ಪ್ರಮುಖ ಸುದ್ದಿಮೈಸೂರು

ನಾಡಹಬ್ಬ ದಸರಾ ಮಹೋತ್ಸವಕ್ಕೆ ಇನ್ನೊಂದೇ ದಿನ ಬಾಕಿ : ಮಲ್ಲಿಗೆ ನಗರಿಯ ಸುತ್ತ ಕಾವಲಿದೆ ಖಾಕಿ ಪಡೆ

ಮೈಸೂರು,ಸೆ.19:- ‘ ಮೈಸೂರು ದಸರಾ ಎಷ್ಟೊಂದು ಸುಂದರಾ …ಚೆಲ್ಲಿದೆ ನಗೆಯ ಪನ್ನೀರಾ..’ ಹಾಡನ್ನು ನೆನಪಿಸುವ ದಿನ ಬಂದೇ ಬಿಟ್ಟಿತು. ಕಳೆದೊಂದು ವರ್ಷದಿಂದ ಮತ್ತೆ ದಸರಾಕ್ಕಾಗಿ ಕಾದು ಕುಳಿತಿದ್ದ ಜನತೆಯ ಮುಖದಲ್ಲಿ ಮಂದಹಾಸ ಮಿನುಗಿಸಲು ಮತ್ತೆ ದಸರಾ ಬಂದಿದ್ದು ಇನ್ನೊಂದೆ ದಿನ ಬಾಕಿ ಉಳಿದಿದೆ. ನಾಡಹಬ್ಬ ದಸರಾ ವಿಶ್ವವಿಖ್ಯಾತಗೊಂಡಿದೆ. ದೇಶ ವಿದೇಶಗಳಿಂದ ಲಕ್ಷಾಂತರ ಮಂದಿ ಆಗಮಿಸಲಿದ್ದು, ಜನತೆಗೆ ರಕ್ಷಣೆ ನೀಡಲು ನಾವು ಸಿದ್ಧರಿದ್ದೇವೆ ಎಂದಿದೆ ಖಾಕಿ ಪಡೆ.

ದಸರಾ ಮೈಸೂರಿನಲ್ಲಿ ಗುರುತಿಸಿಕೊಂಡ ಹಬ್ಬವಾಗಿದ್ದು, 10ದಿನಗಳ ಕಾಲ ನಡೆಯಲಿರುವ  ಈ ಕಾರ್ಯಕ್ರಮಕ್ಕೆ ಕಾರ್ಯಕ್ರಮ ನೀಡಲು ಹಾಗೂ ಕಾರ್ಯಕ್ರಮ ನೋಡಲು ಹಲವಾರು ಮಂದಿ ಆಗಮಿಸುತ್ತಾರೆ. ಅವರಿಗೆ ರಕ್ಷಣೆ, ಭದ್ರತೆ ನೀಡಬೇಕಾಗಿರುವುದು ಇಲ್ಲಿನ ಪೊಲೀಸ್ ಇಲಾಖೆಯ ಕರ್ತವ್ಯವಾಗಿದ್ದು, ಈಗಾಗಲೇ ಖಾಕಿ ಪಡೆ ಭದ್ರತೆ ಕೈಗೊಂಡಿದ್ದು, ಸರ್ಪಗಾವಲು ನಡೆಸಿದೆ. ಈಗಾಗಲೇ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದ್ದು, ಮೈಸೂರಿನ ಪ್ರಮುಖ ಸ್ಥಳಗಳಲ್ಲಿ ಈಗಾಗಲೇ ಸಿಸಿಕ್ಯಾಮರಾಗಳನ್ನು ಅಳವಡಿಸಲಾಗಿದೆ, ಅದನ್ನು ಮಾನಿಟರ್ ಮಾಡಲು ಓರ್ವ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಗರಕ್ಕಾಗಮಿಸುವ ಪ್ರತಿಯೋರ್ವ ವ್ಯಕ್ತಿಯ ಚಲನ ವಲನದ ಮೇಲೆ ಕ್ಯಾಮರಾ ಕಣ್ಣಿರಲಿದೆ. ಫಲಪುಷ್ಪಪ್ರದರ್ಶನದಲ್ಲಿ, ಅರಮನೆ ಆವರಣ, ಮಹಾರಾಜ ಮೈದಾನ, ಎಲ್ಲ ಪ್ರಮುಖ ವೃತ್ತಗಳು, ಚಾಮುಂಡಿ ಬೆಟ್ಟ, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣಗಳಲ್ಲಿಯೂ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಪೊಲೀಸ್ ಸಿಬ್ಬಂದಿಗಳೂ ಅಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ವಿಶೇಷ ಭದ್ರತೆಗಾಗಿ ಚಾಮರಾಜನಗರ, ಹುಬ್ಬಳ್ಳಿ, ಧಾರವಾಡ, ಸೇರಿದಂತೆ ಹಲವು ಕಡೆಗಳಿಂದ ಪೊಲೀಸ್ ಸಿಬ್ಬಂದಿಗಳು, ಎಸಿಪಿಗಳು, ಡಿಸಿಪಿಗಳು, ಎಸ್ಪಿಗಳು ಆಗಮಿಸಲಿದ್ದಾರೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ವಿಷ್ಣುವರ್ಧನ್ ತಿಳಿಸಿದರು. ನಾಲ್ಕರಿಂದ ಐದು ಸಾವಿರ ಪೊಲೀಸರು ಭದ್ರತೆ ಕಲ್ಪಿಸಲಿದ್ದು, ಡಾಗ್ ಸ್ಕ್ವಾಡ್, ಬಾಂಬ್ ನಿಷ್ಕ್ರೀಯ ದಳ, ಮೆಟಲ್ ಡಿಟೆಕ್ಟರ್ ಗಳು ಪಾಲ್ಗೊಳ್ಳಲಿವೆ. ಪ್ರಮುಖ ಸ್ಥಳಗಳಲ್ಲಿ ಮೆಟಲ್ ಡಿಟೆಕ್ಟರ್ ಗಳನ್ನು ಇರಿಸಿ ಪ್ರತಿಯೊಬ್ಬರನ್ನೂ ಚೆಕ್ ಮಾಡಿಯೇ ಒಳಗಡೆ ಬಿಡಲಾಗುವುದು. ದಸರಾದಲ್ಲಿ ಬಣ್ಣಬಣ್ಣದ ವಿದ್ಯುದ್ದೀಪಗಳನ್ನು ಅಳವಡಿಸಲಾಗುತ್ತಿದ್ದು, ಲೈಟ್ಸ್ ಗಳನ್ನು ನೋಡಲು ಜನರಿಗೆ ಅನುಕೂಲವಾಗುವಂತೆ ಕೆಲವು ರಸ್ತೆಗಳನ್ನು ವನ್ ವೇ ಮಾಡಲಾಗುವುದು. ಜನತೆ ನಾವು ತಿಳಿಸಿದ ಮಾರ್ಗದಲ್ಲಿಯೇ ಚಲಿಸಿ, ಕಾನೂನು ಸುವ್ಯವಸ್ಥೆಯನ್ನು ಪಾಲಿಸಲು ಸಹಕರಿಸಿ ಎಂದರು.

ಮೈಸೂರು-ಬೆಂಗಳೂರು, ಮೈಸೂರು –ಮಡಿಕೇರಿ, ಮೈಸೂರು-ಊಟಿ, ಮೈಸೂರು-ಹೆಗ್ಗಡದೇವನಕೋಟೆ ಚೆಕ್ ಪೋಸ್ಟ್ ಗಳಲ್ಲಿ ಪ್ರತಿಯೊಂದು ವಾಹನದ ತಪಾಸಣೆಯೂ ನಡೆಲಿದೆ. ನಗರದಿಂದ ಹೊರಹೋಗುವ, ನಗರಕ್ಕೆ ಬರುವ ವಾಹನಗಳನ್ನು ತಪಾಸಣೆ ಮಾಡಿಯೇ ಬಿಡಲಾಗುವುದು ಎಂದು ತಿಳಿಸಿದರು.

ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ಮಾತನಾಡಿ ದಸರಾದಲ್ಲಿ ಎಲ್ಲ ರೀತಿಯಿಂದಲೂ ಭದ್ರತೆ ಒದಗಿಸಲಾಗುವುದು. ಯಾವುದೇ ರೀತಿಯ ಅಹಿತಕರ ಘಟನೆಗಳು  ನಡೆಯದಂತೆ ನೋಡಿಕೊಳ್ಳಲಾಗುವುದು. ಇದಕ್ಕೆ ನಮ್ಮ ಪೊಲೀಸ್ ಸಿಬ್ಬಂದಿಗಳು ಸಹಕರಿಸಲಿದ್ದಾರೆ. ಹೊರ ಜಿಲ್ಲೆಗಳಿಂದಲೂ ಹೆಚ್ಚುವರಿ ಪೊಲೀಸ್ ರನ್ನು ಕರೆಯಿಸಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು. ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಲಾಗುತ್ತಿದ್ದು, ಕಾನೂನು ಪಾಲಿಸದ ಯಾವುದೇ ವ್ಯಕ್ತಿ, ಸಂಘಟನೆಗಳು ಕಂಡು ಬಂದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಒಟ್ಟಿನಲ್ಲಿ ಭದ್ರತೆಯಲ್ಲಿ ದಸರಾ ನಡೆಯಲಿದ್ದು, ಅರಮನೆಯ ಸುತ್ತ ಸುಮಾರು 500ರಿಂದ 600 ಪೊಲೀಸರ ಹದ್ದಿನ ಕಣ್ಣು ಕಾವಲಿರಲಿದೆ. ಸೂಕ್ತ ಭದ್ರತೆಯ ವ್ಯವಸ್ಥೆಯಲ್ಲಿ ಖಾಕಿಪಡೆಯ ಸರ್ಪಗಾವಲಿನಲ್ಲಿ ದಸರಾ ಮಹೋತ್ಸವ ನಡೆಯಲಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: