ಕರ್ನಾಟಕ

ಗೊಂದಲದ ಗೂಡಾದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ

ಸೋಮವಾರಪೇಟೆ,ಸೆ.20-ಪಟ್ಟಣ ಪಂಚಾಯಿತಿಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಹೆಚ್ಚುವರಿ ಕಾಮಗಾರಿಗೆ ಬಿಲ್ ಪಾವತಿಸುವ ವಿಷಯದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಹಾಗೂ ಸದಸ್ಯೆ ಶೀಲಾ ಡಿಸೋಜ ಅವರ ನಡುವೆ ಮಾತಿನ ಚಕಮಕಿ ನಡೆದ ಪರಿಣಾಮ ಸಭೆ ಗೊಂದಲದ ಗೂಡಾಗಿ ಪರಿಣಮಿಸಿತ್ತು.

ಸಿ.ಕೆ.ಸುಬ್ಬಯ್ಯ ರಸ್ತೆಯಲ್ಲಿ ಮಳೆಯಿಂದಾಗಿ ಸೋರುತ್ತಿದ್ದ ಎರಡು ಮಳಿಗೆಗಳನ್ನು ರಿಪೇರಿ ಮಾಡಿಸಲಾಗಿದೆ. ಗುತ್ತಿಗೆದಾರರಿಗೆ ಬಿಲ್ ಪಾವತಿಸಲು ಅಧ್ಯಕ್ಷರು ತಕರಾರು ತೆಗೆದಿರುವುದು ಸರಿಯಲ್ಲ ಎಂದು ಸದಸ್ಯೆ ಶೀಲಾ ಡಿಸೋಜ ಹೇಳಿದರು. ಸ್ಥಾಯಿ ಸಮಿತಿ ಅಧ್ಯಕ್ಷರ ಗಮನಕ್ಕೆ ಬಾರದ ಹೆಚ್ಚುವರಿ ಕಾಮಗಾರಿಗಳಿಗೆ ಹಣ ಬಿಡುಗಡೆಗೊಳಿಸುವುದಿಲ್ಲ ಎಂದು ಅಧ್ಯಕ್ಷರು ಹೇಳಿದರು. ಮಳೆ ಬೀಳುತ್ತಿದ್ದ ಹಿನ್ನೆಲೆಯಲ್ಲಿ ಅನುಮತಿ ಪಡೆಯುವಷ್ಟು ಸಮಯವಿರಲಿಲ್ಲ. ಪಂಚಾಯಿತಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ ಎಂದು ಶೀಲಾ ಡಿಸೋಜ ಹೇಳಿದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಸುಷ್ಮಾ, ಸದಸ್ಯರಾದ ಬಿ.ಎಂ.ಸುರೇಶ್, ಸುಶೀಲ ಅಧ್ಯಕ್ಷರ ಪರ ನಿಂತರು. ಇದರಿಂದ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಮುಂದಿನ ಸಭೆಯಲ್ಲಿ ಚರ್ಚಿಸಿ ಗುತ್ತಿಗೆದಾರರಿಗೆ ಬಿಲ್ ಪಾವತಿಸಲು ಕ್ರಮಕೈಗೊಳ್ಳುವುದಾಗಿ ಮುಖ್ಯಾಧಿಕಾರಿ ನಾಚಪ್ಪ ಭರವಸೆ ನೀಡಿದರು.

ಬಿಜೆಪಿ ವೈದ್ಯಕೀಯ ಪ್ರಕೋಷ್ಠ, ಪಕ್ಷದ ಮಹಿಳಾ ಮೋರ್ಚಾ ಹಾಗು ನಗರ ಬಿಜೆಪಿ ಘಟಕದ ಆಶ್ರಯದಲ್ಲಿ ಪ್ರಧಾನಿ ಮೋದಿ ಅವರ ಜನ್ಮಾದಿನಾಚರಣೆ ಅಂಗವಾಗಿ ಪೌರಕಾರ್ಮಿಕರಿಗೆ ಹೆಪಟೈಟಿಸ್ ಬಿ ಚುಚ್ಚುಮದ್ದು ಹಾಗೂ ಕಾರ್ನಿಯ ಅಂಧತ್ವ ಮುಕ್ತ ಅಭಿಯಾನ ಕಾರ್ಯಕ್ರಮಕ್ಕೆ ಪಪಂ ಸಭಾಂಗಣವನ್ನು ನೀಡಿದ್ದ ಕ್ರಮವನ್ನು ವಿಪಕ್ಷ ಸದಸ್ಯರು ಖಂಡಿಸಿದರು.
ಪಟ್ಟಣ ಪಂಚಾಯಿತಿಯನ್ನು ಬಿಜೆಪಿಗೆ ಬರೆದುಕೊಟ್ಟಿದ್ದಾರೆಯೇ? ಎಂದು ಸದಸ್ಯ ಕೆ.ಎ.ಆದಂ, ಶೀಲಾ ಡಿಸೋಜ, ಮೀನಾ ಕುಮಾರಿ, ಇಂದ್ರೇಶ್, ಉದಯಶಂಕರ್ ಪ್ರಶ್ನಿಸಿದರು. ಸೆ.23ರಂದು ಪೌರಕಾರ್ಮಿಕರ ದಿನದಂದು ಪಂಚಾಯಿತಿ ವತಿಯಿಂದ ಹೆಪಟೈಟಿಸ್ ಬಿ ಚುಚ್ಚುಮದ್ದು ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಬಿಜೆಪಿ ಇದನ್ನು ದುರಪಯೋಗಪಡಿಸಿಕೊಂಡಿದೆ ಎಂದು ದೂರಿದರು.

ಇದಕ್ಕೆ ಉತ್ತರಿಸಿದ ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್, ನಮ್ಮ ಪಂಚಾಯಿತಿಯ ಪೌರಕಾರ್ಮಿಕರಿಗೆ ಚುಚ್ಚುಮದ್ದು ನೀಡುವ ಉದ್ದೇಶ ಹೊಂದಲಾಗಿತ್ತು. ಆದರೆ ಕಾರ್ಯಕ್ರಮದ ಹಿಂದಿನ ದಿನದವರೆಗೂ ನನಗೆ ಗೊತ್ತಿರಲಿಲ್ಲವೆಂದು ಸಮಜಾಯಿಷಿಕೆ ನೀಡಿದರು. ಇದಕ್ಕೆ ಒಪ್ಪದ ವಿರೋಧ ಪಕ್ಷದವರು ಅಧ್ಯಕ್ಷರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಈ ಅವಧಿ ಮುಗಿಯುವವರೆಗೂ ಸಭಾಂಗಣದ ಕೀಯನ್ನು ಅಧ್ಯಕ್ಷರಿಗೆ ಕೊಟ್ಟು ಬಿಡಿ, ಅವರು ಹೇಗಾದರೂ ಉಪಯೋಗಿಸಿಕೊಳ್ಳಲಿ ಎಂದು ಮೂದಲಿಸಿದರು. ನಾವು ಕೂಡ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವನ್ನು ಸಭಾಂಗಣದಲ್ಲಿ ನಡೆಸುತ್ತೇವೆ ಅನುಮತಿ ನೀಡುತ್ತೀರಾ ಎಂದು ಪ್ರಶ್ನಿಸಿದರು. ನೀವು ಆಡಳಿತ ದುರುಪಯೋಗ ಪಡಿಸಿಕೊಂಡಿದ್ದೀರಿ. ಕ್ಷಮೆ ಕೇಳಿ, ಇಲ್ಲವಾದಲ್ಲಿ ಸಭೆ ನಡೆಯಲು ಬಿಡುವುದಿಲ್ಲ ಎಂದು ಸದಸ್ಯ ಆದಂ ಪಟ್ಟು ಹಿಡಿದರು. ಆಡಳಿತಾರೂಢ ಪಕ್ಷದ ಸದಸ್ಯರು ಮನವೊಲಿಕೆ ಮಾಡಲು ಪ್ರಯತ್ನಿಸಿದರು. ಇದಕ್ಕೆ ಒಪ್ಪದಿದ್ದಾಗ ಸರಿ ನನ್ನದೇ ತಪ್ಪು ಎಂದು ನೀವು ಹೇಳುವುದಾದರೆ ಒಪ್ಪಿಕೊಳ್ಳುತ್ತೇನೆ ಎನ್ನುವ ಮೂಲಕ ಅಧ್ಯಕ್ಷೆ ವಿವಾದಕ್ಕೆ ತೆರೆ ಎಳೆದರು.

ಪಟ್ಟಣ ಪಂಚಾಯಿತಿಯ ಅಭಿವೃದ್ಧಿ ಕಾಮಗಾರಿಗಳ ಕಡತಗಳಿಗೆ ಅನುಮೋದನೆ ನೀಡಲು ಜಿಲ್ಲಾ ಯೋಜನಾ ನಿರ್ದೇಶಕರು ಹಣಕ್ಕಾಗಿ ಪೀಡಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಬೇಕಾಗುತ್ತದೆ ಎಂದು ಸದಸ್ಯ ಕೆ.ಎ.ಆದಂ ಪಟ್ಟಣ ಪಂಚಾಯಿತಿ ಸಭೆಯಲ್ಲಿ ಗಂಭೀರ ಆರೋಪ ಮಾಡಿದರು. ಪಟ್ಟಣದ ಅಭಿವೃದ್ದಿಗೆ ಸಂಬಂಧಿಸಿದ ಕಡತಗಳು ಅನುಮೋದನೆಗಾಗಿ ಕಳುಹಿಸಿದ ಸಂದರ್ಭ ಯೋಜನಾ ನಿರ್ದೇಶಕರು ಹಣಕ್ಕಾಗಿ ಪೀಡಿಸುತ್ತಿದ್ದಾರೆಂದು ಹಲವು ಮಂದಿ ನನ್ನ ಬಳಿ ತಿಳಿಸಿದ್ದಾರೆ. ಈ ಕಾರಣಕ್ಕಾಗಿಯು ನಮ್ಮ ಕಡತಗಳಿಗೆ ವಿಳಂಬವಾಗಿ ಅನುಮೋದನೆ ನೀಡಲಾಗುತ್ತಿದೆ. ಈ ಬಗ್ಗೆ ಅಧ್ಯಕ್ಷರು ಗಮನಹರಿಸಬೇಕು. ಇಲ್ಲವಾದಲ್ಲಿ ಅವರ ಮೇಲೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಬೇಕೆಂದರು. ಈ ಬಗ್ಗೆ ಅಧ್ಯಕ್ಷೆ ವಿಜಯಲಕ್ಷ್ಮಿ ಪ್ರತಿಕ್ರಿಯಿಸಿ ತಾವು ಮಾತನಾಡುವುದಾಗಿ ತಿಳಿಸಿದರು.

ಸದಸ್ಯ ಉಪಾಧ್ಯಕ್ಷ ಬಿ.ಈ.ರಮೇಶ, ಸದಸ್ಯರಾದ ಲೀಲಾ ನಿರ್ವಾಣಿ, ಬಿ.ಎಂ.ಸುರೇಶ್ ಹಾಜರಿದ್ದರು. ಸದಸ್ಯರಾದ ಬಿ.ಸಿ.ವೆಂಕಟೇಶ್, ಎಚ್.ಈ.ನಾಗರಾಜ್ ಗೈರು ಹಾಜರಗಿದ್ದರು. (ವರದಿ-ಕೆಸಿಐ, ಎಂ.ಎನ್)

Leave a Reply

comments

Related Articles

error: