
ಪ್ರಮುಖ ಸುದ್ದಿವಿದೇಶ
ಟ್ರಂಪ್ ‘ಬೊಗಳುವ ನಾಯಿ’ ಎಂದ ಉತ್ತರ ಕೊರಿಯಾ ವಿದೇಶಾಂಗ ಸಚಿವ!
ನ್ಯೂಯಾರ್ಕ್, ಸೆ.21 : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ‘ಬೊಗಳುವ ನಾಯಿ’ಯಂತೆ ಎಂದು ಉತ್ತರ ಕೊರಿಯಾ ವಿದೇಶಾಂಗ ಸಚಿವ ರಿ ಯಾಂಗ್ ಹೋ ಅವರು ಅಣಕವಾಡಿದ್ದಾರೆ!
ಮೊನ್ನೆಯಷ್ಟೇ ಹೇಳಿಕೆ ನೀಡಿದ್ದ ಡೊನಾಲ್ಡ್ ಟ್ರಂಪ್ ಅವರು, “ಉತ್ತರ ಕೊರಿಯಾ ದೇಶವು ಅಮೆರಿಕ ಮತ್ತು ಮಿತ್ರದೇಶಗಳನ್ನು ಅಣ್ವಸ್ತ್ರಗಳನ್ನು ಮುಂದಿಟ್ಟುಕೊಂಡು ಬೆದರಿಸಿದ್ದೇ ಆದಲ್ಲಿ ಉತ್ತರ ಕೊರಿಯಾವನ್ನು ಸಂಪೂರ್ಣವಾಗಿ ನಾಶಗೈಯ್ಯುವುದಾಗಿ” ಎಚ್ಚರಿಕೆ ನೀಡಿದ್ದರು. ಇದು ಮಾತ್ರವಲ್ಲದೆ ಉತ್ತರ ಕೊರಿಯಾದ ನಾಯಕ್ ಕಿಂಗ್ ಜೊಂಗ್ ಉನ್ ಅವರನ್ನು ರಾಕೆಟ್ ಮ್ಯಾನ್ ಎಂದು ಅಣಕವಾಡಿದ್ದರು. ಆದರೆ ಈ ಹೇಳಿಕೆಗೆ ತಿರುಗೇಟು ನೀಡಿರುವ ಉತ್ತರ ಕೊರಿಯಾ ಸಚಿವ, ಟ್ರಂಪ್ ಅವರ ಹೇಳಿಕೆ ಬೊಗಳುವ ನಾಯಿಯ ಸದ್ದಿನಂತೆ ಎಂದು ಪ್ರಚೋದನಕಾರಿ ಮಾತುಗಳನ್ನಾಡಿದೆ.
ನ್ಯೂಯಾರ್ಕ್ ನಗರದಲ್ಲಿರುವ ವಿಶ್ವಸಂಸ್ಥೆಯ ಮುಖ್ಯ ಕಾರ್ಯಾಲಯದೆದುರು ವರದಿಗಾರರೊಂದಿಗೆ ಮಾತನಾಡಿದ ಉತ್ತರ ಕೊರಿಯಾ ವಿದೇಶಾಂಗ ಸಚಿವ, ‘ನಾಯಿಗಳು ಬೊಗಳಿದರೂ ಪೆರೇಡ್ ಮುಂದುವರಿಯುವುದು’ ಎಂಬ ಮಾತೊಂದಿದೆ ಎಂದು ಹೇಳುವ ಮೂಲಕ ಟ್ರಂಪ್ ಮಾತುಗಳನ್ನು ಉತ್ತರ ಕೊರಿಯಾ ಗಂಭೀರವಾಗಿ ಪರಿಗಣಿಸಿಲ್ಲ ಎಂಬುದನ್ನು ಸಾರಿದರು.
ಉತ್ತರ ಕೊರಿಯಾ ದೇಶವು ಸೆಪ್ಟೆಂಬರ್ ಮೊದಲ ವಾರದಲ್ಲಿ ಆರನೇ ಮತ್ತು ಅತಿದೊಡ್ಡ ಅಣುಪರೀಕ್ಷೆಯನ್ನು ನಡೆಸಿ ಹಲವಾರು ಕ್ಷಿಪಣಿಗಳನ್ನು ಉಡಾಯಿಸಿತ್ತು. ಈ ಪರೀಕ್ಷೆಯನ್ನು ವಿಶ್ವದ ಹಲವು ರಾಷ್ಟ್ರಗಳು ಖಂಡಿಸಿದ್ದವು. ಇದಾದ ಬಳಿಕ ವಾಷಿಂಗ್ಟನ್ ಮತ್ತು ಪ್ಯೊಗ್ಯಾಂಗ್ ನಡುವೆ ವಾಕ್ಸಮರ ಮುಂದುವರಿದಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಹಲವಾರು ಬಾರಿ ನೀಡುತ್ತಿರುವ ಎಚ್ಚರಿಕೆಯನ್ನು ಉತ್ತರ ಕೊರಿಯಾ ಕಡೆಗಣಿಸುತ್ತಲೇ ಇದೆ.
(ಎನ್.ಬಿ)