ಕರ್ನಾಟಕ

ಸೆ.25 :  ದಸರಾ ಕವಿಗೋಷ್ಠಿ ; 40 ಕವಿಗಳಿಗೆ ಅವಕಾಶ

ರಾಜ್ಯ(ಮಡಿಕೇರಿ) ಸೆ.20 :- ನಾಡಹಬ್ಬ ಮಡಿಕೇರಿ ದಸರಾ ಪ್ರಯುಕ್ತ ಪ್ರತಿ ವರ್ಷ ಬಹುಭಾಷಾ ಕವಿಗೋಷ್ಠಿಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ ಸೆ.25 ರಂದು  ಕವಿಗೋಷ್ಠಿ ಕಾರ್ಯಕ್ರಮ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆಯಲಿದ್ದು, ಸುಮಾರು 40 ಕವಿಗಳಿಗೆ ಅವಕಾಶ ನೀಡಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕವಿಗೋಷ್ಠಿ ಸಮಿತಿ ಅಧ್ಯಕ್ಷ ಐತಿಚಂಡ ರಮೇಶ್ ಉತ್ತಪ್ಪ, ಎಲ್ಲಾ ಭಾಷೆಯ ಕವನಗಳನ್ನು ಆಹ್ವಾನಿಸಲಾಗಿದ್ದು, ಒಟ್ಟು 160 ಕವನಗಳು ಬಂದಿವೆ. ಹಲವು ಕವನಗಳು ಉತ್ತಮವಾಗಿದ್ದು, ಆಯ್ಕೆ ಮಾಡುವುದು ಕಠಿಣ ಕೆಲಸವಾಗಿತ್ತು. ಈ ಹಿನ್ನೆಲೆಯಲ್ಲಿ ಸಾಹಿತಿ ನಾಗೇಶ್ ಕಾಲೂರು ಅವರ ನೇತೃತ್ವದಲ್ಲಿನ ಆಯ್ಕೆ ಸಮಿತಿಯನ್ನು ರಚಿಸಿ ಜವಾಬ್ದಾರಿ ನೀಡಲಾಯಿತು ಎಂದರು.

ಕೇವಲ ಕವನಗಳನ್ನು ಮಾತ್ರ ಜೆರಾಕ್ಸ್ ಮಾಡಿಸಿ, ಕವಿಗಳ ಹೆಸರನ್ನು ಗೌಪ್ಯವಾಗಿಟ್ಟು ಸಮಿತಿಗೆ ನೀಡಲಾಗಿತ್ತು. ಈ ತಂಡ ಕವನಗಳನ್ನು ಪರಿಶೀಲಿಸಿ ಹಲವು ಮಾನದಂಡಗಳನ್ನು ಅನುಸರಿಸಿ ಆಯ್ಕೆ ಮಾಡಿದೆ. ನಂತರ ಅವುಗಳಲ್ಲಿ ಸಾಧ್ಯವಾದಷ್ಟು ಜಿಲ್ಲೆಯ ಕವಿಗಳಿಗೆ ಹಾಗೂ ಹೊಸಬರಿಗೆ ಆದ್ಯತೆ ನೀಡಲಾಗಿದೆ. ಗುಣಮಟ್ಟದೊಂದಿಗೆ ಹೊಸಬರಿಗೆ ಪ್ರೋತ್ಸಾಹ ನೀಡುವುದು ನಮ್ಮ ಸಮಿತಿಯ ಉದ್ದೇಶವಾಗಿದೆ. ಈ ಬಾರಿ ವಿಭಿನ್ನವಾಗಿ ಕವಿಗೋಷ್ಠಿಯನ್ನು ನಡೆಸಬೇಕು ಎನ್ನುವ ಆಕಾಂಕ್ಷೆ ಸಮಿತಿಗೆ ಇತ್ತಾದರೂ, ಸಮಿತಿ ರಚನೆ ವಿಳಂಬವಾಗಿರುವುದು ಹಾಗೂ ಅನುದಾನದ ಕೊರೆತೆಯಿಂದಾಗಿ ಹೆಚ್ಚಿನ ಬದಲಾವಣೆಯಿಲ್ಲದೆ ನಡೆಸಲಾಗುತ್ತಿದೆ. ಈ ಬಾರಿ ಐವರು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಸಾಹಿತ್ಯ ಕ್ಷೇತ್ರದಲ್ಲಿ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಸೆ.25ರಂದು ಬೆಳಗ್ಗೆ 10.30ಕ್ಕೆ ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಕವಿಗೋಷ್ಠಿಯನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಸರಾ ಸಮಿತಿ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಕಾರ್ಯಾಧ್ಯಕ್ಷ ಮಹೇಶ್ ಜೈನಿ, ಪ್ರಧಾನ ಕಾರ್ಯದರ್ಶಿ ಚುಮ್ಮಿ ದೇವಯ್ಯ, ಖಜಾಂಚಿ ಸಂಗೀತ ಪ್ರಸನ್ನ, ನಗರಸಭೆ ಆಯುಕ್ತರಾದ ಬಿ. ಶುಭಾ,  ಮಡಿಕೇರಿ ಪತ್ರಕರ್ತರ ಸಂಘ ಹಾಗೂ ಪ್ರಸೆ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕೊಡಗು ಪತ್ರಿಕಾ ಭವನದ ಮ್ಯಾನೇಜಿಂಗ್ ಟ್ರಸ್ಟಿ ಮನುಶಣೈ ಮುಂತಾದವರು ಭಾಗವಹಿಲಿದ್ದಾರೆ ಎಂದು ರಮೇಶ್ ಉತ್ತಪ್ಪ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಎಂ.ನಾಸಿರ್, ಸದಸ್ಯರುಗಳಾದ ಕುಡೆಕಲ್ ಸಂತೋಷ್ ಹಾಗೂ ವಿಘ್ನೇಶ್ ಭೂತನಕಾಡು ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: