
ಪ್ರಮುಖ ಸುದ್ದಿಮೈಸೂರು
ಮಹಿಳೆಯರು ಒಗ್ಗಟ್ಟಿನಿಂದ ಮುಖ್ಯ ವಾಹಿನಿಗೆ ಬರುವ ಅವಶ್ಯಕತೆಯಿದೆ : ಸಚಿವೆ ಉಮಾಶ್ರೀ
ಮೈಸೂರು, ಸೆ.21 : ಸವಾಲಿನ ಸಮಾಜದಲ್ಲಿ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳು, ಮಹಿಳೆಯರು ಒಗ್ಗೂಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ಮಹಿಳೆಯರಿಗೆ ಕಿವಿ ಮಾತು ಹೇಳಿದರು.
ಜೆ.ಕೆ.ಮೈದಾನದಲ್ಲಿ ಗುರುವಾರ ಮಹಿಳಾ ಮತ್ತು ಮಕ್ಕಳ ದಸರಾ ವೇದಿಕೆಯ ಕಾರ್ಯಕ್ರಮವನ್ನು ಡೋಲು ಬಡಿಯುವ ಮೂಲಕ ಚಾಲನೆ ನೀಡಿದ ಅವರು, ಕ್ಷಣ ಮಾತ್ರ ರೋಷ, ಆವೇಶ,ಮಮತೆ, ಸಹನೆ ಹಾಗೂ ತ್ಯಾಗ ಹೊಂದಾಣಿಕೆ ಗುಣವಿರುವ ಮಹಿಳೆ, ಸಮಾನತೆ ಪಡೆದುಕೊಳ್ಳುವಲ್ಲಿ ವಿಫಲವಾಗಿದ್ದಾಳೆ. ತಮ್ಮ ತನವನ್ನು ಉಳಿಸಿಕೊಂಡು ಸಂಸ್ಕೃತಿ ಚೌಕಟ್ಟಿನಲ್ಲಿ ಬಂಧಿತಳಾದರು ಸ್ವಾತಂತ್ರ್ಯದ ಹಕ್ಕನ್ನು ಪಡೆಯುವ ಬಗ್ಗೆ ಚಿಂತನೆಯನ್ನೇ ನಡೆಸುವುದಿಲ್ಲ , ಅಲ್ಲದೇ ದುಡಿಯುವ ದುಡಿಮೆಯು ನಮ್ಮದಲ್ಲ, ಇದು ಭಾರತೀಯ ನಾರಿಯರ ಸ್ಥಿತಿಗತಿಗಳು ಎಂದು ಮಾರ್ಮಿಕವಾಗಿ ನುಡಿದರು.
ಮಹಿಳೆಯಲ್ಲಿ ಚಿಂತನೆ ಬದಲಾಗಬೇಕು, ಕುಟುಂಬ ನಿರ್ವಹಿಸಬೇಕಾದ ಮಹಿಳೆ ಮೊದಲು ಗಟ್ಟಿಯಾಗಬೇಕು. ಈ ದಿಸೆಯಲ್ಲಿ ಆಹಾರ, ಯೋಗ ಧ್ಯಾನ, ವಿಷಯಾಸಕ್ತಿ ಬೆಳೆಸಿಕೊಳ್ಳಿ. ನಿಮ್ಮ ದೇಹ ಮನಸ್ಸು ಸದೃಢವಾಗಲಿ, ಓದುವುದು, ಗೋಷ್ಠಿಗಳಲ್ಲಿ ಪಾಲ್ಗೊಂಡು ವಿಚಾರ ಮಂಥನ ಮಾಡುವ ಮೂಲಕ ಸಮಾಜಮುಖಿಯಾಗಿ ಬೆಳೆಯಬೇಕು ಎಂದ ಅವರು, ಮಾಜಿ ಸಿಎಂ. ಎಸ್.ಎಂ.ಕೃಷ್ಣ ಅವಧಿಯಲ್ಲಿ ಸ್ಥಾಪಿತವಾದ ಸ್ತ್ರೀಶಕ್ತಿ ಸಂಘಗಳಿಂದ ಇಂದು ಮಹಿಳೆಯರು ಸ್ವಲ್ಪಮಟ್ಟಿಗಾದರೂ ಆರ್ಥಿಕವಾಗಿ ಸದೃಢರಾಗಿದ್ದಾರೆ ಎಂದು ಶ್ಲಾಘಿಸಿದರು.
ಮಹಿಳೆಯರು ಇರುವ ಸೌಲಭ್ಯಗಳನ್ನು ಬಳಸಿಕೊಳ್ಳಲು ವಿಫಲರಾಗಿದ್ದಾರೆ. ಗ್ರಾಮ ಸಭೆಗಳಲ್ಲಿ ಪಾಲ್ಗೊಳ್ಳುವುದರಲ್ಲಿಯೂ ಮಹಿಳೆಯರು ಸಂಕೋಚ ವ್ಯಕ್ತಪಡಿಸುತ್ತಿರುವುದು ತರವಲ್ಲ. ಪೌಷ್ಠಿಕತೆ, ಆಹಾರ ಪದ್ಧತಿ, ಸ್ತನ್ಯಪಾನ ಜಾಗೃತಿ ಮೂಡಿಸಿ, ಮೂಢನಂಬಿಕೆಗಳನ್ನು ತೊರೆಯಬೇಕು ಎಂದರು. ನಮ್ಮ ಪ್ರಯತ್ನದ ಮೇಲೆಯೇ ಪ್ರತಿಯೊಂದಕ್ಕೂ ಫಲ ಸಿಗಲಿದ್ದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಸಕ್ರಿಯರಾಗಿದ್ದು . ಜಾತಿ, ಧರ್ಮ, ಮೂಢನಂಬಿಕೆ ಮೆಟ್ಟಿ ನಿಲ್ಲಬೇಕು.ಮಗು ಹುಟ್ಟಿದ ಮೇಲೆ ಅಪೌಷ್ಠಿಕತೆ ತಡೆಯುವ ಬದಲು ಗರ್ಭಾವಸ್ಥೆಯಲ್ಲಿಯೇ ಜಾಗೃತಿ ವಹಿಸಿ ಎಂದು ಕರೆ ನೀಡಿದರು. ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿದ್ದ ಮಕ್ಕಳು ಹಿಂದೆ 2.64 ಇದ್ದದು 0.5ಗೆ ಇಳಿಕೆಯಾಗಿದೆ.
302 ಕೋಟಿ ರೂಪಾಯಿಗಳನ್ನು ಸ್ತ್ರೀ ಶಕ್ತಿ ಸಂಘಗಳಿಗೆ ಮೀಸಲಿರಿಸಲಿದ್ದು, ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ವಿಶೇಷ ಮಾತೃಪೂರ್ಣ ಕಾರ್ಯಕ್ರಮಕ್ಕೆ ಸಿಎಂ ಚಾಲನೆ ನೀಡುವರು. ಸವಾಲುಗಳ ಮಧ್ಯೆಯೇ ಹೋರಾಟ ನಡಿಸಿಕೊಂಡು ಪಡೆದುಕೊಳ್ಳಬೇಕು, ಆಗಲ್ಲ ಎನ್ನುವುದು ಮಹಿಳಾ ಡೈರಿಯಲ್ಲಿಯೇ ಇರಬಾರದು ಎಂದು ಆತ್ಮವಿಶ್ವಾಸದ ನುಡಿಗಳನ್ನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಳಿಗೆಗಳಲ್ಲಿ ಒಂದು ಸುತ್ತು ಹಾಕುವ ಮೂಲಕ ವ್ಯಾಪಾರಿಗಳೊಂದಿಗೆ ಕುಶಲೋಪರಿಯನ್ನು ಸಚಿವೆ ನಡೆಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ದಸರಾ ಅಧ್ಯಕ್ಷೆ ಲತಾ ಮೋಹನ್, ಉಪಾಧ್ಯಕ್ಷರಾದ ರಾಣಿ ಪ್ರಭಾ, ಸುಶೀಲ ಮರೀಗೌಡ, ಭಾರತಿ ಶಂಕರ್ ಸೇರಿದಂತೆ 37ಕ್ಕೂ ಅಧಿಕ ಸದಸ್ಯರು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. (ಕೆ.ಎಂ.ಆರ್)