ಮೈಸೂರು

ಕನ್ನಡ ಮಾತೃಭಾಷೆ ಎಂದು ಹೇಳಿಕೊಳ್ಳಲು ಮುಜುಗರ ಬೇಡ : ಡಾ.ಕವಿತಾ ರೈ

ನಮ್ಮ ತಾಯಿಯನ್ನು ತಾಯಿ ಎಂದು ಕರೆದುಕೊಳ್ಳುವುದರಲ್ಲಿ ಹೇಗೆ ಮುಜುಗರ ಇರಬಾರದೋ ಹಾಗೆಯೇ ಇಂದಿನ ಜಾಗತೀಕರಣದ ಸಂದರ್ಭದಲ್ಲಿ ಕನ್ನಡ ಭಾಷೆಯನ್ನು ನಮ್ಮ ಮಾತೃಭಾಷೆ ಎಂದು ಹೇಳಿಕೊಳ್ಳುವುದರಲ್ಲಿ ಯಾವುದೇ ಮುಜುಗರ ಇರಬಾರದು ಎಂದು ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಕ್ಕಮಹಾದೇವಿ ಅಧ್ಯಯನ ಮತ್ತು ಸಂಶೋಧನಾ ಪೀಠದ ನಿರ್ದೇಶಕಿ ಡಾ.ಕವಿತಾ ರೈ ಹೇಳಿದರು.

ಮೈಸೂರಿನ ಬಿ.ಎನ್.ರಸ್ತೆಯಲ್ಲಿರುವ ಜೆ.ಎಸ್.ಎಸ್. ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಡಾ.ಕವಿತಾ ರೈ ಮಾತನಾಡಿದರು. ಕನ್ನಡ ರಾಜ್ಯೋತ್ಸವವನ್ನು ನಾವು ಯಾರ ಒತ್ತಾಯಕ್ಕೋ ಅಥವಾ ಯಾರದೋ ಆಜ್ಞೆಗೆ ನಡೆಸುವಂಥದ್ದಲ್ಲ. ಕನ್ನಡ ನುಡಿಗೆ ಇರುವ ಪರಂಪರೆ ಮತ್ತು ಶಕ್ತಿಯನ್ನು ನೋಡಿದರೆ ಪ್ರತಿಯೊಬ್ಬರಿಗೂ ಕನ್ನಡ ನುಡಿ ಸಜೀವ ಅಸ್ತಿತ್ವದ ಸಂಕೇತವಾಗಿದೆ ಎನ್ನುವುದು ಅರಿವಾಗುತ್ತದೆ. ಮಾತೃಭಾಷೆಯಲ್ಲಿ ಕಲಿತ ಮಗು ಶ್ರೇಷ್ಠ ಸಂಸ್ಕೃತಿಯನ್ನು ಅಳವಡಿಸಿಕೊಂಡು ಉತ್ತಮ ಕಲ್ಪನೆಯೊಂದಿಗೆ ಬೆಳೆಯುತ್ತದೆ. ಹಾಗೆ ಬೆಳೆಸುವ ಮತ್ತು ಪೋಷಿಸುವ ಶಕ್ತಿ ನಮ್ಮ ಮಾತೃಭಾಷೆ ಕನ್ನಡಕ್ಕಿದೆ ಎಂದರು.

ಕನ್ನಡ ಭಾಷೆ ಇಂದು ಶ್ರೀಮಂತವಾಗಿ ಬೆಳೆಯುತ್ತಿದ್ದು, ಕನ್ನಡ ನಾಡು ಸಂಸ್ಕೃತಿಯನ್ನು ಶ್ರೀಮಂತವಾಗಿ ಬೆಳೆಸುತ್ತಿದೆ. ಭಾಷಾ ಪ್ರಭೇದಗಳ ನಡುವೆಯೇ ಕನ್ನಡ ಭಾಷೆ ಹಿಂದಿನಿಂದಲೂ ವಸಾಹತುಶಾಹಿಯ ಅನುಭವಕ್ಕೆ ತೆರೆದುಕೊಂಡು ಬಂದಿರುವುದು ವಿಶೇಷವಾಗಿದೆ. ಇಂಗ್ಲೀಷ್ ಭಾಷೆಗೆ ಯಾವುದೇ ಶ್ರೇಷ್ಠತೆ ಇಲ್ಲ. ಅದು ತನ್ನ ಸಂಸ್ಕೃತಿ ಕೆಲವು ಅಭಿರುಚಿಗಳನ್ನು ಕಲ್ಪಿಸಿಕೊಡುವ ಮೂಲಕ ಮಾತ್ರ ಗೆಲುವು ಪಡೆಯಿತು ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಸಮುಚ್ಛಯದ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಮಾತನಾಡಿ ಕನ್ನಡ ನಾಡು, ನುಡಿ ಸಂಸ್ಕೃತಿ ಅನನ್ಯವಾದದ್ದು. ಇದು ಒಂದು ಕಾಲದಲ್ಲಿ ಇಡೀ ಭಾರತದಾದ್ಯಂತ ಹಬ್ಬಿತ್ತು. ಪ್ರತಿಯೊಂದು ಕಾಲಘಟ್ಟದಲ್ಲಿಯೂ ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ವಿಭಿನ್ನವಾಗಿ ಕಟ್ಟಿಬೆಳೆಸುವ ಕಾರ್ಯಗಳು ನಿರಂತರವಾಗಿ ನಡೆದುಕೊಂಡು ಬಂದಿವೆ. ಇಂದು ನಮ್ಮಲ್ಲಿಯೂ ಕನ್ನಡ ಪ್ರಜ್ಞೆ ಕಡಿಮೆಯಾಗುತ್ತಿದೆ. ಪ್ರತಿಯೊಬ್ಬ ಕನ್ನಡಿಗನೂ ಇದನ್ನು ಅರಿತು ಜಾಗೃತಗೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳ ವಿಚಾರದೀಪ್ತಿ ಮತ್ತು ಭಾವತರಂಗ ಎಂಬ ಭಿತ್ತಿ ಪತ್ರಿಕೆ ಮತ್ತು ಕೈಬರಹಗಳನ್ನು ಬಿಡುಗಡೆಗೊಳಿಸಲಾಯಿತು.ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಮಹದೇವಪ್ಪ, ಡಾ.ಬಿ.ಪ್ರಭುಸ್ವಾಮಿ, ಪ.ಪೂ.ಕಾಲೇಜಿನ ಪ್ರಾಂಶುಪಾಲ ಎಸ್.ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: