ಕರ್ನಾಟಕ

ಶಿಕ್ಷಣದ ಗುಣಮಟ್ಟ ಕುಸಿತ ಆರೋಪ: ಎಬಿವಿಪಿ ಪ್ರತಿಭಟನೆ

ಮಡಿಕೇರಿ,ಸೆ.20-ರಾಜ್ಯದಲ್ಲಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ ಎಂದು ಆರೋಪಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್  ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ರಾಜ್ಯ ಸರ್ಕಾರದ ಗೊಂದಲಮಯ ನೀತಿಗಳಿಂದಾಗಿ ವಿದ್ಯಾರ್ಥಿಗಳು ಸಂಕಷ್ಟವನ್ನು ಎದುರಿಸುವಂತ್ತಾಗಿದೆ. ಶಿಕ್ಷಣವೆಂಬುದು ಮಾರಾಟದ ವಸ್ತುವಲ್ಲ. ಅದು ಸರ್ವರಿಗೂ ಸಿಗುವಂತಾಗಬೇಕೆಂಬ ಕಲ್ಪನೆ ಜನಸಾಮಾನ್ಯರಲ್ಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ರಾಜ್ಯದ ಶೈಕ್ಷಣಿಕ ಗುಣಮಟ್ಟ ನಿರಂತರವಾಗಿ ಕುಸಿಯುತ್ತಿದೆ. ಅದಕ್ಕೆ ಮೂಲಭೂತ ಸೌಕರ್ಯ, ಅಧ್ಯಾಪಕರ ಕೊರತೆ ಮತ್ತು ಅಧಿಕಾರಿಗಳ ತೀವ್ರ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಆರೋಪಿಸಿದರು.

ಭಾಷಾವಾರು ಶಿಕ್ಷಕರ ನೇಮಕ, ಪಠ್ಯ ಪುಸ್ತಕಗಳ ರಚನೆ, ಭಾಷವಾರು ತರಗತಿಗಳನ್ನು ಆರಂಭಿಸುವ ಮೊದಲು ಎಲ್ಲಾ ಕಾಲೇಜುಗಳಿಗೆ ಮಾಹಿತಿ ನೀಡಿ ಮುಂಬರುವ ಶೈಕ್ಷಣಿಕ ವರ್ಷದಿಂದ ಜಾರಿಗೊಳಿಸಬೇಕು. ಭ್ರಷ್ಟಚಾರದ ಕುರಿತು ತನಿಖೆ ನಡೆಸಬೇಕು. ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ರಾಜ್ಯದಲ್ಲಿ ಶೇ.90 ರಷ್ಟು ಸರ್ಕಾರಿ ಕಾಲೇಜುಗಳಲ್ಲಿ ಖಾಯಂ ಪ್ರಾಂಶುಪಾಲರಿಲ್ಲದೇ ಕಾಲೇಜುಗಳು ಶೈಕ್ಷಣಿಕವಾಗಿ ಕುಂಟುತ್ತಾ ಸಾಗುತ್ತಿರುವುದರಿಂದ ಪ್ರಾಂಶುಪಾಲರ ನೇಮಕವಾಗಬೇಕು. ಸರ್ಕಾರಿ ಪದವಿ ಕಾಲೇಜುಗಳಲ್ಲಿ ಪ್ರಯೋಗಾಲಯ, ಗ್ರಂಥಾಲಯ, ಶೌಚಾಲಯ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎಬಿವಿಪಿ ಪ್ರಮುಖರಾದ ಸುಭಾಷ್, ತೇಜಸ್ವಿ, ಗಂಗಮ್ಮ, ವಿನುತ್, ಅನುಶ್ರೀ ಇತರರು ಭಾಗಹಿಸಿದ್ದರು. (ವರದಿ-ಕೆಸಿಐ, ಎಂ.ಎನ್)

Leave a Reply

comments

Related Articles

error: