ಕರ್ನಾಟಕ

ಸೂಕ್ಷ್ಮ ಪರಿಸರ ವಲಯ ಭೀತಿ : ಒಂದೇ ವೇದಿಕೆಯಡಿ ಆಕ್ಷೇಪಣೆ ಸಲ್ಲಿಸಲು ನಿರ್ಧಾರ

ರಾಜ್ಯ(ಮಡಿಕೇರಿ) ಸೆ.20 :- ದಕ್ಷಿಣ ಕೊಡಗಿನ ಕುಟ್ಟದಿಂದ ತಿತಿಮತಿವರೆಗಿನ 9 ಗ್ರಾಮಗಳನ್ನು ಸೂಕ್ಷ್ಮ ಪರಿಸರ ವಲಯವೆಂದು ಘೋಷಿಸಿರುವ ಆದೇಶದ ವಿರುದ್ಧ ಕೇಂದ್ರ ಸರ್ಕಾರಕ್ಕೆ ಒಂದೇ ವೇದಿಕೆಯಡಿ ಆಕ್ಷೇಪಣೆ ಸಲ್ಲಿಸಲು ಫೆಡರೇಷನ್ ಆಫ್ ಕೊಡವ ಸಮಾಜ, ಕೂರ್ಗ ವೈಲ್ಡ್ ಲೈಫ್ ಸೊಸೈಟಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ನಿರ್ಧರಿಸಿವೆ. ಗ್ರಾಮೀಣ ಜನರ ಹಿತವನ್ನು ಕಾಯುವ ಮೂಲಕ ಪರಿಸರದ ಸಂರಕ್ಷಣೆಯನ್ನೂ ಮಾಡುವ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಿಂದ ಒಂದೇ ಧ್ವನಿ ಕೇಳಿ ಬರಬೇಕೆನ್ನುವ ಉದ್ದೇಶದ ಹಿನ್ನೆಲೆಯಲ್ಲಿ ಎಲ್ಲರು ಒಗ್ಗಟ್ಟಾಗಿರುವುದಾಗಿ ಪದಾಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪರಿಷತ್‍ನ ಮಾಜಿ ಅಧ್ಯಕ್ಷ ಹಾಗೂ ಹಿರಿಯರಾದ ಜೆ.ಎ.ಕರುಂಬಯ್ಯ, ಈಗಾಗಲೇ ಕೊಡಗಿನ ಮೂರು ಪ್ರದೇಶಗಳನ್ನು ಸೂಕ್ಷ್ಮ ಪರಿಸರ ವಲಯವೆಂದು ಘೋಷಿಸಿ ನೋಟಿಫಿಕೇಷನ್ ಅಂತಿಮಗೊಳಿಸಲಾಗಿದೆ. ದಕ್ಷಿಣ ಕೊಡಗಿನ ಕುಟ್ಟದಿಂದ ತಿತಿಮತಿವರೆಗಿನ 9 ಗ್ರಾಮಗಳ ಜನರು ಈ ಆದೇಶದಿಂದ ಸಾಕಷ್ಟು ಕಷ್ಟ ನಷ್ಟ ಅನುಭವಿಸುವ ಸಾಧ್ಯತೆ ಇದ್ದು, ಇದನ್ನು ತಪ್ಪಿಸಲು ಸೆ.19 ರಂದು ಸಭೆ ನಡೆಸಿದ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ, ಕೊಡವ ಸಮಾಜಗಳು ಮತ್ತು ವಿವಿಧ ಸಂಘ ಸಂಸ್ಥೆಗಳು ಕೇಂದ್ರಕ್ಕೆ ಆಕ್ಷೇಪಣೆ ಸಲ್ಲಿಸಲು ಏಕ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ  ಕೂರ್ಗ್ ವೈಲ್ಡ್ ಲೈಫ್ ಸೊಸೈಟಿಯ ಅಧ್ಯಕ್ಷ ಕರ್ನಲ್ ಸಿ.ಪಿ. ಮುತ್ತಣ್ಣ, ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಎಂ.ಎನ್.ತಿಮ್ಮಯ್ಯ, ವೇದಿಕೆ ಸಂಚಾಲಕರಾದ ತೀತಿರ ಧರ್ಮಜ ಉತ್ತಪ್ಪ ಹಾಗೂ ಸತ್ಯಾನ್ವೇಷಣಾ ಸಮಿತಿಯ ಪ್ರಮುಖರಾದ ಸನ್ನಿ ಸೋಮಯ್ಯ ಉಪಸ್ಥಿತರಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: