ಪ್ರಮುಖ ಸುದ್ದಿಮೈಸೂರು

ದಸರಾದಂತಹ ಧರ್ಮ ನಿರಪೇಕ್ಷಿತ ಹಬ್ಬ ಮತ್ತೊಂದಿಲ್ಲ : ನಿತ್ಯೋತ್ಸವ ಕವಿ ಪ್ರೊ.ನಿಸಾರ್ ಅಹಮದ್ ಬಣ್ಣನೆ

ಮೈಸೂರು,ಸೆ.21:- ನನಗೆ ಬಿರುದು ಸನ್ಮಾನಗಳೆಲ್ಲದಕ್ಕಿಂತ ಇದು ತುಂಬಾ ದೊಡ್ಡ ಸನ್ಮಾನ. ದಸರಾ ಉತ್ಸವ ಚಾರಿತ್ರಿಕ ಮಹತ್ವವನ್ನು ಪಡೆದುಕೊಂಡಿದೆ.ವಿಶ್ವದಲ್ಲೇ ಇಂತಹ ಧರ್ಮ ನಿರಪೇಕ್ಷಿತ ಹಬ್ಬ ಮತ್ತೊಂದಿಲ್ಲ ಎಂದು ನಿತ್ಯೋತ್ಸವ ಕವಿ ಪ್ರೊ.ನಿಸಾರ್ ಅಹಮದ್ ಬಣ್ಣಿಸಿದರು.

ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆಗೈದು ದಸರಾಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡುವ ಮುನ್ನ ದ.ರಾ.ಬೇಂದ್ರೆಯವರ ಕವನದ ಸಾಲುಗಳನ್ನು ನೆನಪಿಸಿಕೊಂಡರು. ಅವಳು ಆಡಿಸಿದಂತೆ ನಾನು ಆಡುತ್ತಿದ್ದೇನೆ. ನಿಮ್ಮ ಮುಂದೆ ನಿಂತು ಮಾತನಾಡುವ ನೈತಿಕ ಸ್ಥೈರ್ಯ ನನಗೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ದಸರಾ ಮಹೋತ್ಸವ ಉದ್ಘಾಟನೆ ಮಾಡಲು ಅವಕಾಶ ನೀಡಿದ ಸಿಎಂ ಗೆ ನಾನು ಚಿರಋಣಿ. ಇದು ನನಗೆ ಸಿಕ್ಕ ದೊಡ್ಡ ಅಂತಸ್ತು. ದಸರಾ ಮಹೋತ್ಸವ ಉದ್ಘಾಟನೆ ಮಾಡುತ್ತೇನೆ ಎಂದು ನಾನು ಕಲ್ಪನೆ ಕೂಡ ಮಾಡಿರಲಿಲ್ಲ. ಉದ್ಘಾಟನೆಗೆ ಆಹ್ವಾನವಿತ್ತಾಗ ಆನಂದ ತುಂಬಿ ಬರುವುದರ ಜತೆಗೆ ಆತಂಕವೂ ಆಯಿತು. ಭವ್ಯ ಪರಂಪರೆಯನ್ನು ಉದ್ಘಾಟಿಸುವುದು ಸಾಮಾನ್ಯ ಮಾತಲ್ಲ. ನಾನು ಇಲ್ಲಿ ಉತ್ಸವ ಮೂರ್ತಿ ಅಷ್ಟೆ. ನಾನು ಸಾಕಷ್ಟು ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇನೆ. ಆದರೆ ಇದು ಚಾರಿತ್ರಿಕವಾಗಿ ಮಹತ್ವವಾದದ್ದು. ಹಜ್ ಅಂದರೆ ಮುಸ್ಲಿಂ ರು ಸೇರುತ್ತಾರೆ. ಹೀಗೆ ಬೇರೆ ಬೇರೆ ಧರ್ಮದ ಜನ ಬೇರೆ ಬೇರೆ ಹಬ್ಬಕ್ಕೆ ಸೇರುತ್ತಾರೆ. ಆದರೆ ದಸರಾ ಮಹೋತ್ಸವ ಕ್ಕೆ ಮಾತ್ರ ಜಾತಿ, ಮತವಿಲ್ಲದೆ ಎಲ್ಲ ಮಂದಿ ಸೇರುತ್ತಾರೆ. ದಸರಾ ಮಹೋತ್ಸವ ವನ್ನು ಕಣ್ತುಂಬಿಕೊಳ್ಳುತ್ತಾರೆ. ಇದು ಕನ್ನಡ ಸಂಸ್ಕೃತಿ, ಸಂಪ್ರದಾಯ, ಅಸ್ಮಿತೆಯನ್ನು ಸಾರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಮಹದೇವಪ್ಪ, ತನ್ವೀರ್ ಸೇಠ್, ಉಮಾಶ್ರೀ, ಯು.ಟಿ.ಖಾದರ್, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. (ಎಂ.ಎನ್,ಎಸ್.ಎಚ್)

Leave a Reply

comments

Related Articles

error: