ಮೈಸೂರು

ಇಂಜಿನಿಯರ್ ಬಸವರಾಜ್ ಹತ್ಯೆ ಪ್ರಕರಣ : ಮೂವರು ಆರೋಪಿಗಳ ಬಂಧನ

ಕೆ.ಆರ್.ಎಸ್ ರಸ್ತೆಯ ಕುಸುಮ ಚಂದ್ರಶೇಖರ್ ಕಲ್ಯಾಣ ಮಂಟಪದ ಮುಂಭಾಗ ಚಾಮುಂಡೇಶ್ವರಿ ರೈಲ್ವೆ ಬಡಾವಣೆಗೆ ಹೋಗುವ ಮಣ್ಣಿನ ರಸ್ತೆಯ ಬದಿಯಲ್ಲಿ ಅಕ್ಟೋಬರ್ 18ರಂದು ಇಂಜಿನಿಯರ್ ಬಸವರಾಜ್ ಅಳಗುಂಡಿ ಎಂಬ ವ್ಯಕ್ತಿ ದುಷ್ಕರ್ಮಿಗಳ ಚಾಕುವಿನಿಂದ ಇರಿಯಲ್ಪಟ್ಟು ಕೊಲೆಯಾಗಿದ್ದರು. ಕೊಲೆಯ ಜಾಡು ಹಿಡಿದು ಹೊರಟ ಮೇಟಗಳ್ಳಿ ಠಾಣಾ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಶ್ರೀರಂಗಪಟ್ಟಣ ತಾಲೂಕಿನ ಮೊಗರಳ್ಳಿ ಮಂಟಿಯ ಮಂಜುನಾಥ ಅಲಿಯಾಸ್ ಮೋಟು ಬೀಡಿ(19), ಮೈಸೂರಿನ ಲೋಕನಾಯಕ ನಗರದ ಗಣೇಶ ಟೆಂಪಲ್ ಹತ್ತಿರದ ನಂದೀಶ್(23), ಮೈಸೂರಿನ ಭೈರವೇಶ್ವರ ನಗರದ ವಿನಯ್ ಕುಮಾರ್ ಅಲಿಯಾಸ್ ವಿನೋದ್(19) ಎಂದು ಹೇಳಲಾಗಿದೆ.

ಬಸವರಾಜ್ ಅವರ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದು ಅವರು ವಿರೋಧ ವ್ಯಕ್ತಪಡಿಸಿದಾಗ ಕೊಲೆ ಮಾಡಿ, ಪೊಲೀಸರು ತಮ್ಮನ್ನು ಬಂಧಿಸಬಹುದೆನ್ನುವ ಭಯಕ್ಕೆ ಕೆರೆಯಲ್ಲಿ ಮೊಬೈಲ್ ನ್ನು ಬಿಸಾಡಿ ಹೋಗಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.

ಬಂಧಿತರು ಕುವೆಂಪುನಗರ ಮತ್ತು ಜಯಲಕ್ಷ್ಮಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರವಾಹನವನ್ನು ಕಳ್ಳತನ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಡ್ರಾಗನ್ ಚಾಕು, ಮೃತನ ಸೋನಿ ಮೊಬೈಲ್ ಪೋನ್, ಸಿಮ್, ದ್ವಿಚಕ್ರವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ 1,00,000ಬೆಲೆಯ ಒಟ್ಟು ಮೂರು ವಾಹನಗಳು ಹಿರೋಹೊಂಡಾ ಫ್ಯಾಷನ್, ಹಿರೋಹೊಂಡಾ ಸ್ಪ್ಲೆಂಡರ್, ಬಜಾಜ್ ಪಲ್ಸರ್ ನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರು ನಗರದ ಕಾನೂನು ಸುವ್ಯವಸ್ಥೆ ವಿಭಾಗದ ಡಿ.ಸಿ.ಪಿ ಡಾ.ಶೇಖರ್ ಹೆಚ್.ಟಿ.ಹಾಗೂ ಎ.ಸಿ.ಪಿ ನರಸಿಂಹರಾಜ, ವಿಭಾಗದವರಾದ ಉಮೇಶ್ ಜಿ.ಶೇಟ್ ಮಾರ್ಗದರ್ಶನದಲ್ಲಿ ಮೇಟಗಳ್ಳಿಠಾಣಾ ಇನ್ಸಪೆಕ್ಟರ್ ಹೆಚ್.ಟಿ.ಸುನಿಲ್ ಕುಮಾರ್, ಪಿ.ಎಸ್.ಐ ಕುಮಾರ್, ಸಿಬ್ಬಂದಿಗಳಾದ ಮಲ್ಲಿಕಾರ್ಜುನಪ್ಪ, ಶಿವನಂಜಪ್ಪ, ಪುರುಷೋತ್ತಮ, ಲಿಂಗರಾಜಪ್ಪ, ಸುರೇಶ್, ಎಲಿಯಾಸ್, ಶಿವಕುಮಾರ್, ವಸಂತ, ಆಶಾ, ಕೃಷ್ಣಮೂರ್ತಿ, ಹಷ್ಮತ್ ಖಾನ್, ಬಿ.ಎನ್.ಗುರುದೇವ್ ಆರಾಧ್ಯ, ಸಿ.ಎಂ.ಮಂಜು, ಶ್ಯಾಮ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಘಟನೆಯ ಹಿನ್ನೆಲೆ:

ಅಕ್ಟೋಬರ್ 18ರಂದು ಬೆಳಿಗ್ಗೆ ಕೆ.ಆರ್.ಎಸ್ ಮಣ್ಣಿನ ರಸ್ತೆಯಲ್ಲಿ ರಕ್ತಸಿಕ್ತವಾದ ಶವವೊಂದು ವಾಯುವಿಹಾರಕ್ಕೆ ತೆರಳಿದವರಿಗೆ ಕಾಣಸಿಕ್ಕಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಲಾಗಿ ಗದಗ ಮೂಲದ ರೋಣ ತಾಲೂಕಿನ ವ್ಯಕ್ತಿ ಬಸವರಾಜು, ಹೆಬ್ಬಾಳದ ಖಾಸಗಿ ಕಂಪನಿಯೊಂದರಲ್ಲಿ ಮೆಕ್ಯಾನಿಕಲ್ ಇಂಜಿನಿಯರ್  ಆಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿತ್ತು.

Leave a Reply

comments

Related Articles

error: