ಪ್ರಮುಖ ಸುದ್ದಿಮೈಸೂರು

ಸಿನಿ ರಸಿಕರ ಮನಗೆದ್ದ ದಸರಾ ಚಲನಚಿತ್ರೋತ್ಸವಕ್ಕೆ ಚಾಲನೆ : ಚಿತ್ರರಂಗದ ಬೆಳವಣಿಗೆಗೆ ಸಿಎಂ ಅಪಾರ ಸಹಕಾರ ನೀಡಿದ್ದಾರೆ; ಉಮಾಶ್ರೀ

ಮೈಸೂರು,ಸೆ.21:- ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡವರನೇಕರು ಮೈಸೂರಿನ ಕಲಾಮಂದಿರದಲ್ಲಿ ಸೇರಿದ್ದರು. ಅವರನ್ನು ನೋಡಲೋಸುಗ ಅವರ ಅಭಿಮಾನಿಗಳು ಆಗಮಿಸಿದ್ದರು. ಇದರಿಂದ ಕಲಾಮಂದಿರ ತುಂಬೆಲ್ಲ ಸಾಸಿವೆಯೂ ಕೆಳಗೆ ಬೀಳದಷ್ಟು ಜನ ತುಂಬಿಕೊಂಡಿರುವುದು ಕಂಡು ಬಂತು. ಅದಕ್ಕೆ ಕಾರಣವೂ ಇತ್ತು ಯಾಕೆಂದರೆ ವಿಶ್ವವಿಖ್ಯಾತ ದಸರಾ ಮಹೋತ್ಸವ ಪ್ರಯುಕ್ತ ಸಿನಿರಸಿಕರ ಮನಗೆದ್ದ ದಸರಾ ಚಲನಚಿತ್ರೋತ್ಸವಕ್ಕೆ  ಗುರುವಾರ ಚಾಲನೆ ನೀಡಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ದಸರಾ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಮಾತನಾಡಿ ಚಲನಚಿತ್ರೋತ್ಸವದಲ್ಲಿ ವಿಶೇಷವಾದ ಚಿತ್ರಗಳನ್ನು ತರಲಾಗಿದೆ. ಉತ್ತಮ ಅಭಿರುಚಿಯ ಚಿತ್ರಗಳನ್ನು ವೀಕ್ಷಿಸಬೇಕಿದೆ. ಸಂಸ್ಕೃತಿಯ ತವರು ಮೈಸೂರಿನಲ್ಲಿ ಎಲ್ಲ ರೀತಿಯ ಕಲಾವಿದರು ಇದ್ದಾರೆ, ಕಲೆ, ಸಂಸ್ಕೃತಿ, ಚಿತ್ರರಂಗದ ಬೆಳವಣಿಗೆಗೆ ಸಿಎಂ ಅಪಾರ ಸಹಕಾರ ನೀಡಿದ್ದಾರೆ.                      ಚಿತ್ರೋದ್ಯಮದ ಎಲ್ಲಾ ರೀತಿಯ ಸಂಕಷ್ಟಗಳಿಗೂ ಮುಖ್ಯಮಂತ್ರಿಗಳು ಸ್ಪಂದಿಸಿ, ಉದ್ಯಮದ ಬೆಳವಣಿಗೆಗೆ ಶ್ರಮಿಸಿದ್ದಾರೆ. ಅಲ್ಲದೆ ಪ್ರಶಸ್ತಿಗಳ ನೀಡುವಿಕೆಯಲ್ಲೂ ಸಿಎಂ ಉತ್ತಮವಾದ ರೀತಿಯಲ್ಲಿ ಕೆಲಸ ಮಾಡಿದ್ದು, ರಾಜಕುಮಾರ್ ಅವರ ಜನ್ಮದಿನದಂದೇ ಪ್ರಶಸ್ತಿ ನೀಡಲು ಸಿಎಂ ಕ್ರಮವಹಿಸಿದ್ದಾರೆ. ಚಿತ್ರೋದ್ಯಮದಲ್ಲಿ ಕಲಾವಿದರು ಮಾತ್ರವಲ್ಲದೆ ಎಲ್ಲ ಕೆಲಸಗಾರರ ಅನುಕೂಲಕ್ಕಾಗಿ ಕ್ಷೇಮನಿಧಿಗೆ 10 ಕೋಟಿ ರೂ.ಗಳನ್ನು ಸಿಎಂ ನೀಡಿದ್ದಾರೆ ಎಂದರು.

ಈ ಸಂದರ್ಭ ಉಪಸ್ಥಿತರಿದ್ದ ಕರ್ನಾಟಕ  ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರರಂಗಕ್ಕೆ ಎಲ್ಲ ರೀತಿ ಕೊಡುಗೆ ನೀಡಿದ್ದಾರೆ. ಆದರೂ ನವೆಂಬರ್ ತಿಂಗಳಲ್ಲಿ ಚಿತ್ರನಗರಿಗೆ ಶಂಕುಸ್ಥಾಪನೆ ನೆರವೇರಿಸುವ ಜತೆಗೆ  ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಜಾಗದ ಸಮಸ್ಯೆ ಬಗೆಹರಿಸಿ ಶಂಕುಸ್ಥಾಪನೆ ಮಾಡುವಂತೆ ಕೋರಲಾಗಿದ್ದು. ಇದಕ್ಕೆ ಸಿಎಂ ಅವರು ಸಕಾರಾತ್ಮಕ ರೀತಿಯಲ್ಲಿ ಸ್ಪಂದಿಸಿದ್ದಾರೆ ಎಂದರು.  ನಿರ್ದೇಶಕ  ಪಿ. ಶೇಷಾದ್ರಿ ಮಾತನಾಡಿ, ವಿಶ್ವದಲ್ಲಿ ಹೆಚ್ಚು ಚಿತ್ರಗಳ ನಿರ್ಮಾಣ ಮಾಡುವಲ್ಲಿ ಭಾರತ ಮುಂದಿದೆ. ದೇಶದಲ್ಲಿ 5ನೇ ಸ್ಥಾನದಲ್ಲಿ ಕರ್ನಾಟಕ ಸ್ಥಾನಗಳಿಸಿದೆ. ಅನೇಕ ಜನಮನ್ನಣೆ ಪಡೆದ ಚಿತ್ರಗಳ ಪ್ರದರ್ಶನ ಕಾಣುತ್ತಿದೆ. ಚಿತ್ರಗಳು ಮನರಂಜನೆ ಜತೆಗೆ ಮನೋವಿಕಾಸಕ್ಕೂ ಕಾರಣವಾಗಬೇಕಿದೆ ಎಂದು ತಿಳಿಸಿದರು.  ಸಮಾರಂಭದ ಉದ್ಘಾಟನೆಗೂ ಮುನ್ನ ಇತ್ತೀಚೆಗೆ ನಿಧನರಾದ ಚಿತ್ರರಂಗದ ಹಿರಿಯ ಕಲಾವಿದರಾದ ಸುದರ್ಶನ್, ಲಂಬೂ ನಾಗೇಶ್ ಹಾಗೂ ಬಿ.ವಿ.ರಾಧಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ  ನಿರ್ದೇಶಕ ರಾದ ಪಿ.ಶೇಷಾದ್ರಿ, ಸುಧಾಕರ್ ಬನ್ನಂಜೆ, ನಂದ ಕಿಶೋರ್,  ನಟಿ ರಚಿತಾ ರಾಮ್,ಸಂಭ್ರಮ ಗೌಡ,  ನಟ ಆದಿತ್ಯ, ಶಶಿರಾಜ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ತೆರೆಕಂಡು ಜನಮನ್ನಣೆ ಪಡೆದ “ಒಂದು ಮೊಟ್ಟೆಯ ಕಥೆ” ಚಿತ್ರವನ್ನು ಪ್ರದರ್ಶಿಸಲಾಯಿತು.

ಈ ಸಂದರ್ಭ ಶಾಸಕ ಎಂ.ಕೆ.ಸೋಮಶೇಖರ್, ಸಂಸದ ಧ್ರುವ ನಾರಾಯಣ್ ಹಾಗೂ ಚಿತ್ರರಂಗದ ಅನೇಕ ಗಣ್ಯರು ಉಪಸ್ಥಿತರಿದ್ದರು. (ಎಂ.ಎನ್,ಎಸ್.ಎಚ್)

Leave a Reply

comments

Related Articles

error: