ಮೈಸೂರು

ಅನುಮಾನದಿಂದ ಮನನೊಂದ ಮಹಿಳೆ ನೇಣಿಗೆ ಶರಣು

ಪತಿ ತನ್ನ ಮೇಲೆ ಅನುಮಾನಪಟ್ಟನೆಂಬ ಕಾರಣಕ್ಕೆ ಮಹಿಳೆಯೋರ್ವರು ಮನನೊಂದು ನೇಣಿಗೆ ಶರಣಾದ ಘಟನೆ  ಮೈಸೂರಿನ ಭೈರವೇಶ್ವರ ನಗರದಲ್ಲಿ ಶನಿವಾರ ನಡೆದಿದೆ.

ನೇಣಿಗೆ ಶರಣಾದ ಮಹಿಳೆಯನ್ನು ಕಾವ್ಯ(25) ಎಂದು ಗುರುತಿಸಲಾಗಿದೆ. ಪಿರಿಯಾಪಟ್ಟಣ ತಾಲೂಕಿನ ಮೆಲ್ಲಹಳ್ಳಿಯ ಕಾವ್ಯ ಅವರನ್ನು ಕೆ.ಆರ್.ನಗರ ನಿವಾಸಿ ಮಾರುತಿ ಪ್ರಸಾದ್(30) ಎಂಬಾತನೊಂದಿಗೆ ವಿವಾಹ ಮಾಡಿ ಕೊಡಲಾಗಿತ್ತು. ಆದರೆ ಗಂಡ-ಹೆಂಡತಿಯ ನಡುವೆ ಸಾಮರಸ್ಯವಿರಲಿಲ್ಲ. ಪತ್ನಿಯ ನಡತೆಯ ಕುರಿತು ಮಾರುತಿ ಸದಾ ಸಂಶಯಪಡುತ್ತಿದ್ದ ಎನ್ನಲಾಗಿದೆ. ದಂಪತಿಗೆ ಒಂದು ವರ್ಷದ ಹೆಣ್ಣು ಮಗುವಿದ್ದು, ಮಗುವೀಗ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದೆ. ಮಾರುತಿ ಪ್ರಸಾದ್ ಕಾವೇರಿ ಫೋರ್ಡ್ ಶೋರೂಂನ ಮ್ಯಾನೇಜರ್ ಆಗಿದ್ದು, ಪತಿ-ಪತ್ನಿ ಇಬ್ಬರೂ ಇಂಜಿನಿಯರ್ ಪದವೀಧರರಾಗಿದ್ದರು ಎನ್ನಲಾಗಿದೆ.

ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ. ಅವಳು ಅಷ್ಟು ದುರ್ಬಲಳಲ್ಲ. ಆಕೆಯ ಗಂಡನೇ ಕೊಲೆ ಮಾಡಿದ್ದಾನೆ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಮೇಟಗಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply

comments

Related Articles

error: