ಕರ್ನಾಟಕ

ಶಂಕುಹುಳು ಬಾಧೆ ಬೇರೆ ಪ್ರದೇಶಗಳಿಗೆ ಹರಡದಂತೆ ಎಚ್ಚರವಹಿಸಬೇಕು: ಎಂ.ಬಿ.ಅಭಿಮನ್ಯು

ಸೋಮವಾರಪೇಟೆ,ಸೆ.20-ಶನಿವಾರಸಂತೆ ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆಫ್ರಿಕನ್ ಶಂಕುಹುಳು ಬಾಧೆ ಹತೋಟಿಗೆ ಕಾಫಿ ಬೆಳೆಗಾರರು ಹಾಗೂ ಅಧಿಕಾರಿಗಳ ಸಾಮೂಹಿಕ ಪ್ರಯತ್ನ ಅಗತ್ಯವಾಗಿದೆ ಎಂದು ಕಾಫಿ ಮಂಡಳಿ ಸದಸ್ಯ ಎಂ.ಬಿ.ಅಭಿಮನ್ಯು ಕುಮಾರ್ ಹೇಳಿದರು.
ತಾಪಂ ಕಚೇರಿಯಲ್ಲಿ ನಡೆದ ಶಂಕುಹುಳು ಹತೋಟಿ ಬಗ್ಗೆ ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಾರಳ್ಳಿ, ಕೆರಳ್ಳಿ, ಹುಲುಸೆ, ಕಣಗಾಲು, ನಾಕಲುಗೋಡು, ಶಿರಂಗಾಲ ಗ್ರಾಮಗಳಲ್ಲಿ ಶಂಕುಹುಳಗಳ ಸಮಸ್ಯೆ ಹೆಚ್ಚಾಗಿದೆ. ಅವುಗಳನ್ನು ನಾಶ ಮಾಡಲು ಅಲ್ಲಿನ ಕಾಫಿ ಬೆಳೆಗಾರರರ ಸ್ವಸಹಾಯ ಸಂಘದ ಸದಸ್ಯರು ಪ್ರಯತ್ನ ಪಡುತ್ತಿದ್ದಾರೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹೆಚ್ಚಿನ ಸಹಕಾರ ನೀಡಿ, ಶಂಕುಹುಳು ಬಾಧೆ ಬೇರೆ ಪ್ರದೇಶಗಳಿಗೆ ಹರಡದಂತೆ ಎಚ್ಚರ ವಹಿಸಬೇಕು ಎಂದರು.
ತಾಲೂಕಿನ ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಕಾಫಿ ಮಂಡಳಿ, ಅರಣ್ಯ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳು ‘ಕ್ಯಾಚ್ ಆ್ಯಂಡ್ ಕಿಲ್’ ಕಾರ್ಯಕ್ರಮಕ್ಕೆ ತಲಾ 10 ಸಾವಿರ ರೂ.ಗಳನ್ನು ನೀಡಬೇಕು. ಪ್ರತಿ ಗ್ರಾಮ ಪಂಚಾಯಿತಿಗಳು ಹಣಕಾಸು ಸೌಲಭ್ಯ ಕಲ್ಪಿಸಿ, ಹುಳು ಹತೋಟಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಸಂಗ್ರಹಿಸಿದ ಒಂದು ಕೆಜಿ ಶಂಕು ಹುಳುಗಳಿಗೆ 4  ರೂ.ಗಳನ್ನು ನೀಡಲಾಗುತ್ತಿದೆ. ಉಳಿಕೆ ಹಣವನ್ನು ಕಾಫಿ ತೋಟದ ಮಾಲೀಕರು ಭರಿಸುತ್ತಿದ್ದಾರೆ. ಕಾರ್ಮಿಕರಿಗೆ ಹೆಚ್ಚಿನ ಕೂಲಿ ನೀಡಬೇಕಾದ ಅವಶ್ಯಕತೆ ಇದೆ ಎಂದು ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂದೀಪ್ ಹೇಳಿದರು. ವಿವಿಧ ಮೂಲಗಳಿಂದ ಹಣ ಸಂಗ್ರಹವಾದ ನಂತರ ಕೆ.ಜಿ.ವೊಂದಕ್ಕೆ 10 ರೂ.ಗಳನ್ನು ನೀಡುವ ತೀರ್ಮಾನ ತೆಗೆದುಕೊಳ್ಳಲಾಗುವುದು. ಅಳವಾದ ಗುಂಡಿ ನಿರ್ಮಿಸಿ ಸಂಗ್ರಹಿಸಿದ ಹುಳುಗಳನ್ನು ಅದರಲ್ಲಿ ಹಾಕಿ ನಾಶಪಡಿಸಬೇಕು. ಇಂತಹ ಕಾರ್ಯಗಳಲ್ಲೂ ಅವ್ಯವಹಾರಕ್ಕೆ ಯಾರು ಕೈಜೋಡಿಸಬಾರದು ಎಂದು ಹೇಳಿದರು.
ಸೆ.21 ರಂದು ಶನಿವಾರಸಂತೆಯಲ್ಲಿ ನಡೆಯುವ ಕಾಫಿಬೆಳೆಗಾರರ ಕಾರ್ಯಗಾರದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ಸೂಕ್ತ ಮಾಹಿತಿ ಪಡೆದು, ಮುಂದಿನ ಕಾರ್ಯಯೋಜನೆ ರೂಪಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಧರ್ಮಪ್ಪ, ಸದಸ್ಯ ಕುಶಾಲಪ್ಪ, ತಾಪಂ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಸುನೀಲ್, ಕಾಫಿ ಮಂಡಳಿ ಹಿರಿಯ ಸಂಪರ್ಕಾಧಿಕಾರಿ ಮುರುಳಿಧರ್, ಕೃಷಿ ಅಧಿಕಾರಿ ಮುಕುಂದ, ಸಹಾಯಕ ತೋಟಗಾರಿಕಾ ಅಧಿಕಾರಿ ಗಣೇಶ್, ಇಲಾಖೆ ಹಿರಿಯ ಅರೋಗ್ಯ ಇಲಾಖೆಯ ಶಾಂತಿ ಇತರರು ಉಪಸ್ಥಿತರಿದ್ದರು. (ವರದಿ-ಕೆಸಿಐ, ಎಂ.ಎನ್)

Leave a Reply

comments

Related Articles

error: