ಪ್ರಮುಖ ಸುದ್ದಿಮೈಸೂರು

ಮಹಿಳೆಯರು ಸಿಕ್ಕ ಅವಕಾಶವನ್ನು ಪ್ರತಿಭಾ ಪ್ರದರ್ಶನಕ್ಕೆ ಉಪಯೋಗಿಸಿಕೊಳ್ಳಿ : ಸಚಿವೆ ಉಮಾಶ್ರೀ

ಮೈಸೂರು,ಸೆ.21:- ಮೈಸೂರು ದಸರಾ ಮಹೋತ್ಸವ2017ರ ಮಹಿಳಾ ದಸರಾ ಕಾರ್ಯಕ್ರಮದ ಪ್ರಯುಕ್ತ ಮಹಿಳೆಯರಿಗಾಗಿ ಮೈಸೂರು ಅರಮನೆಯ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗದ ಆವರಣದಲ್ಲಿ ರಂಗೋಲಿ ಸ್ಫರ್ಧೆ ಯನ್ನು ಆಯೋಜಿಸಲಾಗಿತ್ತು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಹಾಗೂ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ರಂಗೋಲಿ ಚಿತ್ರ ರಚಿಸುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಮಹಿಳೆಯರು ಅವರಿಗರಿವಿಲ್ಲದೇ ಹಲವಾರು ಕಲೆಗಳನ್ನು ತಮ್ಮಲ್ಲಿ ಪೋಷಿಸಿರುತ್ತಾರೆ. ಅದರ ಪ್ರದರ್ಶನಕ್ಕೆ ಸೂಕ್ತ ಅವಕಾಶ, ವೇದಿಕೆಗಳನ್ನು ದೊರಕಿಸಿಕೊಟ್ಟಲ್ಲಿ ಅವರಲ್ಲಿನ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯ ಎಂದರು. ಮೈಸೂರು ದಸರಾ ಸಂದರ್ಭದಲ್ಲಿ ಅವರಿಗೆ  ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಿರುವುದು ಸಂತಸದ ವಿಷಯವೇ. ಚಿತ್ತಾಕರ್ಷಕವಾಗಿ ರಂಗೋಲಿ ರಚನೆಯಲ್ಲಿ ಮಹಿಳೆಯರು ತೊಡಗಿಸಿಕೊಂಡಿದ್ದಾರೆ. ಮಹಿಳೆಯರು ಸಿಕ್ಕ ಅವಕಾಶವನ್ನು ತಮ್ಮ ಪ್ರತಿಭೆ ಅನಾವರಣಗೊಳಿಸಲು ಬಳಸಿಕೊಳ್ಳಿ  ಎಂದು ತಿಳಿಸಿದರು. ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯಗಳನ್ನು ತಿಳಿಸಿದರಲ್ಲದೇ, ಎಲ್ಲರನ್ನು ತಾಯಿ ಚಾಮುಂಡೇಶ್ವರಿ ಅನುಗ್ರಹಿಸಲಿ ಎಂದರು.

ಈ ಸಂದರ್ಭ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ರಾಧಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ವಿವಿಧ ವಿನ್ಯಾಸದ, ಬಣ್ಣ ಬಣ್ಣದ ಚಿತ್ತಾಕರ್ಷಕ ರಂಗೋಲಿಗಳು ಗಮನ ಸೆಳೆಯುತ್ತಿವೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: