ಪ್ರಮುಖ ಸುದ್ದಿಮೈಸೂರು

ರೈತರ ಹಿತ ಕಾಪಾಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ, ರೈತರು ಭಯ ಪಡುವ ಅಗತ್ಯವಿಲ್ಲ : ಸಿಎಂ ಸಿದ್ದರಾಮಯ್ಯ

ಮೈಸೂರು,ಸೆ.21:- ನನಗೆ ಮುಖ್ಯಮಂತ್ರಿಯಾಗಿ ಐದು ದಸರಾದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದೆ. ಇನ್ನೂ ಐದು ವರ್ಷ ದಸರಾದಲ್ಲಿ ಭಾಗವಹಿಸುವ ಅವಕಾಶ ಸಿಗತ್ತೆ ಅಂದುಕೊಂಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು ದಸರಾ ಸರಳ ಮತ್ತು ಸಾಂಪ್ರದಾಯಿಕ ಆಚರಣೆಗೆ ತೀರ್ಮಾನ ಮಾಡಲಾಗಿತ್ತು. ಭೀಕರ ಬರಗಾಲ ಹಿನ್ನಲೆಯಲ್ಲಿ ಸರಳ ಸಾಂಪ್ರದಾಯಿಕ ಆಚರಣೆಗೆ ತೀರ್ಮಾನ ಮಾಡಲಾಗಿತ್ತು. ಉನ್ನತ ಮಟ್ಟದ ಸಮಿತಿಯಲ್ಲಿ ದಸರಾ ಉದ್ಘಾಟಕರ ಬಗ್ಗೆ ಚರ್ಚೆಯಾದಾಗ ನಾಡೋಜ ನಿಸಾರ್ ಅಹಮದ್ ಹೆಸರು ಹೇಳಿದಾಗ ಎಲ್ಲರೂ ಒಮ್ಮತದಿಂದ ಒಪ್ಪಿಕೊಂಡರು. ನಿಸಾರ್ ಅಹಮದ್ ದಸರಾ ಉದ್ಘಾಟನೆಗೆ ಆಗಮಿಸಿದ್ದು ನಮಗೆ ಗೌರವ ತಂದಿದೆ.ನಿಸಾರ್ ಅಹಮದ್ ವೈಚಾರಿಕ ಚಿಂತಕರು. ಎಲ್ಲರೂ ಸಮಾಜದಲ್ಲಿ ಪ್ರೀತಿ ಸಹಬಾಳ್ವೆಯಿಂದ ಬದುಕಬೇಕು ಎಂದು ಅಂದುಕೊಂಡವರು. ನಿಸಾರ್ ಅಹಮದ್ ಜೊತೆ ನನಗೆ ಹಲವು ವರ್ಷಗಳ ಒಡನಾಟವಿದೆ. ಕನ್ನಡ ಕಾವಲು ಸಮಿತಿ ಅಧ್ಯಕ್ಷರಾದಾಗ ಹಲವು ಸಾಹಿತಿಗಳ ಒಡನಾಟ ಬಂತು. ಕರ್ನಾಟಕ ಕಾವಲು ಪಡೆ ಸಮಿತಿ ಅಧ್ಯಕ್ಷ ರನ್ನಾಗಿ ಆಯ್ಕೆ ಮಾಡಿದಾಗ ನಾನು ಯಾಕೆ ಎಂದು ರಾಮಕೃಷ್ಣ ಹೆಗಡೆ ಅವರನ್ನು ಕೇಳಿದೆ. ಇಲ್ಲ ನೀನು ಮಾಡು ಎಂದರು. ಒಂದು ವರ್ಷ ಸುಬ್ಬಯ್ಯ ಪುರಾಣಿಕ್, ಕೆ.ವಿ.ಶಂಕರೇಗೌಡ, ಕಾದ್ರಿ ಶಾಮಣ್ಣ, ದೇವನೂರು ಮಹದೇವ, ನಿಸಾರ್ ಅಹಮದ್ ರಂತಹ ಘಟಾನುಘಟಿ ಸಾಹಿತಿಗಳೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿತು. ಮೊದಲಿನಿಂದಲೂ ಕನ್ನಡ ನಾಡು, ನುಡಿಯ ಬಗ್ಗೆ ಅಭಿಮಾನ ಪ್ರೀತಿ ಇತ್ತು. ಇವರ ಸಹವಾಸ ಮಾಡಿದ ಮೇಲೆ ಮತ್ತಷ್ಟು ಸಾಹಿತ್ಯಾಭಿಮಾನ ಬೆಳೆಯಿತು. ಆದರೆ ಸಿಂಹನ ರೀತಿ ಬರೆಯಲು ಹೋಗಲಿಲ್ಲ ಎಂದು ಪ್ರತಾಪ್ ಸಿಂಹ ಕಾಲೆಳೆದರು. ಸಿಂಹ ಹೇಳಿದರು ನಾನು ಮೇಲಿನಿಂದ ಒರಟ ಮನಸ್ಸಿನಿಂದ ಮೃದು ಎಂದು. ಸರಿಯಾಗಿ ಗಮನಿಸಿದ್ದೀರಿ ಎಂದು ಪ್ರತಾಪ್ ಸಿಂಹ ಹೇಳಿಕೆಯನ್ನು ಪುರಸ್ಕರಿಸಿದರು.

ನಿಸಾರ್ ಅಹಮದ್ ಹೊರಗೆ ಮಾತ್ರ ಅಲ್ಲ. ಒಳಗಡಯೂ ಸೌಮ್ಯ ವೇ. ಅವರು ದಸರಾ ಮಹೋತ್ಸವ ಉದ್ಘಾಟಿಸಿರುವುದು ಹೆಮ್ಮೆಯ ವಿಚಾರ. ಅವರ ಮಾತೃ ಭಾಷೆ ಉರ್ದು ಆದರೂ ಕನ್ನಡ ಭಾಷೆಯ ಸಾಹಿತ್ಯ ದಲ್ಲಿ ಗುರುತಿಸಿಕೊಂಡರು. ಮೇರು ಕವಿಯಾಗಿರುವುದು ಅಸಾಧಾರಣ ಸಾಧನೆ. ವಿಜಯನಗರ ಸಾಮ್ರಾಜ್ಯ ದವರು ದಸರಾ ಆಚರಣೆ ಮಾಡುತ್ತಿದ್ದರು. ವಿಜಯನಗರ ಸಾಮ್ರಾಜ್ಯ ಪತನವಾದ ನಂತರ 1610 ರ ನಂತರ ಮೈಸೂರು ಅರಸರು ದಸರಾ ಆಚರಣೆಯನ್ನು ಆರಂಭಿಸಿದರು. ಆಗ ಅಪ್ಪನ ಜತೆ ಬಂದು ಅಪ್ಪನ ಹೆಗಲ ಮೇಲೆ ಕುಳಿತು ದಸರಾ ನೋಡಿದ್ದೇನೆ. ಈಗ 5 ವರ್ಷ ನನ್ನ ಆಡಳಿತದಲ್ಲಿ ದಸರಾ ಮಾಡಿದ್ದೇನೆ. ಇನ್ನು 5 ವರ್ಷ ದಸರಾ ಆಚರಿಸಲು ಅವಕಾಶ ಸಿಗುತ್ತೆ ಅಂತ ನಂಬಿಕೆ ಇಟ್ಟು ಕೊಂಡಿದ್ದೇನೆ. ಆಸೆ ವಿಶ್ವಾಸ ಇದೆ. ಜನರು ಆಶೀರ್ವಾದ ಮಾಡುತ್ತಾರೆ ಎಂದು ನಂಬಿದ್ದೇನೆ. ಸಿಂಹ ಅವರೇ ನೀವು ಜಿಟಿಡಿ ಅವರಂತೆ ನನಗೆ ವಿಶ್ ಮಾಡಿ ಎಂದರು. ಆಗಸ್ಟ್ 2ನೇ ವಾರದಿಂದ ಎಲ್ಲ ಕಡೆ ಮಳೆಯಾಗಿದೆ. ಆದರೆ ಎಲ್ಲ ಜಲಾಶಯಗಳು ಭರ್ತಿಯಾಗಿಲ್ಲ. ಮಳೆಯಿಲ್ಲದ ಕಾರಣ, ಜಲಾಶಯದಲ್ಲಿ ನೀರಿಲ್ಲದ ಕಾರಣ ರೈತರಿಗೆ ಭತ್ತ ಬೆಳೆಯಲು, ಕಬ್ಬು ಹಾಕಲು ನೀರು ಕೊಡಲು ಆಗಲಿಲ್ಲ ಅದಕ್ಕೆ ವಿಷಾದವಿದೆ.  ಕಾವೇರಿ ನಿರ್ವಹಣಾ ಮಂಡಳಿ ನಿರ್ಮಾಣ ಮಾಡಬೇಕು ಎಂದು ಸುಪ್ರೀಂ ಆದೇಶ ಮಾಡಿಲ್ಲ ಬದಲಿಗೆ ಪಾಸಿಂಗ್ ರಿಮಾರ್ಕ್ಸ್ ಮಾಡಿದೆ ಅಷ್ಟೇ. ಮಂಡಳಿ ರಚನೆಯಾಗಬಾರದು ಎಂದು ಮೊದಲಿನಿಂದಲೂ ವಾದ ಮಾಡುತ್ತಿದ್ದೇವೆ. ಈ ಬಗ್ಗೆ ವಕೀಲರೊಂದಿಗೆ ಮಾತನಾಡಿ ವಾದ ಮಂಡಿಸುತ್ತೇವೆ. ರೈತರ ಹಿತ ಕಾಪಾಡಲು ಸರ್ಕಾರ ಎಲ್ಲ ಕ್ರಮ ಕೈಗೊಳ್ಳಲಿದೆ. ರೈತರು ಆತಂಕ ಪಡಬೇಕಿಲ್ಲ. 73 ಲಕ್ಷ ಹೆಕ್ಟರ್‌ ನಲ್ಲಿ 60 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ ಭತ್ತದ ಭಿತ್ತನೆ ಕಡಿಮೆಯಾಗಿದೆ. ಹೆಚ್ಚು ಮಳೆ ಬರಲಿ ಜಲಾಶಯ ಭರ್ತಿಯಾಗಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ವೇದಿಕೆಯಲ್ಲಿ ನಿತ್ಯೋತ್ಸವ ಕವಿ ಪ್ರೊ.ನಿಸಾರ್ ಅಹಮದ್, ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ತನ್ವೀರ್ ಸೇಠ್, ಯು.ಟಿ.ಖಾದರ್, ಉಮಾಶ್ರೀ, ಸಂಸದರಾದ ಪ್ರತಾಪ್ ಸಿಂಹ, ಧ್ರುವ ನಾರಾಯಣ್, ಜಿಲ್ಲಾಧಿಕಾರಿ ಡಿ.ರಂದೀಪ್ ಮತ್ತಿತರರು ಉಪಸ್ಥಿತರಿದ್ದರು. (ಎಂ.ಎನ್,ಎಸ್.ಎಚ್)

Leave a Reply

comments

Related Articles

error: