ಪ್ರಮುಖ ಸುದ್ದಿಮೈಸೂರು

ಮೈಸೂರು ದಸರಾ ಚನಲಚಿತ್ರೋತ್ಸವಕ್ಕೆ MyDFF ನಾಮಕರಣ : ಪನೋರಮಾ ಚಿತ್ರಗಳಿಗೂ ಅವಕಾಶ

ಮೈಸೂರು, ಸೆ.21: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವನ್ನು BiFFes ಎಂಬ ಹೆಸರಿನಲ್ಲಿ ಆಯೋಜಿಸಲಾಗುತ್ತಿದೆ. ಅದೇ ರೀತಿ, ಮೈಸೂರು ದಸರಾ ಚಲನಚಿತ್ರೋತ್ಸವವನ್ನು ಈ ಭಾರಿ MyDFF ಎಂದು ಉತ್ತೇಜಿಸಲಾಗುತ್ತಿದೆ. ಮುಂಬೈನಲ್ಲಿ MIFF, ಗೋವಾದಲ್ಲಿ IFFI, ಪುಣೆಯಲ್ಲಿ PIFF, ಹೈದರಾಬಾದ್‍ನಲ್ಲಿ HIFF ಹೆಸರಿನಲ್ಲಿ ಸಂಘಟಿಸಲಾಗುತ್ತಿದೆ. ಹೀಗೆ, ಚಲನಚಿತ್ರೋತ್ಸವ ಸಂಘಟಿಸುವ ಪ್ರಮುಖ ನಗರಗಳ ಸಾಲಿನಲ್ಲಿ ಮೈಸೂರು ಹೆಸರನ್ನು ಸೇರಿಸಲು MyDFF ಎಂದು ಉತ್ತೇಜಿಸಲಾಗುತ್ತಿದೆ ಎಂದು ದಸರಾ ಚಲನಚಿತ್ರೋತ್ಸವ ಉಪಸಮಿತಿ ಅಧ್ಯಕ್ಷರಾದ ಬಿ.ರಾಚಪ್ಪ ಯಳಂದೂರು ಹಾಗೂ ಉಪಸಮಿತಿ ಉಪವಿಶೇಷಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್ ಅವರು ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಉದ್ಘಾಟನಾ ಸಮಾರಂಭಕ್ಕೆ ಭರ್ಜರಿ ಚಿತ್ರದ ನಾಯಕ ನಟ ಧ್ರುವ ಸರ್ಜಾ, ಡೆಡ್ಲಿ ಸೋಮ ಆದಿತ್ಯ, ಮುಂತಾದ ತಾರೆಯರ ಆಗಮನ, ಉದ್ಘಾಟನಾ ಚಲನಚಿತ್ರವಾಗಿ ಕಲಾಮಂದಿರದಲ್ಲಿ ಒಂದು ಮೊಟ್ಟೆಯ ಕಥೆ ಪ್ರದರ್ಶನ. ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಮೈಸೂರು ದಸರಾ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭ ಈ ಬಾರಿ ಹೆಚ್ಚು ಆಕರ್ಷಣೆಯಾಗಿದೆ.

ಇತ್ತೀಚೆಗೆ ಬಿಡುಗಡೆಯಾಗಿರುವ ಭರ್ಜರಿ ಚಿತ್ರದ ನಾಯಕ ನಟ ಧ್ರುವ ಸರ್ಜಾ, ನಾಯಕಿ ರಚಿತ ರಾಮ್, ನಾಯಕ ನಟರುಗಳಾದ ಆದಿತ್ಯ, ಸಂಚಾರಿ ವಿಜಯ್, ಹಿರಿಯ ಕಲಾವಿದರಾದ ಸುಂದರ್ ರಾಜ್, ಶೋಭರಾಜ್, ನಿರ್ದೇಶಕರುಗಳಾದ ಪಿ.ಶೇಷಾದ್ರಿ, ನಂದಕಿಶೋರ್, ಇತ್ತೀಚೆಗೆ ಹೆಚ್ಚು ಜನಪ್ರಿಯಗೊಳ್ಳುತ್ತಿರುವ ‘ಒಂದು ಮೊಟ್ಟೆಯ ಕಥೆ’ ಚಿತ್ರದ ನಾಯಕ ಹಾಗೂ ನಿರ್ದೇಶಕ ರಾಜ್ ಬಿ.ಶೆಟ್ಟಿ, ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯಗೊಂಡಿರುವ ಮಿ. ಅಂಡ್ ಮಿಸಸ್ ರಂಗೇಗೌಡ ಧಾರವಾಹಿಯ ಕಲಾವಿದರಾದ ಶಶಿ ರಾಜ್ ಹಾಗೂ ಸಂಭ್ರಮಾಗೌಡ ಅವರು ‘ರಣರಣಕ’ ಚಿತ್ರದಲ್ಲಿ ನಾಯಕ ನಾಯಕಿಯಾಗಿ ಅಭಿನಯಿಸುತ್ತಿದ್ದು, ಆ ಚಿತ್ರದ ತಂಡ ಕೂಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ.

ಪನೊರಮಾ ಚಿತ್ರಗಳ ಸೇರ್ಪಡೆ :

ಮೊದಲ ಬಾರಿಗೆ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ದಿನ ಪೂರ್ತಿ ಪ್ರದರ್ಶನವನ್ನು ಆಯೋಜಿಸಲಾಗುತ್ತಿದೆ. ಡಿ.ಆರ್.ಸಿ. ಒಂದು ಪರದೆಯನ್ನು ಮತ್ತು ಐನಾಕ್ಸ್ ಚಿತ್ರಮಂದಿರದಲ್ಲಿ ಒಂದು ಪರದೆಯಲ್ಲಿ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಸಾರ್ವಜನಿಕರಿಂದ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪನೊರಮಾ ಚಿತ್ರಗಳನ್ನು ಐನಾಕ್ಸ್ ಚಿತ್ರಮಂದಿರದ ಇನ್ನೊಂದು ಪರದೆಯಲ್ಲಿ ಪ್ರದರ್ಶನಕ್ಕೆ ಹೆಚ್ಚುವರಿ ವ್ಯವಸ್ಥೆ ಮಾಡಲಾಗಿದೆ.

ಮೈಸೂರು ದಸರಾ ಚಲನ ಚಿತ್ರೋತ್ಸವವನ್ನು ಸೆಪ್ಟೆಂಬರ್ 21, 2017 ರಂದು ಗುರುವಾರ ಬೆಳಗ್ಗೆ 10 ಗಂಟೆಗೆ ಕರ್ನಾಟಕ ಕಲಾಮಂದಿರದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಉದ್ಘಾಟಿಸುವರು. ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು, ಕನ್ನಡ ಚಿತ್ರರಂಗದ ಗಣ್ಯರು ಸೇರಿದಂತೆ ಹಲವಾರು ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸುವರು.

ಐನಾಕ್ಸ್ ಚಿತ್ರಮಂದಿರದಲ್ಲಿ ವಿವಿಧ ದೇಶಗಳ ಚಲನಚಿತ್ರಗಳು ಪ್ರದರ್ಶನವಾಗುವುದರಿಂದ ಚಲನಚಿತ್ರಗಳ ವಸ್ತುವಿಷಯಗಳು 18 ವರ್ಷ ಮೇಲ್ಮಟ್ಟವರಿಗೆ ಸೂಕ್ತವಾಗಿರುತ್ತವೆ. ಆದ್ದರಿಂದ ನೋಂದಣಿಗೆ 18 ವರ್ಷ ಮೇಲ್ಮಟ್ಟದವರಿಗೆ ಅವಕಾಶ ಕಲ್ಪಿಸಲಾಗಿದೆ. ಒಂದೇ ದಿನ 100 ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ. ನೋಂದಣಿಗೆ ವಾರ್ತಾ ಭವನದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಆಸಕ್ತರು ನೋಂದಣಿ ಮಾಡಿಸಿಕೊಳ್ಳಬಹುದು. ಐನಾಕ್ಸ್ ಚಿತ್ರಮಂದಿರದಲ್ಲಿ ನೋಂದಣಿ ರೂ. 300/- ನಿಗದಿಮಾಡಲಾಗಿದ್ದು, ನೋಂದಣಿ ಮಾಡಿಸಿಕೊಂಡವರಿಗೆ ಮಾತ್ರ ಪ್ರವೇಶಾವಕಾಶವಿರುತ್ತದೆ.

ಡಿ.ಆರ್.ಸಿ. ಚಿತ್ರಮಂದಿರದಲ್ಲಿ ಪ್ರದರ್ಶನವಾರು ರೂ. 30/- ದರ ನಿಗದಿ ಮಾಡಲಾಗಿದ್ದು, ಇದಕ್ಕೆ ವಯೋಮಿತಿ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕಲಾತ್ಮಕ ನಿರ್ದೇಶಕರಾದ ಮನು ಅವರನ್ನು ದೂರವಾಣಿ ಸಂಖ್ಯೆ: 9448092049ಗೆ ಸಂಪರ್ಕಿಸಬಹುದು.
ಒಂದು ಮೊಟ್ಟೆಯ ಕಥೆ: 2017ರ ಜುಲೈನಲ್ಲಿ ಬಿಡುಗಡೆಯಾಗಿ ಹೆಚ್ಚು ಜನಪ್ರಿಯಗೊಂಡಿರುವ ಕನ್ನಡದ ಚಲನಚಿತ್ರ ‘ಒಂದು ಮೊಟ್ಟೆಯ ಕಥೆ’ ಚಿತ್ರವನ್ನು ಕಲಾಮಂದಿರದಲ್ಲಿ ಉದ್ಘಾಟನಾ ನಂತರ ಪ್ರದರ್ಶಿಸಲಾಗುತ್ತಿದೆ. ರಾಜ್ ಬಿ. ಶೆಟ್ಟಿ ಅವರು ಅಭಿನಯಿಸಿ, ನಿರ್ದೇಶಿಸಿರುವ ಚಿತ್ರ ಇದು. ಯು-ಟರ್ನ್ ಚಿತ್ರ ನಿರ್ದೇಶಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡ ಪವನ್ ಕುಮಾರ್ ಅವರು ಈ ಚಲನಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹಾಸ್ಯ ಪ್ರಧಾನವಾದ ಚಿತ್ರವಿದು. ದಸರಾ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಇದೇ ಮೊದಲ ಬಾರಿಗೆ ಚಲನಚಿತ್ರ ಪ್ರದರ್ಶಿಸಲಾಗುತ್ತಿದೆ.

ಗೋಷ್ಠಿಯಲ್ಲಿ ಚಿತ್ರೋತ್ಸವದ ಉಪವಿಶೇಷಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಟಿ. ಯೋಗೇಶ್, ಉಪಾಧ್ಯಕ್ಷರಾದ ರವಿಚಂದ್ರು, ಕಾರ್ಯಾಧ್ಯಕ್ಷರು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕರಾದ ಆರ್. ರಾಜು ಹಾಗೂ ಕಾರ್ಯದರ್ಶಿ ಕೃಷ್ಣಪ್ಪ ಹಾಗೂ ಅರ್ಟೆಸ್ಟಿಕ್ ಡೈರೆಕ್ಷರ್ ಮನು ಅವರು ಉಪಸ್ಥಿತರಿದ್ದರು.

(ಎನ್.ಬಿ)

Leave a Reply

comments

Related Articles

error: