ಮೈಸೂರು

ಭಾಷೆ ಬೆಳೆಯಲು ಸಮುದಾಯದ ಪಾತ್ರ ಹಿರಿದು : ಡಾ.ಎಂ.ಆರ್.ರವಿ

ಭಾಷೆಗೆ ಶ್ರೇಷ್ಠತೆ ಬರಲು, ಅದನ್ನು ಉಳಿಸುವಂತಾಗಲು ಆ ಭಾಷೆಯನ್ನು ಬಳಸುವ ಸಮುದಾಯ ಮಹತ್ತರ ಪಾತ್ರ ವಹಿಸಬೇಕು  ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ  ಪ್ರಧಾನ ವ್ಯವಸ್ಥಾಪಕ ಡಾ.ಎಂ.ಆರ್.ರವಿ ತಿಳಿಸಿದರು.

ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಬುಧವಾರ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡು ಡಾ.ಎಂ.ಅರ್.ರವಿ ಮಾತನಾಡಿದರು. ಸಂಸ್ಕೃತಿ ಮನುಷ್ಯ ಬೆಳೆಯಲು ತುಂಬಾ ಮುಖ್ಯವಾಗುತ್ತದೆ. ನಮ್ಮನ್ನು ನಾವೇನು ಎನ್ನುವದನ್ನು ಅರ್ಥ ಮಾಡಿಸುತ್ತದೆ. ಇಂದಿನ ಯುವ ಜನತೆ ನಮ್ಮ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಅದಕ್ಕಾಗಿ ಅವರೇನೆಂದು ಅವರಿಗೇ ಅರ್ಥವಾಗುತ್ತಿಲ್ಲ. ಯುವಜನತೆ ಇತಿಹಾಸವನ್ನು ಮರೆತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಕನ್ನಡಕ್ಕೆ 2ಸಾವಿರ ವರ್ಷಕ್ಕಿಂತಲೂ ಹಳೆಯ ಇತಿಹಾಸವಿದೆ. ವಚನಕಾರರು, ಶರಣರು ಕನ್ನಡ ಭಾಷೆ ಬೆಳೆಸಲು ಮತ್ತು ಪಸರಿಸಲು ಹೆಚ್ಚು ಶ್ರಮಿಸಿದ್ದಾರೆ. ಕನ್ನಡ ನಾಡು ಆಶ್ರಯವಿಲ್ಲದವರಿಗೆ ಆಶ್ರಯ ನೀಡಿದೆ. ಜಲ ನೀಡಿದೆ. ಇಂತಹ ನಮ್ಮ ನಾಡು ಪ್ರಸಿದ್ಧ ಸಂಸ್ಕೃತಿಯುಳ್ಳ ರಾಜ್ಯ. ನಾವಾಡುವ ಭಾಷೆ ನಮ್ಮ ಸಂಸ್ಕೃತಿಯ ಮೇಲೆ ಪರಿಣಾಮ ಬೀರಲಿದೆ. ಇಂಗ್ಲಿಷ್ ಮಾತನಾಡಿದರೆ ಮಾತ್ರ ಅವರು ತಿಳುವಳಿಕಸ್ಥರು ಎಂಬ ಭಾವನೆ ಜನರಲ್ಲಿದೆ. ಆದರೆ ಅದು ತಪ್ಪು. ಭಾಷೆಯನ್ನು ಭಾಷೆಯಾಗಿಯೇ ನೋಡಬೇಕೇ ವಿನಃ ಹಿರಿಮೆ-ಗರಿಮೆ ಕೊಡಬಾರದು. ಮಾತೃಭಾಷೆಯಲ್ಲಿ ಸಿಗುವ ಖುಷಿ ಬೇರಾವುದರಲ್ಲೂ ಸಿಗಲ್ಲ. ಯುವ ಜನತೆಯಲ್ಲಿ ಆತ್ಮವಿಶ್ವಾಸದ ಕೊರತೆ ಇದೆ. ತಾಯಿ-ತಾಯ್ನಾಡು-ಮಾತೃಭಾಷೆ ಈ ಮೂರರ ಮಹತ್ವ ಅರಿತಾಗ ಮಾತ್ರ  ಆತ್ಮವಿಶ್ವಾಸ ವೃದ್ಧಿಯಾಗಲಿದೆ ಎಂದರು.

ಒಂದು ವ್ಯಕ್ತಿತ್ವ ನಿರ್ಮಾಣ ಅಥವಾ ಸಾಂಸ್ಕೃತಿಕ ಅಭಿವೃದ್ಧಿ ದೃಷ್ಟಿಯಲ್ಲಿ ನೋಡಿದಾಗ ಮಾತ್ರ ಮಾತೃಭಾಷೆ ಅತ್ಯಂತ ಪರಿಣಾಮಕಾರಿಯಾಗಲಿದೆ ಎಂದು ತಿಳಿಸಿದರು. ಏಕೀಕರಣ ಕುರಿತು ಮಾತನಾಡಿದ ಅವರು ನಗರದಲ್ಲಿರುವವರಿಗೆ ಗಡಿಯಲ್ಲಿರುವವರ ಬವಣೆ ತಿಳಿದಿರುವುದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕಿ ಡಾ.ಹೆಚ್.ಆರ್.ದಮಯಂತಿ, ಮಹಾರಾಣಿ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಬಿ.ಟಿ.ವಿಜಯ್ ಮತ್ತಿತರರು ಉಪಸ್ಥಿತರಿದ್ದರು.

 

Leave a Reply

comments

Related Articles

error: