ದೇಶಪ್ರಮುಖ ಸುದ್ದಿವಿದೇಶ

ಉತ್ತರ ಕೊರಿಯಾ – ಪಾಕಿಸ್ತಾನ ಅಣ್ವಸ್ತ್ರ ತಂತ್ರಜ್ಞಾನ ಹಸ್ತಾಂತರ ಸಂಬಂಧ ತನಿಖೆಗೆ ಆಗ್ರಹಿಸಿದ ಭಾರತ

ನ್ಯೂಯಾರ್ಕ್, ಸೆ.19 : ಉತ್ತರ ಕೊರಿಯಾ – ಪಾಕಿಸ್ತಾನ ನಡುವಿನ ತಂತ್ರಜ್ಞಾನ ಹಸ್ತಾಂತರ ಪ್ರಕರಣ ಕುರಿತು ತನಿಖೆ ನಡೆಸುವಂತೆ ಭಾರತ ಆಗ್ರಹಿಸಿದೆ. ನ್ಯೂಯಾರ್ಕ್‍ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಟಿಲ್ಲರ್ಸನ್ ಹಾಗೂ ಜಪಾನ್ ವಿದೇಶಾಂಗ ಸಚಿವ ಟಾರೋ ಕೋನೋ ಅವರನ್ನು ಭೇಟಿ ಮಾಡಿ ನಡೆಸಿದ ತ್ರಿಪಕ್ಷೀಯ ಮಾತುಕತೆ ವೇಳೆ ಈ ವಿಷಯವನ್ನು ಭಾರತ ಪ್ರಸ್ತಾಪ ಮಾಡಿದೆ.

ಸಭೆಯ ವೇಳೆ ಮಾತನಾಡಿದ ಸುಷ್ಮಾ ಸ್ವರಾಜ್ ಅವರು, ಉತ್ತರ ಕೊರಿಯಾದ ಅಣ್ವಸ್ತ್ರ ಬೆದರಿಕೆಯನ್ನು ತೀವ್ರವಾಗಿ ಖಂಡಿಸಿದರು. ಉತ್ತರ ಕೊರಿಯಾದೊಂದಿಗೆ ಅಣ್ವಸ್ತ್ರ ತಂತ್ರಜ್ಞಾನದ ಸಂಪರ್ಕ ಹೊಂದಿರುವ ರಾಷ್ಟ್ರವೇ ಈಗಿನ ಪರಿಸ್ಥಿತಿ ಹೊಣೆಗಾರ ಎಂದು ಪರೋಕ್ಷವಾಗಿ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಉತ್ತರ ಕೊರಿಯಾಗೆ ಅಣ್ವಸ್ತ್ರ ತಂತ್ರಜ್ಞಾನ ಪ್ರಸರಣ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ತನಿಖೆಯ ಅಗತ್ಯವಿದೆ ಎಂದು ಒತ್ತಿ ಹೇಳಿದ್ದಾರೆ.

ಸುಷ್ಮಾ ಅವರ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಅವರು ಈ ವಿಷಯವನ್ನು ಖಚಿತಪಡಿಸಿದ್ದು, ಪ್ರಸ್ತುತ ಎಲ್ಲ ಬಗೆಯ ವಿವರವನ್ನೂ ನೀಡಿದ್ದೇವೆ. ಯಾವ ದೇಶದ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ಎಲ್ಲರಿಗೂ ತಿಳಿದಿದೆ. ಹೀಗಾಗಿ ಆ ದೇಶದ ಹೆಸರು ಹೇಳುವ ಅಗತ್ಯವಿಲ್ಲ. ಅಂತೆಯೇ ಉತ್ತರ ಕೊರಿಯಾದ ಅಣ್ವಸ್ತ್ರ ಯೋಜನೆ ಕುರಿತಂತೆ ಹಾಗೂ ಆ ದೇಶಕ್ಕೆ ನೆರವು ನೀಡುತ್ತಿರುವ ದೇಶಗಳ ವಿರುದ್ಧ ವಿಶ್ವಸಮುದಾಯ ಕಠಿಣ ನಿರ್ಧಾರ ತಳೆಯುವ ಅಗತ್ಯವಿದೆ ಎಂದು ಪುನರುಚ್ಚರಿಸಿದರು.

ತ್ರಿಪಕ್ಷೀಯ ಸಭೆಯ ವೇಳೆ ಹಿಂದೂ ಮಹಾಸಾಗರ ಮತ್ತು ಏಷ್ಯಾ ಪೆಸಿಫಿಕ್ ವಲಯದಲ್ಲಿ ಎದುರಾಗಿರುವ ಸಾಗರ ಭದ್ರತೆಯ ಸವಾಲು ಮತ್ತು ಸಂಪರ್ಕದ ಕುರಿತು ಚರ್ಚೆ ನಡೆಸಲಾಯಿತು ಎಂದು ರವೀಶ್ ಕುಮಾರ್ ಮಾಹಿತಿ ನೀಡಿದರು.

(ಎನ್.ಬಿ)

Leave a Reply

comments

Related Articles

error: