ಕರ್ನಾಟಕ

ಎಕ್ಸೈಸ್ ಡ್ಯೂಟಿ ಕಡಿತಕ್ಕೆ ಆಗ್ರಹ: ವಾಣಿಜ್ಯ ವಾಹನ ಚಾಲಕರ ಸಂಘದಿಂದ ಪ್ರತಿಭಟನೆ

ಮಡಿಕೇರಿ,ಸೆ.20-ತೈಲ ಬೆಲೆಯನ್ನು ತಮ್ಮಿಷ್ಟದಂತೆ ಹೆಚ್ಚಿಸಲು ತೈಲ ಕಂಪೆನಿಗಳಿಗಿರುವ ಸ್ವಾತಂತ್ರ್ಯವನ್ನು ಹಿಂದಕ್ಕೆ ಪಡೆಯಬೇಕು ಮತ್ತು ಕೇಂದ್ರ ಸರ್ಕಾರ ಆಗಾಗ ಎಕ್ಸೈಸ್ ಡ್ಯೂಟಿಯನ್ನು ಹೆಚ್ಚಿಸಿರುವುದನ್ನು ಕಡಿತ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ವಾಣಿಜ್ಯ ವಾಹನ ಚಾಲಕರ ಸಂಘದ ಜಿಲ್ಲಾ ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿತು.

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ತೈಲ ಬೆಲೆ ಏರಿಕೆಯನ್ನು ನಿಯಂತ್ರಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಪೆಟ್ರೋಲ್, ಡೀಸೆಲ್ ಸೇರಿದಂತೆ ತೈಲ ಬೆಲೆ ಏರಿಕೆಯಿಂದ ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಜನ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗೆ ಅನುಸಾರವಾಗಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲೂ ಪ್ರತಿದಿನ ಪರಿಷ್ಕರಿಸುವ ಅಧಿಕಾರವನ್ನು ತೈಲ ಸಂಸ್ಥೆಗಳಿಗೆ ನೀಡಿದ ಬಳಿಕ ಪೆಟ್ರೋಲ್ ಬೆಲೆ ಸುಮಾರು 7 ರೂ.ಗಳಷ್ಟು ಹೆಚ್ಚಳವಾಗಿದೆ. ಇದಲ್ಲದೆ ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಪ್ರತೀ ಲೀಟರ್ ಪೆಟ್ರೋಲ್‍ಗೆ 11.77 ರೂ. ಹಾಗೂ ಡೀಸೆಲ್‍ಗೆ 13.47 ರೂ.ಗಳಷ್ಟು ಹೆಚ್ಚಳ ಮಾಡಿದೆ. ಕೇಂದ್ರದಲ್ಲಿ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸೆಂಟ್ರಲ್ ಎಕ್ಸೈಸ್ ತೆರಿಗೆಯನ್ನು 16 ಬಾರಿ ಹೆಚ್ಚಿಸಲಾಗಿದೆ ಎಂದು ಆರೋಪಿಸಿದರು.

ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾದಾಗಲೆಲ್ಲಾ ಕೇಂದ್ರ ಸರ್ಕಾರ ದೇಶದ ಗ್ರಾಹಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಎಡ್ಮಿನಿಸ್ಟ್ರೇಷನ್ ಮೆಕ್ಯಾನಿಸಂ ಮೂಲಕ ತೈಲ ಬೆಲೆಯನ್ನು ನಿಯಂತ್ರಿಸಲಾಗುತ್ತಿತ್ತು. ಆದರೆ ಇದೀಗ ದರ ಪರಿಷ್ಕರಣೆಯ ಅಧಿಕಾರವನ್ನು ತೈಲ ಸಂಸ್ಥೆಗಳಿಗೆ ನೀಡಿರುವುದರಿಂದ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದ್ದರೂ, ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕಡಿಮೆ ಮಾಡದೆ ಹಗಲು ದರೋಡೆಗೆ ಇಳಿದಿವೆ. ಇದರಿಂದಾಗಿ ದಿನಬಳಕೆ ವಸ್ತುಗಳ ಬೆಲೆಯೂ ಹೆಚ್ಚಳವಾಗುತ್ತಿದ್ದು, ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ. ಕೇಂದ್ರ ಸರ್ಕಾರ ಜನಪರವಾಗಿರುವುದರ ಬದಲು ಕಾರ್ಪೋರೇಟ್ ಸಂಸ್ಥೆಗಳ ಪರವಾಗಿದೆ ಎಂದು ಆಪಾದಿಸಿದರು.

ಕೇಂದ್ರ ಸರ್ಕಾರ ತೈಲಬೆಲೆಯನ್ನು ಪರಿಷ್ಕರಣೆಗೆ ತೈಲ ಸಂಸ್ಥೆಗಳಿಗೆ ನೀಡಿದ ಸ್ವಾತಂತ್ರ್ಯವನ್ನು ಕೂಡಲೇ ಹಿಂದಕ್ಕೆ ಪಡೆದು ಕೇಂದ್ರ ಸರ್ಕಾರವೇ ದರ ನಿಗದಿಪಡಿಸುವಂತಾಗಬೇಕು. ಅಲ್ಲದೆ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಆಗಾಗ ಹೆಚ್ಚಿಸಿರುವ ಎಕ್ಸೈಸ್ ಡ್ಯೂಟಿಯನ್ನು ಕಡಿತ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ  ಸಂಘದ ಜಿಲ್ಲಾಧ್ಯಕ್ಷ ಅಬ್ದುಲ್ ರೆಹಮಾನ್, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಡಾ.ದುರ್ಗಾಪ್ರಸಾದ್, ಪ್ರಮುಖರಾದ ಎನ್.ಡಿ.ಕುಟ್ಟಪ್ಪ, ಸಾಬು ಥೋಮಸ್, ದುರ್ಗಾಪ್ರಸಾದ್ ಇತರರು ಭಾಗವಹಿಸಿದ್ದರು. (ವರದಿ-ಕೆಸಿಐ, ಎಂ.ಎನ್)

Leave a Reply

comments

Related Articles

error: