Uncategorizedಕರ್ನಾಟಕಪ್ರಮುಖ ಸುದ್ದಿ

ಲಾಲ್ ಬಾಗ್ ಮಾದರಿಯಲ್ಲೇ ರಾಜ್ಯದ ವಿವಿಧೆಡೆ 5 ಉದ್ಯಾನವನ ನಿರ್ಮಾಣ

ಬೆಂಗಳೂರು,ಸೆ.18-ಅಳಿವಿನಂಚಿನಲ್ಲಿರುವ ಸಸ್ಯ ಪ್ರಬೇಧಗಳನ್ನು ಉಳಿಸಿ, ರಕ್ಷಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿರುವ ಏಕೈಕ ಜೈವಿಕ ಉದ್ಯಾನವನ ಲಾಲ್ ಬಾಗ್ ಮಾದರಿಯಲ್ಲೇ ರಾಜ್ಯದ ವಿವಿಧ ಭಾಗಗಳಲ್ಲಿ ಐದು ಸಸ್ಯ ತೋಟಗಳನ್ನು ಪ್ರಾರಂಭಿಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ.

ರಾಜ್ಯ ಅಪರೂಪದ ಸಸ್ಯ ಪ್ರಬೇಧಗಳ ರಕ್ಷಣೆಗೆ ಸೂಕ್ತ ಹವಾಮಾನ ಹೊಂದಿದೆ. ಅಲ್ಲದೆ, ಅಗತ್ಯವಾದ ನೈಸರ್ಗಿಕ ಸಂಪನ್ಮೂಲಗಳಾದ ಸೂರ್ಯನ ಬೆಳಕು ಹಾಗೂ ನೀರಿನ ಮೂಲಗಳು ಹೇರಳವಾಗಿವೆ. ಈ ಕಾರಣದಿಂದಾಗಿ ದೇಶ ವಿದೇಶಗಳಲ್ಲಿನ ಅಪರೂಪದ ಹಾಗೂ ಆಕರ್ಷಕವಾದ ಪುಷ್ಪ ಸಂತತಿ ಬೆಳೆಸಿ ಉಳಿಸಲು ಐದು ಜೈವಿಕ ಉದ್ಯಾನವನಗಳನ್ನು ಪ್ರಾರಂಭಿಸಲಾಗುತ್ತಿದೆ. ಇದಕ್ಕೆ ಸರ್ಕಾರ ಈಗಾಗಲೇ ಅನುಮೋದನೆ ನೀಡಿದ್ದು, ಉದ್ಯಾನವನದ ಕಾರ್ಯಗಳು ಭರದಿಂದ ಸಾಗಿವೆ.

ಈ ಉದ್ಯಾನಗಳಲ್ಲಿ ವಿಶ್ವದ ವಿವಿಧ ದೇಶಗಳಲ್ಲಿನ ಅಪರೂಪದ ಸಸ್ಯ ಪ್ರಬೇಧಗಳನ್ನು ಬೆಳೆಸಲು ಚಿಂತನೆ ನಡೆಸಲಾಗಿದೆ. ತೋಟಗಾರಿಕೆ ಇಲಾಖೆಯ ಅಧೀನದಲ್ಲಿರುವ ಲಾಲ್ ಬಾಗ್ ನಲ್ಲಿ ಸುಮಾರು 2120 ಸಸ್ಯ ಪ್ರಬೇಧಗಳಿದ್ದು, ಅವುಗಳನ್ನು ನೂತನವಾಗಿ ನಿರ್ಮಾಣವಾಗುತ್ತಿರುವ ಸಸ್ಯತೋಟಗಳಲ್ಲಿ ಅಭಿವೃದ್ಧಿ ಮತ್ತು ವಿಸ್ತರಣೆ ಮಾಡುವ ಮೂಲಕ ರೈತರಿಗೆ ಲಾಭಗಳಿಸುವಂತೆ ಮಾಡಲು ತೀರ್ಮಾನಿಸಲಾಗಿದೆ.

ಸಸ್ಯತೋಟಗಳನ್ನು ಪ್ರಾರಂಭಿಸುವುದರಿಂದ ಆ ಭಾಗದ ರೈತರಿಗೆ ವಿಭಿನ್ನ ಮಾದರಿಯ ಸಸ್ಯ ಪ್ರಭೇದಗಳು ಪರಿಚಯವಾಗಲಿವೆ. ವಿದೇಶ ತಳಿಗಳ ಕುರಿತು ಸ್ಥಳೀಯ ವಿದ್ಯಾರ್ಥಿಗಳಿಗೆ ಸಂಶೋಧನೆ ನಡೆಸಲು ಕೂಡ ಇದು ಸಹಕಾರಿಯಾಗಲಿದ್ದು, ಅವರ ಶೈಕ್ಷಣಿಕ ಭವಿಷ್ಯಕ್ಕೆ ನೆರವಾಗಲಿದೆ. ಜೈವಿಕ ಉದ್ಯಾನದ ಸುತ್ತಮುತ್ತಲ ಪ್ರದೇಶಗಳಲ್ಲಿ ಉತ್ತಮ ಪರಿಸರವನ್ನು ನೈಸರ್ಗಿಕವಾಗಿ ನಿರ್ಮಿಸಲು ಸಹಕಾರಿಯಾಗಲಿದೆ. ಸ್ಥಳೀಯರಿಗೆ ಅಪರೂಪದ ಗಿಡಗಳನ್ನು ಪರಿಚಯಿಸಲು ಅವಕಾಶ ಕೊಟ್ಟಂತಾಗುತ್ತದೆ. ಸಸ್ಯ ಸಂಪನ್ಮೂಲಗಳ ಅಭಿವೃದ್ಧಿಗೆ ಇದು ನೆರವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. (ವರದಿ-ಎಂ.ಎನ್)

 

Leave a Reply

comments

Related Articles

error: