ಮೈಸೂರು

ದಸರಾ ಲಲಿತಕಲೆ ಮತ್ತು ಕರಕುಶಲ ಕಲಾ ಉಪಸಮಿತಿ ವತಿಯಿಂದ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ : ಕಲ್ಪನೆಯ ಚಿತ್ರ ರಚಿಸಿದ ಚಿಣ್ಣರು

ಮೈಸೂರು,ಸೆ.17:- ದಸರಾ ಮಹೋತ್ಸವದ ಅಂಗವಾಗಿ ದಸರಾ ಲಲಿತಕಲೆ ಮತ್ತು ಕರಕುಶಲ ಕಲಾ ಉಪಸಮಿತಿ ಭಾನುವಾರ ನಗರದ ಜೆ.ಎಸ್.ಎಸ್ ವಸತಿ ನಿಲಯಗಳ ಸಮುಚ್ಛಯ, ಸರಸ್ವತಿಪುರಂನಲ್ಲಿ  ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು.

ನಗರದ ವಿವಿಧ ಶಾಲಾ ಕಾಲೇಜುಗಳ 120 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಕಲ್ಪನೆಗಳಿಗೆ ಚಿತ್ರರೂಪ ನೀಡಿದರು. ಒಂದನೇ ತರಗತಿಯಿಂದ ನಾಲ್ಕನೇ ತರಗತಿ, ಐದನೇ ತರಗತಿಯಿಂದ ಎಂಟನೇ ತರಗತಿ ಮತ್ತು ಒಂಭತ್ತನೇ ತರಗತಿಯಿಂದ ಹನ್ನೆರಡನೆಯ ತರಗತಿ ಹೀಗೆ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಸಲಾಯಿತು. ಸ್ಪರ್ಧಿಗಳಿಗೆ ತಮ್ಮ ಇಷ್ಟದ ಕಲ್ಪನೆಗಳನ್ನು ಚಿತ್ರಿಸಲು ಅವಕಾಶ ಕೊಡಲಾಗಿತ್ತು, ಹಾಗೂ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಚಿತ್ರ ರಚಿಸಲು ಬಿಳಿಯ ಹಾಳೆಗಳನ್ನು ವಿತರಿಸಲಾಗಿತ್ತು.

ಉಪಸಮಿತಿಯ ಕಾರ್ಯಧ್ಯಕ್ಷರಾದ ಡಾ. ಗವಿಸಿದ್ದಯ್ಯ ಮಾತನಾಡಿ ಇಬ್ಬರು ಪರಿಣತರನ್ನು  ತೀರ್ಪುಗಾರರನ್ನಾಗಿ ಆಹ್ವಾನಿಸಲಾಗಿದ್ದು, ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಲಾಗುವುದು. ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಮತ್ತು ಮೂರನೇ ಬಹಮಾನ ನೀಡಲಾಗುವುದು, ಇದರೊಟ್ಟಿಗೆ ಐದು ಸಮಾಧಾನಕರ ಬಹುಮಾನವನ್ನು ಸೆಪ್ಟೆಂಬರ್ 27 ರಂದು ಕಲಾಮಂದಿರದಲ್ಲಿ ನಡೆಯುವ ಲಲಿತಕಲಾ ಮತ್ತು ಕರಕುಶಲ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ನೀಡಲಾಗುವುದು ಎಂದು ತಿಳಿಸಿದರು.

ಉಪಸಮಿತಿಯ ಉಪಾಧ್ಯಕ್ಷರಾದ ಪುಷ್ಪವಲ್ಲಿ ಮತ್ತು ಸದಸ್ಯರುಗಳು ಹಾಗೂ ಕಾರ್ಯದರ್ಶಿ ಎಂ. ಸುರೇಶ್ ಕುಮಾರ್ ಮತ್ತು ಮಾಜಿ ಮಹಾಪೌರರಾದ ಹೆಚ್.ಎನ್. ಶ್ರೀಕಂಠಯ್ಯ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: