ಮೈಸೂರು

ಸೆ.22ರಂದು ರೈತ ಸಂಕಷ್ಟ ಮುಕ್ತಿ ಜಾಥಾ

ಮೈಸೂರು, ಸೆ. 20 : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೆ.22ರಂದು ಮಧ್ಯಾಹ್ನ 1.30ಕ್ಕೆ ನಗರದ ಮೆಟ್ರೊಪೋಲ್‌ ವೃತ್ತದ ಶ್ರೀಗುರು ರೆಸಿಡೆನ್ಸಿಯಿಂದ ಪಾಂಡವಪುರದ ಪಾಂಡವ ಕ್ರೀಡಾಂಗಣದವರೆಗೆ ರೈತ ಸಂಕಷ್ಟ ಮುಕ್ತಿ ಜಾಥಾ ನಡೆಸಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಹೇಳಿದರು.

ರೈತರಿಗೆ ಸಾಲದಿಂದ ಸಂಪೂರ್ಣ ಮುಕ್ತಿ ನೀಡುವುದು ಹಾಗೂ ರೈತರು ಬೆಳೆದ ಬೆಳೆಗೆ ಪ್ರತಿಫಲದಾಯಕ ಬೆಲೆ ಸಿಗಬೇಕು ಎಂಬ ಪ್ರಮುಖ ಹಕ್ಕೊತ್ತಾಯಗಳ ಕುರಿತು ಜನರು ಹಾಗೂ ಸರ್ಕಾರಕ್ಕೆ ಅರಿವು ಮೂಡಿಸಲು ಅಖಿಲ ಭಾರತ ರೈತ ಹೋರಾಟ ಸಮನ್ವಯ ಸಮಿತಿ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ರೈತ ಮುಕ್ತಿ ಜಾಥಾ ಆಯೋಜಿಸಿದೆ. ಹೀಗಾಗಿ, ಮೈಸೂರಿನಿಂದಲೂ ಸೆ.22ರಂದು ಪಾಂಡವಪುರಕ್ಕೆ ಜಾಥಾ ಹೊರಡಲಿದೆ. ಅಂದು ಮಧ್ಯಾಹ್ನ 12ಗಂಟೆಗೆ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ, 1.30ಕ್ಕೆ ಶ್ರೀಗುರು ರೆಸಿಡೆನ್ಸಿಯಿಂದ ಜಾಥಾ ಹೊರಟು ಮಧ್ಯಾಹ್ನ 2ಗಂಟೆಗೆ ಪಾಂಡವಪುರ ತಲುಪಲಿದೆ. ನಂತರ ಮಧ್ಯಾಹ್ನ 2.30ಕ್ಕೆ ಪಾಂಡವಪುರದ ಐದು ದೀಪಗಳ ವೃತ್ತದಿಂದ ಮೆರವಣಿಗೆ ಸಾಗಲಿದೆ. ಕೊನೆಗೆ ಪಾಂಡವ ಕ್ರೀಡಾಂಗಣದಲ್ಲಿ ಬಹಿರಂಗ ಸಮಾವೇಶ ನಡೆಯಲಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸ್ವರಾಜ್‌ ಇಂಡಿಯಾ ನೇತಾರರಾದ ಯೋಗೇಂದ್ರ ಯಾದವ್‌ ಸಮಾವೇಶ ಉದ್ಘಾಟಿಸಲಿದ್ದಾರೆ. ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಪ್ರಾಸ್ತಾವಿಕ ನುಡಿ ನಡೆಸಿಕೊಡಲಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಟಿ.ಗಂಗಾಧರ್ ಅಧ್ಯಕ್ಷತೆ ವಹಿಸಲಿದ್ದು, ರಾಷ್ಟ್ರೀಯ ಕಿಸಾನ್‌ ಮಜ್ದೂರ್ ಸಂಘದ ಅಧ್ಯಕ್ಷ ವಿ.ಎಂ.ಸಿಂಗ್, ಸಂಸದ ರಾಜೀವ್ ಶೆಟ್ಟಿ, ಅಖಿಲ ಭಾರತ ರೈತ ಹೋರಾಟ ಸಮಿತಿ ಸದಸ್ಯ ರಾಜರಾಮ್‌ಸಿಂಗ್‌ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಉರುಗಲವಾಡಿ ರಾಮಯ್ಯ ಮತ್ತು ತಂಡದವರು ರೈತ ಗೀತೆಗಳನ್ನು ಹಾಡಲಿದ್ದಾರೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ವಿಭಾಗೀಯ ಕಾರ್ಯದರ್ಶಿ ರವಿಕಿರಣ್‌ ಪುಣ್ಚ, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಮೈಸೂರು ತಾಲ್ಲೂಕು ಅಧ್ಯಕ್ಷ ಪಿ.ಮರಂಕಯ್ಯ, ಸಹ ಕಾರ್ಯದರ್ಶಿ ಮಂಡಕ್ಕಳ್ಳಿ ಮಹೇಶ್‌ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: