ಪ್ರಮುಖ ಸುದ್ದಿಮೈಸೂರು

ಬಾಯಲ್ಲಿ ನೀರೂರಿಸಲಿದೆ ಬಗೆ ಬಗೆಯ ಖಾದ್ಯಗಳು : ಜನಪ್ರಿಯ ಆಹಾರ ಮೇಳಕ್ಕೆ ಸಚಿವ ಯು.ಟಿ.ಖಾದರ್ ಚಾಲನೆ

ಮೈಸೂರು,ಸೆ.21:- ಬೃಹತ್ ಮರಗಳು, ಮರಗಳ ನೆರಳಿನಲ್ಲಿ ಘಮ್ಮೆನ್ನುವ ಸುವಾಸನೆ ಹೊಮ್ಮಿಸುವ ಬಾಯಲ್ಲಿ ನೀರೂರಿಸುವ ಖಾದ್ಯಗಳು ಸರಿಯಾಗಿ ಹೊಟ್ಟೆ ಚುರ್ರೆನ್ನುವ ವೇಳೆ  ಮೈಸೂರಿನ ಜನತೆಯಷ್ಟೇ ಅಲ್ಲ ದೇಶ,ವಿದೇಶಗಳಿಂದ ಬಂದಂತಹ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದವು.

ಇವೆಲ್ಲ ಕಂಡು ಬಂದಿದ್ದು ನಗರದ ಸ್ಕೌಟ್ಸ್  ಆ್ಯಂಡ್ ಗೈಡ್ಸ್ ಮೈದಾನದಲ್ಲಿ . ಗುರುವಾರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖಾ ಸಚಿವ ಯು.ಟಿ.ಖಾದರ್ ದಸರಾ ಮಹೋತ್ಸವ ಪ್ರಯುಕ್ತ ನಡೆಸಲಾಗುವ ಜನಪ್ರಿಯ ಆಹಾರ ಮೇಳಕ್ಕೆ ಬಂಬೂವಿನಲ್ಲಿ ಮಸಾಲ ತುಂಬಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಇಲ್ಲಿ ಶುಚಿ ಮತ್ತು ರುಚಿಯಾದ ಆಹಾರ ಜನತೆಗೆ ಲಭ್ಯವಿದೆ. ಹಾಡಿಗಳಿಂದ ಬಂದಂತಹ ಜನರು ಅವರ ಖಾದ್ಯಗಳನ್ನು ನಿಮಗೆ ಪರಿಚಯಿಸುತ್ತಿದ್ದಾರೆ. ಇದು ಆರೋಗ್ಯಪೂರ್ಣ ಆಹಾರವಾಗಿದೆ. ಜನತೆ ಈಗಾಗಲೇ ಈ ಆಹಾರಕ್ಕೆ ಮನಸೋತಿರುವುದು ಇಲ್ಲಿ ಸೇರಿರುವ ಜನಸ್ತೋಮ ನೋಡಿದರೇ ತಿಳಿದುಬರಲಿದೆ ಎಂದರು.

ಆಹಾರ ಮೇಳಕ್ಕೆ ಆಗಮಿಸಿದ ಯು.ಟಿ.ಖಾದರ್ ಅವರನ್ನು ಸಾಂಸ್ಕೃತಿಕ ಕಲಾತಂಡಗಳಾದ ಕಂಸಾಳೆ, ಡೊಳ್ಳುಕುಣಿತ, ನಂದಿ ಧ್ವಜ, ಪೂಜಾ ಕುಣಿತದೊಂದಿಗೆ ದಸರಾ ಆಹಾರ ಮೇಳ ಉಪ ಸಮಿತಿ ವತಿಯಿಂದ ಸ್ವಾಗತಿಸಲಾಯಿತು. ‌ಈ ಸಂದರ್ಭ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಡಾ.ಕಾ.ರಾಮೇಶ್ವರಪ್ಪ, ,ಉಪ ಮಹಾಪೌರರಾದ ರತ್ನ ಲಕ್ಷಣ್, ತಾ.ಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಸಚಿವ ತನ್ವೀರ್ ಸೇಠ್ ಮತ್ತಿತರರು ಉಪಸ್ಥಿತರಿದ್ದರು

ನಗರದ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ಆಯೋಜಿಸಲಾಗಿರುವ  ಆಹಾರ ಮೇಳದಲ್ಲಿ 93 ಮಳಿಗೆಗಳು ಮತ್ತು ಲಲಿತಾ ಮಹಲ್ ಮುಡಾ ಪಾರ್ಕ್ ನಲ್ಲಿ ಆಯೋಜಿಸಲಾಗಿರುವ ಆಹಾರ ಮೇಳದಲ್ಲಿ 75 ಮಳಿಗೆಗಳಿವೆ.  ಇಲ್ಲಿ ಬಂಬೂ ಬಿರಿಯಾನಿ, ಮರಗೆಣಸು ಸೇರಿದಂತೆ ವಿವಿಧ ರೀತಿಯ ರುಚಿರುಚಿಯಾದ ಖಾದ್ಯಗಳು ಲಭಿಸಲಿದೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: