ಕರ್ನಾಟಕಪ್ರಮುಖ ಸುದ್ದಿ

ಪ್ರತಿ ಜಿಲ್ಲೆಯಲ್ಲೂ ಇಎಸ್‍ಐ ಆಸ್ಪತ್ರೆ ನಿರ್ಮಾಣಕ್ಕೆ ಶಿಫಾರಸು : ಎಂ.ಆರ್.ವೆಂಕಟೇಶ್

ಕಾರವಾರ, ಸೆ.19 : ಇಎಸ್‍ಐ ಭತ್ಯೆ ಪಾವತಿಸುವ ಎಲ್ಲ ಕಾರ್ಮಿಕರ ಆರೋಗ್ಯ ಭದ್ರತೆ ದೃಷ್ಟಿಯಿಂದ ಪ್ರತಿ ಜಿಲ್ಲೆಗೂ ಇಎಸ್‍ಐ ಆಸ್ಪತ್ರೆ ಆರಂಭಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಆರ್.ವೆಂಕಟೇಶ್ ಹೇಳಿದ್ದಾರೆ.

ಸಫಾಯಿ ಕರ್ಮಚಾರಿಗಳ ಹಾಗೂ ಸ್ವಚ್ಛತಾ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳ ಕುರಿತು ಸೋಮವಾರ ಜಿಲ್ಲಾ ಪಂಚಾಯ್ತಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು, ಇಎಸ್‍ಐ ಸೌಲಭ್ಯ ಇರುವುದೇ ಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ. ಆದರೆ ಜಿಲ್ಲೆಯಲ್ಲಿ ಇಎಸ್‍ಐ ಆಸ್ಪತ್ರೆಯೇ ಇಲ್ಲದೆ ಕಾರ್ಮಿಕರಿಂದ ಭತ್ಯೆ ಕಡಿತಗೊಳಿಸುವುದು ಸರಿಯಾದ ಕ್ರಮವಲ್ಲ. ಈ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಗೂ ಇಎಸ್‍ಐ ಆಸ್ಪತ್ರೆ ಆರಂಭಿಸುವಂತೆ ಕೇಂದ್ರ ಸರ್ಕಾರಕ್ಕೆ ಆಯೋಗದಿಂದ ಶಿಫಾರಸು ಮಾಡುವುದಾಗಿ ಅವರು ತಿಳಿಸಿದರು.

ರಾಜ್ಯಾದ್ಯಂತ ಈವರೆಗ 24 ಜಿಲ್ಲೆಗಳಲ್ಲಿ ತಮ್ಮ ನೇತೃತ್ವದ ಆಯೋಗದ ತಂಡ ಭೇಟಿ ನೀಡಿ ಸಫಾಯಿ ಕರ್ಮಚಾರಿಗಳ ಯೋಗ ಕ್ಷೇಮ ಕುರಿತಂತೆ ಪ್ರಗತಿ ಪರಿಶೀಲನೆ ನಡೆಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಸ್ಥಿತಿ ಸುಧಾರಣೆಯಾಗಿದ್ದು ವಿವಿಧ ಇಲಾಖೆಗಳಿಂದ ಕೈಗೊಂಡ ಕಾರ್ಯಕ್ರಮಗಳು ತೃಪ್ತಿದಾಯವಾಗಿವೆ ಎಂದರು.

ಪೌರಕಾರ್ಮಿಕರು, ಸಫಾಯಿ ಕರ್ಮಚಾರಿಗಳು ಹಾಗೂ ಸ್ವಚ್ಛತಾ ಕಾರ್ಮಿಕರ ಬದುಕು ಸುಧಾರಿಸುವ ಸಲುವಾಗಿ 2013ರಲ್ಲಿ ಆಯೋಗ ರಚನೆಯಾಗಿದ್ದು, ರಾಜ್ಯ ಸರ್ಕಾರ ದೇಶದಲ್ಲೇ ಮೊದಲ ಬಾರಿಗೆ ಪ್ರತ್ಯೇಕವಾಗಿ ಸಫಾಯಿ ಕರ್ಮಚಾರಿಗಳ ನಿಗಮವನ್ನು ಸ್ಥಾಪಿಸಿ 100 ಕೋಟಿ ರೂ. ಅನುದಾನ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಸಫಾಯಿ ಕರ್ಮಚಾರಿಗಳನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಎಲ್ಲ ಪ್ರಯತ್ನಗಳನ್ನು ಮಾಡಿದೆ ಎಂದರು.

ಸಫಾಯಿ ಕರ್ಮಚಾರಿಗಳಿಗಾಗಿ ಗೃಹಭಾಗ್ಯ ಯೋಜನೆಯಲ್ಲಿ ಮನೆಗಳ ನಿರ್ಮಾಣ, ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರ ವ್ಯವಸ್ಥೆ, ಅವರ ಮಕ್ಕಳಿಗೆ ಸಮಾಜ ಕಲ್ಯಾಣ ಇಲಾಖೆ ಮೂಲಕ ಪ್ರತಿಷ್ಠಿತ ಶಾಲೆಗಳಲ್ಲಿ ಶಿಕ್ಷಣ ಕೊಡಿಸುವ ಯೋಜನೆ, ಅಲ್ಲದೆ ರಾಜ್ಯದ ಎಲ್ಲ ವಸತಿ ಶಾಲೆಗಳಲ್ಲಿ ಯಾವುದೇ ಪ್ರವೇಶ ಪರೀಕ್ಷೆಯಿಲ್ಲದೆ ಅವರ ಮಕ್ಕಳಿಗೆ ನೇರ ದಾಖಲಾತಿ, ಆರೋಗ್ಯ ಭದ್ರತೆಯ ಜ್ಯೋತಿ ಸಂಜೀವಿನಿ, ಕಾಲ ಕಾಲಕ್ಕೆ ಆರೋಗ್ಯ ಶಿಬಿರಗಳು ಹಾಗೂ ಸ್ವಚ್ಛತಾ ಸಲಕರಣೆಗಳ ವಿತರಣೆ – ಹೀಗೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.

ನಗರಸಭೆ, ಪುರಸಭೆಗಳಲ್ಲಿ ಪೌರ ಕಾರ್ಮಿಕರ ಹಿತದೃಷ್ಟಿಯಿಂದ ಕೈಗೊಂಡ ಕ್ರಮಗಳ ಬಗ್ಗೆ ಹಾಗೂ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಕೂಲಕಂಶವಾಗಿ ಪ್ರಗತಿ ಪರಿಶೀಲನೆ ನಡೆಸಿದರು. ಆಯೋಗದ ಸದಸ್ಯ ಗೋಕುಲ್ ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಚಂದ್ರಶೇಖರ ನಾಯಕ್, ಆಯೋಗದ ಸಂಶೋಧನಾಧಿಕಾರಿ ಮಂಜುನಾಥ್ ಉಪಸ್ಥಿತರಿದ್ದರು.

(ಎನ್.ಬಿ)

Leave a Reply

comments

Related Articles

error: