
ಕರ್ನಾಟಕಪ್ರಮುಖ ಸುದ್ದಿ
ಬಾಂಗ್ಲಾ ಉಗ್ರರು ದಾಳಿ ನಡೆಸುವ ಸಾಧ್ಯತೆಯಿದ್ದು ಕಟ್ಟೆಚ್ಚರ ವಹಿಸಲು ಗುಪ್ತಚರ ಇಲಾಖೆ ಸೂಚನೆ
ರಾಜ್ಯ(ಬೆಂಗಳೂರು), ಸೆ. 18:- ನಗರದಲ್ಲಿ ಬಾಂಗ್ಲಾ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದ್ದು, ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಗುಪ್ತಚರ ಇಲಾಖೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ನಗರ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ.
ಇಸ್ರೇಲ್ ಹಾಗೂ ಫ್ರಾನ್ಸ್ ಮಾದರಿಯಲ್ಲಿ ಬೆಂಗಳೂರಿನಲ್ಲೂ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ ಎಂಬ ಮಾಹಿತಿಗಳನ್ನು ಕೇಂದ್ರ ಗುಪ್ತಚರ ಇಲಾಖೆ ರಾಜ್ಯ ಪೊಲೀಸರಿಗೆ ರವಾನಿಸಿದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ನಗರದಲ್ಲಿ ಅಕ್ರವಾಗಿ ವಾಸಿಸುತ್ತಿರುವ ಬಾಂಗ್ಲಾ ವಲಸಿಗರ ಜೊತೆ ಕೆಲವು ಉಗ್ರರು ಸೇರಿಕೊಂಡಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಬಾಂಗ್ಲಾ ವಲಸಿಗರ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಮಂಗಳೂರಿನಲ್ಲೂ ದಾಳಿ ನಡೆಸುವ ಸಾಧ್ಯತೆ ಇದೆ. ಕಟ್ಟೆಚ್ಚರ ವಹಿಸಿ ಎಂದು ಕೇಂದ್ರ ಗುಪ್ತಚರ ಇಲಾಖೆ ಹೇಳಿದೆ.
ಬಾಂಗ್ಲಾ ವಲಸಿಗರೊಂದಿಗೆ ಕೆಲ ಉಗ್ರರು ಮಡಿಕೇರಿ ಹಾಗೂ ಚಿಕ್ಕಮಗಳೂರಿನ ಕಾಫಿ ಹಾಗೂ ಟೀ ತೋಟಗಳಲ್ಲಿ ಕೂಲಿ ಕಾರ್ಮಿಕರಂತೆ ಸೇರಿಕೊಂಡಿರುವ ಮಾಹಿತಿ ಇದ್ದು, ಈ ಬಗ್ಗೆಯೂ ಗಮನ ಹರಿಸಿ ಎಂದು ಗುಪ್ತಚರ ಇಲಾಖೆ ಸೂಚಿಸಿದೆ. ರಾಜ್ಯದಲ್ಲಿ 2015ರಲ್ಲಿ 2.16 ಲಕ್ಷದಷ್ಟಿದ್ದ ಬಾಂಗ್ಲಾ ಅಕ್ರಮ ವಲಸಿಗರ ಸಂಖ್ಯೆ 2017ರಲ್ಲಿ 3.27 ಲಕ್ಷಕ್ಕೆ ತಲುಪಿದೆ ಎನ್ನಲಾಗಿದೆ. ಇವರಿಗೆ ನಕಲಿ ಮತದಾರ ಚೀಟಿ, ಆಧಾರ್ ಕಾರ್ಡ್ ನೀಡಿರುವ ಆರೋಪಗಳು ಕೇಳಿಬಂದಿದ್ದು, ಪೊಲೀಸರು ಇವರ ಮೇಲೆ ಈಗ ಹದ್ದಿನ ಕಣ್ಣಿಟ್ಟಿದ್ದಾರೆ. (ಕೆ.ಎಸ್,ಎಸ್.ಎಚ್)