ಮೈಸೂರು

ನಾಡಿನ ರಕ್ಷಣೆಯಲ್ಲಿ ಯುವ ಜನತೆಯ ಪಾತ್ರ ಮಹತ್ತರವಾಗಿದೆ : ಡಾ.ಹೆಚ್.ಸಿ.ಮಹದೇವಪ್ಪ

rajyostfsvs-2ನಗರ ಪ್ರದೇಶಗಳಲ್ಲಿ ಕನ್ನಡದ ಸ್ಥಿತಿ ಶೋಚನೀಯವಾಗಿದೆ. ಯುವಪೀಳಿಗೆಯ ಮನಸ್ಥಿತಿಯೇ ಇದಕ್ಕೆ ಕಾರಣ. ನಾಡಿನ ರಕ್ಷಣೆಯಲ್ಲಿ ಅವರ ಜವಾಬ್ದಾರಿ ಎಷ್ಟು ದೊಡ್ಡದು ಎಂಬುದನ್ನು ಅವರಿಗೆ ಅರ್ಥ ಮಾಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನವೆಂಬರ್ 1ರಂದು ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳಿಗೆ ಡಾ.ಎಚ್.ಸಿ.ಮಹದೇವಪ್ಪ  ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಗೈಯ್ಯುವ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ನಾಡಿನ ನೆಲ, ಜಲ ಭಾಷೆಯ ಉಳಿವಿಗಾಗಿ ಸದಾ ಎಚ್ಚರಿಕೆ ಅಗತ್ಯ. ಯುವ ಪೀಳಿಗೆ ವಿದೇಶಿ ಆಕರ್ಷಣೆಗೆ ಮಾರು ಹೋಗುತ್ತಿದೆ. ಅವರನ್ನು ಇಲ್ಲಿಯೇ ತಡೆದು ನಿಲ್ಲಿಸಬೇಕು ಎಂದು ತಿಳಿಸಿದರು. ಮಾತೃಭಾಷೆಯಲ್ಲಿಯೇ ವೈದ್ಯಕೀಯ ಕ್ಷೇತ್ರದ ಎಲ್ಲ ವಿಷಯಗಳನ್ನು ನೀಡಿದರೆ ಸಾಮಾನ್ಯನಿಗೂ ವಿಷಯ ತಿಳಿಯುತ್ತದೆ. ಅಲ್ಲದೇ ಆರೋಗ್ಯ ಕ್ಷೇತ್ರದಲ್ಲೂ ಸುಧಾರಣೆ ಸಾಧ್ಯ. ವೈದ್ಯಕೀಯ ಕ್ಷೇತ್ರದ ಕೆಲವು ಬೆಳವಣಿಗೆಗಳು ಅಕ್ಷರಸ್ಥರಿಗೂ ತಿಳಿಯುವುದಿಲ್ಲ ಇದರಿಂದ ಗೊಂದಲಕ್ಕೆ ಬೀಳುತ್ತಾರೆ. ಆರೋಗ್ಯ ಸಂಬಂಧಿ ಚರ್ಚೆಗಳು ಕನ್ನಡದಲ್ಲಿ ಲಭ್ಯವಾದರೆ ಸಮಸ್ಯೆಗಳನ್ನು ಹೋಗಲಾಡಿಸಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ  18 ಮಂದಿ ಮಹನೀಯರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ, ಪಿಯುಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಶಾಸಕರಾದ ಎಂ.ಕೆ.ಸೋಮಶೇಖರ್,ಜಿ.ಟಿ.ದೇವೇಗೌಡ, ಮೇಯರ್ ಬಿ.ಎಲ್.ಭೈರಪ್ಪ, ಉಪಮೇಯರ್ ವನಿತಾ ಪ್ರಸನ್ನ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವೈ.ಡಿ.ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ರಾಜ್ಯ ಸಶಸ್ತ್ರ ಪೊಲೀಸ್ ಪಡೆ, ಜಿಲ್ಲಾ ಮೀಸಲು ಸಶಸ್ತ್ರ ಪೊಲೀಸ್ ಪಡೆ, ಸಿವಿಲ್ ಪೊಲೀಸ್ ಪಡೆ, ಗೃಹರಕ್ಷಕದಳ, ಅಶ್ವಾರೋಹಿ ದಳದ ಸಿಬ್ಬಂದಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.

ಆಕರ್ಷಕ ಮೆರವಣಿಗೆಯಲ್ಲಿ ನಡೆದಿದ್ದು ಬೀಸು ಕಂಸಾಳೆ, ಪೂಜಾಕುಣಿತ, ಡೊಳ್ಳುಕುಣಿತ, ನಾದಸ್ವರ ತಂಡಗಳು ಭಾಗವಹಿಸಿದ್ದವು.

Leave a Reply

comments

Related Articles

error: