ಮೈಸೂರು

ಗ್ರಾಹಕರಿಲ್ಲದೇ ಬಣಗುಡುತ್ತಿದೆ ಪಟಾಕಿ ಮಳಿಗೆ : ಠುಸ್ಸಾಯ್ತು ಪಟಾಕಿ ಸೌಂಡು

pataki-2ನಾಡಿನಾದ್ಯಂತ ದೀಪಾವಳಿಯ ಸಂಭ್ರಮ ಮನೆ ಮಾಡಿದೆ. ಹಣತೆಗಳ ಮೂಲಕ ಹೊಸ ಬೆಳಕನ್ನು ಬರಮಾಡಿಕೊಳ್ಳಲು ಸಾರ್ವಜನಿಕರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಒಂದು ವರ್ಗ ಮಾತ್ರ ಈ ಬಾರಿಯ ದೀಪಾವಳಿಯನ್ನು ಬೇಸರದಲ್ಲೇ‌ ಬರಮಾಡಿಕೊಂಡಿದ್ದಾರೆ. ಅವರು ಬೇರಾರು ಅಲ್ಲ. ಅವರೇ ಪಟಾಕಿ ಮಾರಾಟಗಾರರು.  ಈ ಬಾರಿ ಪಟಾಕಿ ಮಳಿಗೆ ಗ್ರಾಹಕರಿಲ್ಲದೆ ಬಣಗುಡುತ್ತಿದೆ. ವರ್ಷಕ್ಕೊಂದು ಬಾರಿ ಒಂದು ತಿಂಗಳುಗಳ ಕಾಲ ಈ ಪಟಾಕಿ ಮಾರಾಟಗಾರರಿಗೆ ಸುಗ್ಗಿಯೋ ಸುಗ್ಗಿ. ದೀಪಾವಳಿ ಹಿಂದಿನ ದಿನದಿಂದ ಹಿಡಿದು ದೀಪಾವಳಿ ಮುಗಿದ ಬಳಿಕವೂ ಪಟಾಕಿಯದ್ದೇ ಸೌಂಡು. ನಂತರ ನಾಲ್ಕು ಕಾರ್ತಿಕ ವಾರದಲ್ಲೂ ಪಟಾಕಿಯ ಹವಾ ಜೋರಾಗಿಯೇ ಇರುತ್ತಿತ್ತು. ಆದರೆ ಈ ಬಾರಿ ಇವರಿಗೆ ವ್ಯಾಪಾರದಲ್ಲಿ ವ್ಯಾಪಕವಾಗಿ ಇಳಿಕೆ ಕಂಡಿದೆ. ಇದು ಇತ್ತೀಚೆಗೆ ನಡೆಯುತ್ತಿರುವ ತಿಳುವಳಿಕೆ ಹಾಗೂ ಜಾಗೃತಿಯ ಮಹಾತ್ಮೆ ಅನ್ನೊದು ಒಂದು ಕಡೆಯಾದರೆ, ಪಟಾಕಿಯಿಂದ ಎಷ್ಟೋ ಮಕ್ಕಳು ದೃಷ್ಟಿ ಹೀನರಾಗಿದ್ದಾರೆ ಅನ್ನೋದು ಮತ್ತೊಂದು ಮಾತು.

ಪಟಾಕಿ ಮಳಿಗೆಯತ್ತ ಜನರ ಸುಳಿವಿಲ್ಲ

ಜಾಗೃತಿಯ ಪರಿಣಾಮವೋ ಏನೋ ಗೊತ್ತಿಲ್ಲ. ಆದರೆ ಜನರು ಪಟಾಕಿಯಿಂದ ಕೊಂಚ ಮಟ್ಟಿಗೆ ದೂರವಿರುವಂತೆ ಕಂಡು ಬಂದಿದೆ. ಮಾಹಿತಿಗಳ ಪ್ರಕಾರ ಈ ಬಾರಿ ಮಾರಾಟದಲ್ಲಿ ಶೇ.೩೦ ರಷ್ಟು ಇಳಿಕೆ ಕಂಡಿದೆ ಎಂದು ವ್ಯಾಪಾರಸ್ಥರೇ ಹೇಳುತ್ತಿದ್ದಾರೆ. ಕಳೆದ ಬಾರಿ ವ್ಯಾಪಾರದ ವೇಳೆ ಮಳೆ ಅಡ್ಡಿಯಾಗಿತ್ತು. ಈ ಬಾರಿ ಜನರೇ ಹೆಚ್ಚಾಗಿ ಬರುತ್ತಿಲ್ಲ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ವ್ಯಾಪಾರ ತೀವ್ರ ಪ್ರಮಾಣದಲ್ಲಿ ಕುಸಿದಿದೆ ಅಂತಾರೆ ಶಿವಶಕ್ತಿ ಪಟಾಕಿ ಮಳಿಗೆಯ ಮಾಲೀಕರಾದ ಯೋಗಿಶ್ ಅವರು.

ಇನ್ನು ಅಷ್ಟೊ-ಇಷ್ಟೊ ಮಂದಿ ಪಟಾಕಿ ಕೊಂಡುಕೊಳ್ಳಲು ಬರುತ್ತಿರುವ ಗ್ರಾಹಕರ ಅಭಿಪ್ರಾಯ ನೋಡಿದರೆ ಅವರು ಶಬ್ಧಮಾಲಿನ್ಯ ಬೇಡ ಎನ್ನುವ ಉತ್ತಮ ಆಲೋಚನೆಯಲ್ಲಿದ್ದಾರೆ.  “ಮಕ್ಕಳಿಗೆ ಚುರುಕಲಿ ಪಟಾಕಿ ಗನ್ ಇದ್ದರೆ ಸಾಕು. ಅದು ಬಿಟ್ಟರೆ ಹಬ್ಬದ ದಿನ ಮಾತ್ರ ಮಕ್ಕಳಿಗೆ ಕೃಷ್ಣನ ಚಕ್ರ ಹಾಗೂ ಹೂಕುಂಡ ಪಟಾಕಿ ಕೊಟ್ಟು ಹಬ್ಬ ಆಚರಿಸುತ್ತೇವೆ. ದೊಡ್ಡ ಪಟಾಕಿಗಳಿಂದಾಗಿ ಶಬ್ಧ ಮಾಲಿನ್ಯವಾಗುತ್ತದೆ. ಹಾಗಾಗಿ  ಈ ಬಾರಿಯಿಂದ ನಾವೇ ಮನೆಯಲ್ಲಿ ನಿಷೇಧ ಮಾಡಿದ್ದೇವೆ ಅಂತಾರೆ ಪಟಾಕಿ ಕೊಳ್ಳಲು ಬಂದ ಗ್ರಾಹಕ ಮಂಜು .ಒಟ್ಟಾರೆ ಬೆಳಕಿನ ಹಬ್ಬವನ್ನು ದೀಪಗಳ ಮೂಲಕ ಬೆಳಗಿಸುವ ಜಾಗೃತಿಯ ಕಾನ್ಸೆಪ್ಟ್ ಉತ್ತಮವೇ. ಆದರೆ ಪಟಾಕಿ ವ್ಯಾಪಾರ ಈ ಬಾರಿ ಡಬಲ್ ಠುಸ್ ಆಗಿರೋದು ಮಾತ್ರ ವಿಪರ್ಯಾಸ.

ಸುರೇಶ್.ಎನ್.

Leave a Reply

comments

Related Articles

error: