ಮೈಸೂರು

ಹೊಸಪೀಳಿಗೆಯಿಂದ ಇತಿಹಾಸದ ಕಡೆಗಣನೆ : ಎಂ.ಆರ್.ರವಿ ವಿಷಾದ

ಹೊಸ ಪೀಳಿಗೆಯು ಇತಿಹಾಸವನ್ನು ಮರೆಯುವುದರೊಂದಿಗೆ ಅದನ್ನು ಕಡೆಗಣಿಸುತ್ತಿದ್ದು ಭವ್ಯ ಭಾರತೀಯ ಪರಂಪರೆಗೆ ಮಾಡಿದ ಅವಮಾನ  ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್.ರವಿ ವಿಷಾದ ವ್ಯಕ್ತಪಡಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಲೇಖಕ ಪ್ರೊ.ಆರ್.ರಾಜಣ್ಣ ಹಾಗೂ ಪ್ರೊ. ಎ.ಸಿ.ನಾಗೇಶ್ ರಚನೆಯ ಕರ್ನಾಟಕ ಚರಿತ್ರೆ ಮತ್ತು ಆಧುನಿಕ ಕರ್ನಾಟಕ ಚರಿತ್ರೆ ಪುಸ್ತಕಗಳನ್ನು ಎಂ.ಆರ್.ರವಿ ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಅವರು ಇಂದಿನ ಯುವ ಪೀಳಿಗೆಗೆ ಇತಿಹಾಸ ಬೇಡವಾಗಿದೆ. ಅವರು ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡುವ ಬದಲು ಮಾಲ್, ಪಬ್ ಗಳಿಗೆ ಹೋಗುವುದೇ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇಂದು ವಿಶ್ವವಿದ್ಯಾನಿಲಯಗಳಲ್ಲಿ ನೋಟ್ಸ್ ಮೂಲಕ  ಇತಿಹಾಸ ಪ್ರಾಧ್ಯಾಪಕರು ಪಾಠ ಮಾಡುತ್ತಾರೆ. ಅದರಿಂದ ವಿದ್ಯಾರ್ಥಿಗಳಲ್ಲಿ ನಿರಾಸಕ್ತಿ ಮೂಡುತ್ತಿದೆ. ಇತಿಹಾಸದ ವಿದ್ಯಾರ್ಥಿಗಳು ಐತಿಹಾಸಿಕ ಸ್ಥಳಗಳನ್ನು ನೋಡಿ ಅದರ ಕುರಿತು ಕುತೂಹಲ ತಳೆದು ಅಭ್ಯಸಿಸಬೇಕು. ಹಾಗಿದ್ದಾಗ ಮಾತ್ರ ಇತಿಹಾಸದತ್ತ ಒಲವು ಮೂಡುತ್ತದೆ.  ಆದರೆ ಸ್ಥಳಗಳನ್ನು ನೋಡದೆಯೇ ಇತಿಹಾಸದ ಕುರಿತು ಉನ್ನತ ಶಿಕ್ಷಣ ಮುಗಿಸುವುದು ನಿಜ್ಜಕ್ಕೂ ಆತಂಕದ ವಿಷಯ ಎಂದು ತಿಳಿಸಿದರು.

ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಇಂದಿಗೂ ಶೈಕ್ಷಣಿಕ ಪ್ರವಾಸಕ್ಕಾಗಿ ಐತಿಹಾಸಿಕ ಸ್ಥಳಗಳಿಗೆ ಕರೆದುಕೊಂಡು ಹೋಗಲಾಗುತ್ತದೆ ಆದರೆ ವಿದ್ಯಾರ್ಥಿಗಳು ಅವುಗಳನ್ನು ಎಷ್ಟರ ಮಟ್ಟಿಗೆ ತಿಳಿದುಕೊಂಡರು ಎನ್ನುವುದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ ಕಲ್ಬುರ್ಗಿ, ವಿವಿ ಕುಲಪತಿ ಪ್ರೊ.ಎಸ್.ಆರ್.ನಿರಂಜನ್, ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: