ಕ್ರೀಡೆಮೈಸೂರುಸಿಟಿ ವಿಶೇಷ

ಪ್ಯಾರಾ ಸೈಲಿಂಗ್ ನಲ್ಲಿ ಗುರುತಿಸಿಕೊಂಡ ಮೈಸೂರಿನ ಹೆಣ್ಣು ಮಗಳು ರುಕ್ಮಿಣಿ ಚಂದ್ರನ್ : ಸಾಹಸಕ್ರೀಡೆಗಳಿಗೆ ಜಾಗದ ಕೊರತೆ ಅಸಮಾಧಾನ

rukminiಕೆಲವು ಮಹಿಳೆಯರು ಜಿರಳೆ ನೋಡಿದರೇನೇ ದೆವ್ವ ಮೆಟ್ಟಿದಂತೆ ಆಡುತ್ತಾರೆ. ಇನ್ನು ಶಿಲಾರೋಹಣ, ಚಾರಣ ಅಂದರೆ ಅವೆಲ್ಲಾ ನಮ್ಮಿಂದ ಸಾಧ್ಯನಾ ಅನ್ನೋ ಪ್ರಶ್ನಾರ್ಥಕ ಚಿಹ್ನೆಯೊಂದು ಮುಖದಲ್ಲಿ ಎದ್ದು ಕಾಣಿಸುತ್ತದೆ. ಸ್ತ್ರೀ ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಲ್ಲಳು. ಆಕೆಗೆ ಸ್ಫೂರ್ತಿದಾಯಕ ವಾತಾವರಣ ಬೇಕಷ್ಟೇ.

ಆಕಾಶದ ನೀಲಿಯಲ್ಲಿ, ಚಂದ್ರತಾರೆ ತೊಟ್ಟಿಲಲ್ಲಿ, ಬೆಳಕನಿತ್ತು ತೂಗಿದಾಕೆ ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ ಎಂದರೆ ಅಷ್ಟೇ ಸಾಕೇ? ಎಂಬ ಜಿ.ಎಸ್.ಶಿವರುದ್ರಪ್ಪ ಅವರ ಹಾಡಿನ ಸಾಲುಗಳು ಥಟ್ಟನೇ ನೆನಪಾಗಿದ್ದು ಅವರನ್ನು ನೋಡಿ.
ಮುಖದಲ್ಲಿ ಮಂದಹಾಸ, ಮತ್ತೆ ಮತ್ತೆ ಏನನ್ನಾದರೂ ಸಾಧಿಸಬೇಕೆಂಬ ಛಲದ ಹೊಳಪು ಅವರ ಕಂಗಳಲ್ಲಿ ಮನೆ ಮಾಡಿತ್ತು. ನೋಡಿದಾಕ್ಷಣವೇ ಅನ್ನಿಸೋದು ಇವರು ಸ್ನೇಹಜೀವಿ. ಈಗ ಅವರಾರೆಂದು ಎಲ್ಲರಿಗೂ ಕುತೂಹಲ ಮೂಡುವುದು ಸಹಜ. ಅವರೇ ಸಾಹಸ ಕ್ರೀಡಾ ಪ್ರಿಯೆ ರುಕ್ಮಿಣಿ ಚಂದ್ರನ್. ಪ್ಯಾರಾಸೈಲಿಂಗ್ ನಲ್ಲಿ ಗುರುತಿಸಿಕೊಂಡ ದೇಶದ ಒಬ್ಬಳೇ ಒಬ್ಬಳು ಹೆಣ್ಣು ಮಗಳು. ಹುಟ್ಟಿದ್ದು, ಬೆಳೆದಿದ್ದು, ಓದಿದ್ದು ಎಲ್ಲಾ ಮೈಸೂರಿನಲ್ಲಿಯೇ. ಬನ್ನಿಮಂಟಪ ಬಳಿ ಅವರ ನಿವಾಸ.

ನಿಮ್ಮ ಹವ್ಯಾಸಗಳೇನು ಅಂತ ಕೇಳಿದಾಕ್ಷಣ ಕೆಲವರು ಟಿವಿ ನೋಡೋದು, ಹಾಡುಕೇಳೊದು, ಪುಸ್ತಕ ಓದೋದು, ಅಡುಗೆ ಮಾಡೋದು ಅಷ್ಟಕ್ಕೆ ಸೀಮಿತಗೊಳಿಸಿ ಬಿಡುತ್ತಾರೆ. ಆದರೆ ರುಕ್ಮಿಣಿ ಚಂದ್ರನ್ ಅವರ ಹವ್ಯಾಸಗಳನ್ನು ಕೇಳಿದರೆ ನಿಜಕ್ಕೂ ದಂಗಾಗುವ ಸರದಿ ನಮ್ಮದು ಯಾಕೆಂದರೆ ಚಾರಣ, ಶಿಲಾರೋಹಣ, ಪರ್ವತಾರೋಹಣ, ಈಜು, ಆಕಾಶದಲ್ಲಿ ಸಾಹಸಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದೆಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ವಾರಕ್ಕೊಮ್ಮೆಯಾದರೂ ಅವರಿಗೆ ನೀರಿನಲ್ಲಿ ಸಾಹಸಕ್ರೀಡೆಗಳನ್ನು ನಡೆಸಲೇಬೇಕಂತೆ. ಇಲ್ಲದಿದ್ದರೆ ಲವಲವಿಕೆ ಇರಲ್ಲ ಅನ್ನೋ ಭಾವನೆ ಅವರದ್ದು. ಅಂಥಹವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಸರ್ಕಾರಗಳಿಂದ ನಡೆಯಬೇಕು. ಸಿಟಿಟುಡೆಯೊಂದಿಗೆ ಅವರು ಬಿಚ್ಚಿಟ್ಟ ಮಾತುಗಳು.

ಸಾಹಸ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು ಅಂತ ಅನ್ನಿಸಿದ್ದು..?
ಚಿಕ್ಕವಳಿರುವಾಗಲೇ ಅದರಲ್ಲಿ ತುಂಬಾ ಆಸಕ್ತಿ ಇತ್ತು. ಮೂರನೇ ತರಗತಿಯಲ್ಲಿರುವಾಗಲೇ ಬುಲ್ ಬುಲ್ ಆರಂಭವಾಗಿತ್ತು. ಮಾಧ್ಯಮಿಕ ಹಂತದಲ್ಲಿ ಸ್ಕೌಟ್ಸ್ &ಗೈಡ್ಸ್, 8ನೇ ತರಗತಿಯಿಂದ ಪಿಯುಸಿ ತನಕ ಆರ್ಮಿವಿಂಗ್ ಹಾಗೂ 8ರಿಂದ ಪಿಯುಸಿವರೆಗೂ ಎನ್.ಸಿ.ಸಿಯಲ್ಲಿ ತೊಡಗಿಸಿಕೊಂಡೆ. ರೈಫಲ್ ಶೂಟಿಂಗ್, ಟ್ರಕ್ಕಿಂಗ್ ತರಬೇತಿಗಳು ಆರಂಭವಾದವು. ರೈಫಲ್ ಶೂಟಿಂಗ್ ನಲ್ಲಿ ಪ್ರಥಮ ಬಹುಮಾನವು ದೊರಕಿತು. ನಂತರ ಪದವಿಯಲ್ಲಿ ಹುಡುಗಿಯರಿಗಾಗಿ ಏರವಿಂಗ್, ಗ್ಲೈಡಿಂಗ್, ಪ್ಯಾರಾ ಸೈಲಿಂಗ್ ಏರೋ ಸ್ಪೋರ್ಟ್ಸ್ ಆರಂಭವಾಯ್ತು ಅದರಲ್ಲೂ ತೊಡಗಿಸಿಕೊಂಡೆ. ನಂತರ ವೈವಾಹಿಕ ಜೀವನಕ್ಕೆ ಕಾಲಿರಿಸಿದೆ.

ನಿಮ್ಮ ಕುಟುಂಬದ ಬೆಂಬಲ..?
ಪತಿ, ಮೂವರು ಮಕ್ಕಳು ನನಗೆ ತುಂಬಾನೇ ಬೆಂಬಲ ನೀಡ್ತಾರೆ. ಮಕ್ಕಳಿಗೆ ಸಾಹಸ ಕ್ರೀಡೆಗಳ ಕುರಿತು ಆಸಕ್ತಿ ಇದೆ. ಮಗ ಈಗಲೂ ವೀಕೆಂಡ್ ಲ್ಲಿ ಟ್ರಕ್ಕಿಂಗ್ ಹೋಗ್ತಾ ಇರ್ತಾನೆ. ಪತಿಗೆ ಗ್ಲೈಡಿಂಗ್, ಪ್ಯಾರಾಸೈಲಿಂಗ್ ಇಷ್ಟ. ಅವರು ಅದನ್ನು ಕಲಿಸುತ್ತಿದ್ದರು. ಜನರಲ್ ತಿಮ್ಮಯ್ಯ ನ್ಯಾಷನಲ್ ಅಕಾಡಮಿ ಆಫ್ ಅಡ್ವೆಂಚರ್ ನಲ್ಲಿ ಕೆಲಸವೂ ದೊರಕಿತು. ಬಳಿಕ ನನ್ನದೇ ಒಂದು ಸಂಸ್ಥೆ ಆರಂಭಿಸಿದರೆ ಹೇಗೆ ಎನ್ನುವ ಆಲೋಚನೆ ಹುಟ್ಟಿಕೊಂಡಿತು. ಅದರಂತೆ 1990ರಲ್ಲಿ ಅಲ್ಮನಾಕ್ ಅಡ್ವೆಂಚರ್ ಕ್ಲಬ್ ರೂಪುಗೊಂಡಿತು.

ಇವೆಲ್ಲದರ ನಡುವೆ ಎಡರು-ತೊಡರು..?
ಹಾಂ. ಸ್ವಲ್ಪ ತೊಂದರೆ ಅನುಭವಿಸಿದೆ. ಹೊಲಿಗೆ ತಿಳಿದಿದ್ದರಿಂದ ನಾನೇ ಖುದ್ದು ಸಾಹಸ ಕ್ರೀಡೆಗಳಿಗೆ ಬೇಕಾದ ವಸ್ತುಗಳನ್ನು ತಯಾರಿಸಲು ಆರಂಭಿಸಿದೆ. ಅಂದರೆ ಟ್ರಕ್ಕಿಂಗ್ ಬ್ಯಾಗ್, ಸ್ಲೀಪಿಂಗ್ ಬ್ಯಾಗ್, ಲೈಫ್ ಜಾಕೆಟ್ , ಶಿಲಾರೋಹಣಕ್ಕಾಗಿ ಹಗ್ಗ, ಸೀಟ್ ಹಾರ್ನೆಸ್ಗಳನ್ನು ತಯಾರಿಸಲು ಆರಂಭಿಸಿದೆ. ಸಾಹಸಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವವರು ಅವುಗಳನ್ನೆಲ್ಲ ಒಯ್ಯುತ್ತಿದ್ದರು. ಇದೀಗ ಸ್ಕೂಲ್ ಬ್ಯಾಗ್ ಗಳು ಸಹ ಇಲ್ಲಿ ಸಿದ್ಧಗೊಳ್ಳುತ್ತಿವೆ.

ತರಬೇತಿ..?
ಕೆಲವರು ಭಯ ಬೀಳುತ್ತಾರೆ. ಅವರಿಗೆ ನನ್ನಿಂದ ಸಾಧ್ಯವಿಲ್ಲವೇನೋ ಎಂಬ ಅಂಜಿಕೆ ಇರುತ್ತದೆ. ಅವರೇ ಸಿದ್ಧಪಡಿಸಿದ ಸಾಧನ ಸಲಕರಣೆಗಳನ್ನು ಬಳಸಿ ಭಾಗವಹಿಸುವುದರಿಂದ ಅಂಜಿಕೆ ಸ್ವಲ್ಪ ಕಡಿಮೆಯಾಗಲಿದೆ. ಚಾರಣ, ಶಿಲಾರೋಹಣ, ಚಿಮಣಿ ಮಧ್ಯೆ ತೆವಳುವ ಕಲೆಯ ತರಬೇತಿಯನ್ನೂ ನೀಡಲಾಗುತ್ತದೆ.ಐಟಿ-ಬಿಟಿ ಕಂಪನಿಯವರು,ಶಾಲಾ-ಕಾಲೇಜು ಮಕ್ಕಳು ಭಾಗವಹಿಸುತ್ತಾರೆ

ಮೈಸೂರಿನಲ್ಲಿ ಸಾಹಸ ಕ್ರೀಡೆಗಳನ್ನು ನಡೆಸಲು ಜಾಗ..?
ಇದೇ ಬೇಸರದ ಸಂಗತಿ. ಎಲ್ಲಾ ಏರೋ ಸ್ಪೋರ್ಟ್ಸ್ ಹುಟ್ಟಿದ್ದೇ ಮೈಸೂರಿನಿಂದ. ಹೆಂಗ್ಲೈಡಿಂಗ್, ಹಾಟ್ ಬಲೂನ್, ಪ್ಯಾರಾ ಮೋಟರ್ಸ್, ಎಲ್ಲಾ ಇಲ್ಲೇ ರೂಪುಗೊಂಡಿದ್ದು. ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಪ್ರಾಕ್ಟೀಸ್ ಮಾಡ್ತಾ ಇದ್ವಿ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ನಮ್ಮ ಚಟುವಟಿಕೆಗಳನ್ನು ನಿಲ್ಲಿಸಿದರು. 1950ರಲ್ಲೇ ಮೈಸೂರು ಮಹಾರಾಜರು ಎನ್.ಸಿ.ಸಿಗೆ ಗ್ಲೈಡಿಂಗ್ ನ್ನು ಪರಿಚಯಿಸಿದರು. ಆದರೆ ಈಗ ಅವೇನೂ ಇಲ್ಲ. ಮೈಸೂರಿನ ಲಕ್ಷಾಂತರ ಮಂದಿ ಗ್ಲೈಡರ್ ಫೈಲಟ್ ಗಳಾಗಿ, ದೊಡ್ಡ ದೊಡ್ಡ ಏರ್ ಕ್ರಾಫ್ಟ್ ಗಳಲ್ಲಿ ಕಮಾಂಡರ್ ಆಗಿ ಹೊರಹೊಮ್ಮಿದ್ದಾರೆ. ಆದರೆ ಈಗ ಅಂತಹ ಯೂನಿಟ್ ನ್ನು ಇಲ್ಲಿ ಕ್ಲೋಸ್ ಮಾಡಿದ್ದಾರೆ. ರಾತ್ರಿ ರೈಲ್ವೆಯಲ್ಲಿ ಬೆಂಗಳೂರಿಗೆ ಹೋಗಿ ಜಕ್ಕೂರು ಏರ್ ಪೋರ್ಟ್ ನಲ್ಲಿ ಪವರ್ ಪ್ಲೈಯಿಂಗ್ ಮಾಡಿ ಪೈಲಟ್ ಗಳಾಗಿದ್ದಾರೆ. ಮಂಡಕಳ್ಳಿ ರನ್ ವೇ ನಲ್ಲಿ ಬೇಡ ಬಿದ್ರೆ ಏಟಾಗತ್ತೆ ಅಂತ ಅಲ್ಲೇ ಮುಂದಿರುವ ಹುಲ್ಲು ಬೆಳೆದಿರುವ ಭೂಮಿಯನ್ನು ಕೊಡಿ. ನಾವು ಅಲ್ಲೇ ಪ್ರಾಕ್ಟೀಸ್ ಮಾಡ್ತೇವೆ ಅಂದ್ರೆ ಅನುಮತಿನೇ ಕೊಡ್ತಿಲ್ಲ. ಈ ಕುರಿತು ಎಷ್ಟೋ ಮನವಿ ಪತ್ರಗಳನ್ನು ಜಿಲ್ಲಾಧಿಕಾರಿ, ಸಂಸದರು, ಮಂತ್ರಿಗಳು ಸೇರಿದಂತೆ ಸಂಬಂಧಪಟ್ಟವರೆಲ್ಲರಿಗೂ ಎಷ್ಟೋ ಬಾರಿ ಕೊಡಲಾಗಿದೆ. ಆದರೆ ಏನೂ ಪ್ರಯೋಜನ ಮಾತ್ರ ಆಗಿಲ್ಲ. ಪತ್ರಗಳು ಕಸದ ಬುಟ್ಟಿ ಸೇರಿದವೇ ವಿನಃ ಯಾವುದೇ ಪ್ರಯೋಜನ ಮಾತ್ರ ಆಗಿಲ್ಲ. ನಾವು ಹುಟ್ಟಿ ಬೆಳೆದಾಗಿನಿಂದ ಚಾಮುಂಡಿ ಬೆಟ್ಟಕ್ಕೂ ಟ್ರಕ್ಕಿಂಗ್ ಹೋಗ್ತಾ ಇದ್ದೀವಿ. ಈಗ ಅದಕ್ಕೂ ಅನುಮತಿ ಕೊಡ್ತಿಲ್ಲ. ನಮ್ಮದು ನೋಂದಾಯಿತ ಸಂಸ್ಥೆ ಅದಕ್ಕಾದರೂ ಅನುಮತಿ ನೀಡಿ. ನೀವದಕ್ಕೆ ಇಂತಿಷ್ಟು ಹಣ ಅಂತ ನಮೂದಿಸಿ, ಎಲ್ಲವನ್ನೂ ನೀಡುತ್ತೇವೆ. ಭಾಗವಹಿಸುವವರ ಪಟ್ಟಿಯನ್ನೂ ಸಿದ್ಧಗೊಳಿಸಿ ನೀಡುತ್ತೇವೆ ಅಂತ ಕೇಳಿದರೆ ಅವರದೇ ಆದ ಹಲವಾರು ಸಮಸ್ಯೆಗಳನ್ನು ನಮ್ಮ ಮುಂದೆ ಇಡುತ್ತಾರೆ. ಮೈಸೂರು ಪ್ರವಾಸೋದ್ಯಮ ಕ್ಷೇತ್ರವಷ್ಟೇ ಅಲ್ಲ. ಇಲ್ಲಿ ಸಾಹಸ ಕ್ರೀಡೆಗಳನ್ನು ನಡೆಸಲು ಸಾಕಷ್ಟು ಜಾಗಗಳಿವೆ. ಈ ರೀತಿ ಯಾವುದಕ್ಕೂ ಅನುಮತಿ ನೀಡದೇ ಹೋದರೆ ಪ್ರವಾಸೋದ್ಯಮ ಬೆಳೆಯೋದಾದರೂ ಹೇಗೆ? ಸಾಹಸಕ್ರೀಡೆಗಳು ನಡೆಯೋದಾದರೂ ಹೇಗೆ, ಜನರಿಗೆ ಪರಿಚಯವಾಗೋದಾದ್ರೂ ಹೇಗೆ? 12 ವರ್ಷಗಳ ಕಾಲ ವೈಲ್ಡ್ ಲೈಫ್ ಟ್ರಕ್ಕಿಂಗ್ ಮಾಡಿದ್ದೇನೆ. ಆದರೆ ಈಗ ಅದನ್ನು ಸಹ ಮಾಡೋಕೆ ಅನುಮತಿ ಸಿಗ್ತಿಲ್ಲ. ಯಾವುದೇ ಆರೋಗ್ಯಯುತ ಸಾಹಸ ಕ್ರೀಡೆಗಳಿಗೂ ಇಲ್ಲಿ ಅವಕಾಶ ಇಲ್ಲದಂತಾಗಿದೆ. ನಾವು ಪ್ರಕೃತಿ ಜೊತೆ ಸಾಹಸ ಪ್ರಿಯರು. ಆದರೆ ನಮಗಿಲ್ಲಿ ಎಲ್ಲದಕ್ಕೂ ಜಾಗ ಇದ್ದರೂ ಅನುಮತಿ ಸಿಗದೇ ಜಾಗದ ಕೊರತೆ ಕಾಡುತ್ತಿದೆ.

rukmini-0

ಇದು ರುಕ್ಮಿಣಿ ಚಂದ್ರನ್ ಅವರ ಅಸಮಾಧಾನದ ನುಡಿ. ಅವರು ಹೇಳಿರುವುದರಲ್ಲೂ ಅರ್ಥವಿದೆ. ಪ್ರವಾಸಿ ಸ್ಥಳಗಳು, ಟ್ರಕ್ಕಿಂಗ್ ನಡೆಸುವ ಜಾಗಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆದರೂ ಸಂಬಂಧಪಟ್ಟವರು ಕಣ್ಮುಚ್ಚಿ ಕುಳಿತಿರುತ್ತಾರೆ. ಆದರೆ ಆರೋಗ್ಯಯುತ ಚಟುವಟಿಕೆಗಳಿಗೆ ಮಾತ್ರ ಎಲ್ಲಿಯೂ ಜಾಗವಿರಲ್ಲ. ಎಂತಹ ವಿಪರ್ಯಾಸ. ಅವರ ವಯಸ್ಸು 50 ಸಮೀಪಿಸಿದರೂ ಅವರಲ್ಲಿನ ಬತ್ತದ ಉತ್ಸಾಹ ಯುವಜನತೆಯನ್ನು ನಾಚಿಸುವಂಥದ್ದು. ಇದು ಕೇವಲ ಅತಿಶಯೋಕ್ತಿಯಲ್ಲ. ದೆಹಲಿಯಲ್ಲಿರುವ ನ್ಯಾಶನಲ್ ಅಡ್ವೆಂಚರ್ ಫೌಂಡೇಶನ್ ಜೊತೆ ಅವರ ಅಲ್ಮನಾಕ್ ಫೌಂಡೇಶನ್ ಮಿಳಿತಗೊಂಡು ಚಾಪ್ಟರ್ ಕರ್ನಾಟಕ II ಆಗಿ ರೂಪುಗೊಂಡಿದೆ.

ಯುವಜನರಲ್ಲಿ ಸಾಹಸ ಪ್ರವೃತ್ತಿ, ಧೈರ್ಯ, ನಾಯಕತ್ವಗುಣ ಬೆಳೆಸಿ, ಅಂಜಿಕೆ ದೂರ ಮಾಡಿ ದೈಹಿಕ ಮತ್ತು ಮಾನಸಿಕ ದೃಢತೆ ಹೆಚ್ಚಿಸಲೋಸುಗ ಈ ಸಾಹಸ ಕ್ರೀಡೆಯನ್ನು ಅವರು ನಡೆಸುತ್ತಿದ್ದಾರೆ. ಅವರ ವಿದ್ಯಾರ್ಥಿ ಇದೀಗ ಸ್ಕೌಟ್ಸ್ & ಗೈಡ್ಸ್ ಆರ್ಗನೈಸರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಪಿ.ಚಂದ್ರು ಮಾತನಾಡಿ ಅವರು ನಮಗೆ ತುಂಬಾನೇ ಸಹಕಾರ ಕೊಡುತ್ತಾರೆ. ಯಾವತ್ತೂ ನಾನು ವಿದ್ಯಾರ್ಥಿ. ಅವರು ಗುರು ಅನ್ನೋ ತರ ನೋಡಿಲ್ಲ. ಒಂದು ರೀತಿಯಲ್ಲಿ ನಾನು ಈ ಹಂತಕ್ಕೆ ಬರೋದಿಕ್ಕೆ ಅವರೇ ಕಾರಣ. 15ದಿನಗಳ ಕಾಲ ನಡೆಯೋ ಶಿಬಿರದಲ್ಲಿ ಅವರು ನಮ್ಮನ್ನು ಚೆನ್ನಾಗಿಯೆ ನೋಡಿಕೊಳ್ಳುತ್ತಾರೆ. ಎಷ್ಟೊಂದು ಶಿಬಿರ ನಡೆಸಿದ್ದೇವೆ. ಒಮ್ಮೆಯೂ ಒಂದು ಸಣ್ಣ ಗಾಯ ಕೂಡಾ ಯಾರಿಗೂ ಆಗಿಲ್ಲ. ಇಷ್ಟೆಲ್ಲ ಒಳ್ಳೆಯ ರೀತಿಯಿಂದ ಮಾಡಿದರೂ ಮಂಡಕಳ್ಳಿಯ ಬಳಿ ಸಾಹಸ ಕ್ರೀಡೆಗಳನ್ನು ಮಾಡೋದಿಕ್ಕೆ ಸರ್ಕಾರ ನಮಗೆ ಅನುಮತಿಯನ್ನು ಕೊಡುತ್ತಿಲ್ಲ. ಅವರು ಕೇವಲ ಪ್ರೈವೇಟ್ ಸ್ಕೂಲ್ ಗಳಿಗೆ ಮಾತ್ರವಲ್ಲ. ಸರ್ಕಾರಿ ಶಾಲೆಯ ಮಕ್ಕಳಿಗೂ ಸ್ವ ಇಚ್ಛೆಯಿಂದ ಶಿಬಿರಗಳನ್ನು ನಡೆಸುತ್ತಾರೆ. ಇನ್ನಾದರೂ ಸಂಬಂಧಪಟ್ಟವರು ಅನುಮತಿ ನೀಡಿದ್ದರೆ ಒಳ್ಳೆಯದಿತ್ತು. ಮೈಸೂರಿನಲ್ಲಿ ಸಾಹಸ ಕ್ರೀಡೆಗಳು ಮತ್ತು ಪ್ರವಾಸೋದ್ಯಮ ಇನ್ನೂ ಚೆನ್ನಾಗಿ ಬೆಳೆಯುತ್ತಿತ್ತು ಎಂದು ಖೇದ ವ್ಯಕ್ತಪಡಿಸಿದರು.

ಇನ್ನೋರ್ವ ಇನ್ಸ್ ಸ್ಟ್ರಕ್ಟರ್ ಎಂ.ಎಂ.ಪ್ರವೀಣ್ ಕುಮಾರ್ ಮಾತನಾಡಿ ನಾನು ಅವರ ಜೊತೆ 18 ವರ್ಷಗಳಿಂದ ಶಿಬಿರಗಳಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ತುಂಬಾ ಸಾಹಸಿ ಹೆಣ್ಣು ಮಗಳು. ನಮಗೆ ಒಂದೇ ಪ್ರಾಬ್ಲಂ. ನಮ್ಮ ಸಾಹಸ ಕ್ರೀಡೆಗಳನ್ನು ನಮ್ಮ ನೆಲದಲ್ಲಿ ನಡೆಸೋದಿಕ್ಕೆ ಅವಕಾಶ ಸಿಗುತ್ತಿಲ್ಲ. ಏರ್ ಪೋರ್ಟ್ ಅಂತ ಫಲಕ ಇಳಿ ಬಿಟ್ಟ ಮೇಲೆ ನಮಗೆ ಅಲ್ಲಿ ಅವಕಾಶವೇ ಇಲ್ಲದಂತಾಯಿತು. ದಿನಕ್ಕೊಂದು ವಿಮಾನವೂ ಬರುತ್ತಿಲ್ಲ. ಭದ್ರತೆ, ಭದ್ರತೆ ಅಂತ ಹೇಳ್ತಾರೆ. ನಾವೇನು ಏರ್ ವೇ ಕೇಳುತ್ತಿಲ್ಲ. ಅಲ್ಲೇ ಮುಂದಿರೋ ಖಾಲಿ ಹುಲ್ಲು ಬೆಳೆದ ಜಾಗದಲ್ಲಿ ಅವಕಾಶ ಕೊಡಿ ಅಂತ ಕೇಳುತ್ತಿದ್ದೇವೆ. ಅದಕ್ಕೂ ಅನುಮತಿ ಸಿಗುತ್ತಿಲ್ಲ. ದಸರಾ ಸಮಯದಲ್ಲಿ ವರುಣಾ ಕೆರೆಯಲ್ಲಿ ಮಾಡೋದಷ್ಟೆ. ಹೀಗಾದರೆ ಸಾಹಸ ಕ್ರೀಡೆಗಳು ಬೆಳೆಯೋದಾದರೂ ಹೇಗೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ಮೈಸೂರು ಪ್ರವಾಸೋದ್ಯಮ ಕ್ಷೇತ್ರವಾಗಿ ಗುರುತಿಸಿಕೊಂಡಿದೆ. ಅದರ ಜೊತೆ ಈ ಸಾಸಹಕ್ರೀಡೆಗಳಿಗೂ ಸರ್ಕಾರ ಅವಕಾಶ ಮಾಡಿಕೊಟ್ಟರೆ ಇನ್ನಷ್ಟು ಗುರುತಿಸಿಕೊಳ್ಳಲು ಸಾಧ್ಯ.

ರುಕ್ಮಿಣಿ ಚಂದ್ರನ್ ಅವರು ಎಲ್ಲ ಮಹಿಳೆಯರಿಗೂ ಮಾದರಿಯಾಗಿದ್ದು, ಧೈರ್ಯವೊಂದಿದ್ದರೆ ಬದುಕಿನಲ್ಲಿ ಏನನ್ನಾದರೂ ಸಾಧಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಅವರು ಸಾಹಸಕ್ರೀಡೆಗೆ ತಯಾರಿಸುವ ಸಾಧನ ಸಲಕರಣೆಗಳು, ಶಾಲಾ-ಕಾಲೇಜು ಬ್ಯಾಗ್ ಗಳು NOMADS ಹೆಸರಿನಿಂದಲೇ ಗುರುತಿಸಿಕೊಂಡಿವೆ. ಅವರ ಸಾಹಸಗಾಥೆಗಳು ಹೀಗೆ ನಿರಂತರವಾಗಿರಲಿ.

ಸುಹಾಸಿನಿ ಹೆಗಡೆ

Leave a Reply

comments

Related Articles

error: