
ಕರ್ನಾಟಕ
ಕೋರೆಯಲ್ಲಿ ತುಂಬಿರುವ ನೀರಿಗೆ ಹಾರಿ ಮಹಿಳೆ ಆತ್ಮಹತ್ಯೆ
ರಾಜ್ಯ(ಮಡಿಕೇರಿ)ಸೆ.20:- ಕೌಟುಂಬಿಕ ಅಂತಃಕಲಹದ ಪರಿಣಾಮ, ದುರ್ಬಲ ಮನಸ್ಥಿತಿಯನ್ನು ಹೊಂದಿದ ಮುಗ್ದ ಮನಸ್ಸಿನ ವಿವಾಹಿತೆ ತನ್ನ ದುಡುಕಿನಿಂದ ಒಂದು ವರ್ಷದ ಪ್ರಾಯದ ಮಗುವನ್ನು ಬಿಟ್ಟು ಕೋರೆಯಲ್ಲಿ ತುಂಬಿರುವ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಶಾಲನಗರ ಸಮೀಪದ ಗೊಂದಿಬಸವನಹಳ್ಳಿಯಲ್ಲಿ ನಡೆದಿದೆ.
ಗೊಂದಿಬಸವನಹಳ್ಳಿಯ ಶೇಕರ್ ಮತ್ತು ಗೀತಾ ದಂಪತಿಗಳ ಮೊದಲ ಪುತ್ರಿ ಸೌಮ್ಯ(23) ಆತ್ಮಹತ್ಯೆಗೆ ಒಳಗಾದ ನತದೃಷ್ಠೆ. ಮೃತ ಸೌಮ್ಯ 4 ವರ್ಷಗಳ ಹಿಂದೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ಆವರ್ತಿ ಗ್ರಾಮದ ಮಲ್ಲೇಶಾಚಾರ್ ಎಂಬವರ ಪುತ್ರ ಅರುಣ್ರನ್ನು ವಿವಾಹವಾಗಿದ್ದಳು. ಮದುವೆಯಾದ ಪ್ರಾರಂಭದಿಂದಲೂ ಅತ್ತೆ, ಮಾವ ಅವರಿಂದ ಪ್ರತ್ಯೇಕವಾಗಿ ಮನೆ ಮಾಡಬೇಕೆಂದು ಗಂಡನಿಗೆ ಒತ್ತಾಯ ಹಾಕುತ್ತಿದ್ದಳು. ಮನೆಯ ಹಿರಿ ಮಗನಾದ ಅರುಣ್ ತನ್ನ ಪತ್ನಿಯ ಮಾತಿಗೆ ಒಪ್ಪದೆ ಹಾಗೆಯೇ ಕಾಲ ತಳ್ಳುತ್ತಾ ಹೆಂಡತಿಗೆ ಸಮಾಧಾನ ಹೇಳುತ್ತಾ ಬಂದ. ಅದು ಪ್ರಯೋಜನವಾಗದೆ ಇತ್ತೀಚೆಗೆ ತನ್ನ ತವರು ಮನೆ ಸೇರಿದ್ದ ಸೌಮ್ಯ ಗಂಡನ ಮನೆಗೆ ವಾಪಾಸ್ಸಾಗಲು ನಿರಾಕರಿಸಿದಳು. ಆಟೋ ಚಾಲಕನಾದ ಅರುಣ್ ಪದೇ ಪದೇ ತನ್ನ ಮನೆಗೆ ಕರೆಯುತ್ತಲೇ ಇದ್ದ. ಕಳೆದ ವಾರವಷ್ಟೇ ಸೌಮ್ಯ ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖಳಾಗುತ್ತಿದ್ದಳು. ಈ ಹಂತದಲ್ಲಿಯೇ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಸೌಮ್ಯ ತನ್ನ ತಾಯಿಯ ಮನೆಯ ಪಕ್ಕದಲ್ಲೇ ಇರುವ ಕೋರೆಯಲ್ಲಿರುವ ನೀರಿಗೆ ಮಂಗಳವಾರ ಧುಮುಕಿ ಸಾವನ್ನಪ್ಪಿದ್ದಾಳೆ.
ಕುಶಾಲನಗರ ಗ್ರಾಮಾಂತರ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಕೆಸಿಐ,ಎಸ್.ಎಚ್)