತು 12ನೇ ವಾರ್ಡಿನ ಬಸ್ ನಿಲ್ದಾಣದ ನಿರ್ವಹಣೆಯನ್ನು ಸಿಂಧೂರ ಕನ್ವೆನ್ಷನ್ ಹಾಲ್ ಗೆ ವಹಿಸಲಾಯಿತು, ಅದೇ ವಾರ್ಡಿನ ಪುಟ್ಟರಾಜಗವಾಯಿ ಕ್ರೀಡಾಂಗಣ ನಿರ್ವಹಣೆಯನ್ನು ಐದು ವರ್ಷಗಳ ಗುತ್ತಿಗೆ ಆಧಾರದ ಮೇಲೆ ಖಾಸಗಿಯವರಿಗೆ ವಹಿಸಲು ತೀರ್ಮಾನಿಸಲಾಯಿತು.

ಅಂತಿಮ ಕೌನ್ಸಿಲ್ ಸಭೆಯ ಅಧ್ಯಕ್ಷತೆ ವಹಿಸಿದ್ದ ಮಹಾಪೌರರು ಮಾತನಾಡಿ ಅರಮನೆಯ ಭೇಟಿಯನ್ನು ನೆನೆದು ಪ್ರಮೋದಾದೇವಿ ಒಡೆಯರ್, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಲ್ಲಿಸಿದ ಗೌರವಕ್ಕೆ ಕೃತಜ್ಞತೆ ಸಲ್ಲಿಸಿದರು. ಮೈಸೂರು ಜನತೆಯ ಪ್ರೀತಿ ವಿಶ್ವಾಸವನ್ನು ಸ್ಮರಿಸಿ ಆಡಳಿತಾವಧಿಯಲ್ಲಿ ನಡೆದಿರುವ ಸಣ್ಣಪುಟ್ಟ ವಿಷಯಗಳನ್ನು ನಿವೇದನೆ ಮಾಡಿಕೊಂಡು ಸದಸ್ಯರಿಗೆ ಅಭಿನಂದಿಸಿ ಧನ್ಯವಾದ ಸಲ್ಲಿಸಿದರು. ಸಭೆಯಲ್ಲಿ ಶಾಸಕ ವಾಸು, ಉಪಮಹಾಪೌರರಾದ ವನಿತಾ ಪ್ರಸನ್ನ, ನಗರಪಾಲಿಕೆ ಆಯುಕ್ತ ಜಗದೀಶ್ ಹಾಗೂ ಪಾಲಿಕೆ ಸದಸ್ಯರು ಮಾತನಾಡಿ ಮಹಾಪೌರರ ಭೈರಪ್ಪ ಅವರ ಕಾರ್ಯವೈಖರಿಗೆ ಪಕ್ಷಾತೀತವಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.

Leave a Reply

comments

Related Articles

error: