ಮೈಸೂರು

ರಾಜ್ಯ ಸರ್ಕಾರ ಜನಪರ ಆಡಳಿತಕ್ಕೆ ಒತ್ತು ನೀಡುತ್ತಿದೆ: ಡಾ. ಹೆಚ್.ಸಿ. ಮಹದೇವಪ್ಪ

ನಾಲ್ವಡಿ ಕೃಷ್ಣರಾಜ್ ಒಡೆಯರ್ ಸ್ವಾತಂತ್ರ್ಯಪೂರ್ವದಲ್ಲಿಯೇ ಪ್ರಜಾಪ್ರಭುತ್ವದ ಮಾದರಿಯ ಆಡಳಿತ ನೀಡಿ ಪ್ರಜೆಗಳ ಯೋಗಕ್ಷೇಮಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೂಡ ಜನಪರ ಆಡಳಿತಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಹೇಳಿದರು.

ಮೈಸೂರಿನ ಇಟ್ಟಿಗೆಗೂಡು ಕನ್ನಡ ಸಮಿತಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಡಾ. ಹೆಚ್.ಸಿ. ಮಹದೇವಪ್ಪ ಮಾತನಾಡಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತದ ಮಾದರಿಯಲ್ಲಿ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿ ಕರ್ನಾಟಕವನ್ನು ದೇಶದ ಮಾದರಿ ರಾಜ್ಯವನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.

ಅಭಿವೃದ್ಧಿಯಲ್ಲಿ ರಾಜ್ಯ ದೇಶದಲ್ಲೇ ಮುಂಚೂಣಿಯಲ್ಲಿರಬೇಕು. ಸರ್ಕಾರ ಈ ನಿಟ್ಟಿನಲ್ಲಿ ವಿವಿಧ ಮೂಲಗಳಿಂದ ಸಂಪನ್ಮೂಲ ಕ್ರೋಢೀಕರಣ ಮಾಡುತ್ತಿದೆ. ಅಷ್ಟೇ ಅಲ್ಲದೇ ಹಲವು ಅಭಿವೃದ್ಧಿ ಕಾರ್ಯಗಳಿಗೆ ಸಮರ್ಪಕವಾಗಿ ಅನುದಾನ ವಿನಿಯೋಗಿಸುತ್ತಿದೆ. ಕನ್ನಡ ನಾಡು, ನೆಲ, ಜಲ, ಭಾಷೆಯ ರಕ್ಷಣೆ ಮಾಡಲು ಸರ್ಕಾರ ಬದ್ಧವಾಗಿದೆ ಎಂದರು.

ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ರಾಜಮಾತೆ ಪ್ರಮೋದಾದೇವಿ ಒಡೆಯರ್ ಉದ್ಘಾಟಿಸಿದರು. ಈ ಸಂದರ್ಭ ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಮಾಜಿ ಸಚಿವ ಕೋಟೆ ಎಂ.ಶಿವಣ್ಣ, ಮೇಯರ್ ಬಿ.ಎಲ್. ಭೈರಪ್ಪ, ಉಪಮೇಯರ್ ವನಿತಾಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: