ಕರ್ನಾಟಕ

‘ದುರಹಂಕಾರಿ ಹುಚ್ಚ ವೆಂಕಟ್’ ಚಿತ್ರ ನಿರ್ಮಾಣ : ನಿನ್ನೆಯಷ್ಟೇ ಟ್ರೈಲರ್ ಬಿಡುಗಡೆಗೊಂಡಿದೆ ; ಹುಚ್ಚ ವೆಂಕಟ್

ರಾಜ್ಯ(ಮಡಿಕೇರಿ) ಸೆ.20 :- ಸಮಾಜದ ಶಾಂತಿ ಸುವ್ಯವಸ್ಥೆಗಳನ್ನು ಕಾಪಾಡುವ ಮತ್ತು ಪ್ರತಿಯೊಬ್ಬ ನಾಗರಿಕನ ನೆಮ್ಮದಿಯ ಬದುಕಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ಪೊಲೀಸ್ ಸೇವೆಯನ್ನು ಕೇಂದ್ರವಾಗಿಸಿಕೊಂಡು ‘ದುರಹಂಕಾರಿ ಹುಚ್ಚ ವೆಂಕಟ್’ ಎನ್ನುವ ಚಲನಚಿತ್ರವನ್ನು ನಿರ್ಮಿಸಲು ಮುಂದಾಗಿರುವುದಾಗಿ ಚಿತ್ರ ನಟ, ನಿರ್ಮಾಪಕ ಹುಚ್ಚ ವೆಂಕಟ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.19 ರಂದು ದುರಹಂಕಾರಿ ಹುಚ್ಚ ವೆಂಕಟ್ ಚಲನ ಚಿತ್ರದ ಟ್ರೈಲರ್‍ನ್ನು ಬಿಡುಗಡೆ ಮಾಡಿದ್ದೇನೆ. ಈ ಚಲನ ಚಿತ್ರದಲ್ಲಿ ತಾನು ಪೊಲೀಸ್ ಪಾತ್ರವನ್ನು ನಿರ್ವಹಿಸಲಿದ್ದು, ತನ್ನೊಂದಿಗೆ  ರಮಾನಂದ, ರಮೇಶ್ ಭಟ್, ಕೀರ್ತಿರಾಜ್, ರೇಖಾದಾಸ್ ಸೇರಿದಂತೆ ಹಲ ಖ್ಯಾತನಾಮ ನಟರು ನಟಿಸಲಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕ ನಟಿಯರು ಇರಲಿದ್ದಾರೆ ಎಂದು ತಿಳಿಸಿದರು.

ಚಲನಚಿತ್ರದ ಬಹುತೇಕ ಭಾಗವನ್ನು ಬೆಂಗಳೂರಿನಲ್ಲಿ ಚಿತ್ರೀಕರಿಸಲಿದ್ದು, ಹಾಡುಗಳನ್ನು ಕೊಡಗಿನ ಪರಿಸರದಲ್ಲಿ ಚಿತ್ರೀಕರಿಸಲು ಉದ್ದೇಶಿಸಲಾಗಿದೆ. ಈ ವರ್ಷಾಂತ್ಯದ ಒಳಗಾಗಿ ಚಲನಚಿತ್ರವನ್ನು ಬಿಡುಗಡೆ ಮಾಡುವ ಉದ್ದೇಶ ಹೊಂದಿರುವುದಾಗಿ ತಿಳಿಸಿದ ಹುಚ್ಚ ವೆಂಕಟ್, ಈ ಚಲನಚಿತ್ರಕ್ಕೆ ಕಥೆ, ಚಿತ್ರಕಥೆ, ನಿರ್ದೇಶನ ತಾವೇ ಮಾಡಿರುವುದಾಗಿ ಮಾಹಿತಿ ನೀಡಿದರು.

ಚಲನಚಿತ್ರ ಎನ್ನುವುದು ಕೇವಲ ಮನೋರಂಜನೆಗೆ ಮಾತ್ರ ಸೀಮಿತವೆಂದು ತಾನು ಭಾವಿಸಿಲ್ಲ. ಇದನ್ನು ಮೀರಿ ಉತ್ತಮ ಸಂದೇಶಗಳನ್ನು ನೀಡುವ ಮೂಲಕ ಸಮಾಜದ ಬದಲಾವಣೆ ಸಾಧ್ಯವೆಂದು ಅವರು ಹೇಳಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: